ಕಾರವಾರ: ಭಾರತದ ವಿಜ್ಞಾನಿಗಳು ಕೈಗೊಂಡ ಚಂದ್ರ ಗ್ರಹವನ್ನು ಅರಿಯುವ ಚಂದ್ರಯಾನ-3 ಯೋಜನೆ ಯಶಸ್ವಿಯಾಗುವತ್ತ ಹೆಜ್ಜೆ ಇಡುತ್ತದೆ.
ಚಂದ್ರಯಾನ 3 ದಲ್ಲಿ ಮುರ್ಡೇಶ್ವರದ ಆಕಾಶ ಶೆಟ್ಟಿ ಅವರ ಪಾತ್ರ ಇರುವ ಬಗ್ಗೆಯೂ ಈ ಹಿಂದೆʼವಿಜಯವಾಣಿ' ವರದಿ ಪ್ರಕಟಿಸಿತ್ತು. ಉತ್ತರ ಕನ್ನಡ ಜಿಲ್ಲೆಯ ಇನ್ನೊಬ್ಬರು, ಕಾರವಾರ ಮೂಲದ ಕಂಪ್ಯೂಟರ್‌ಸೈನ್ಸ್ ಇಂಜಿನಿಯರ್ ಒಬ್ಬರೂ ಚಂದ್ರಯಾನ ಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಭಾರತೀಯ ಭಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯಲ್ಲಿ ಮೈಕ್ರೋಸ್ಯಾಟ್-2ಎ/2ಬಿ ಗಾಗಿ ಡೆಪ್ಯೂಟಿ ಪ್ರಾಜೆಕ್ಟ್ ಡೈರೆಕ್ಟರ್ (ಮಿಷನ್ ಸಾಫ್ಟ್ವೇರ್)ಆಗಿ ಕಾರವಾರ ಮೂಲದ ಡಾ.ಜಗದೀಶಚಂದ್ರ ಎಸ್.ನಾಯ್ಕ ಅವರು ಚಂದ್ರಯಾನ ಯೋಜನೆಲ್ಲಿ ಕಾರ್ಯನಿರ್ವಹಿಸಿದ್ದಾರೆ.
ಬಾಡದ ನ್ಯೂ ಹೈಸ್ಕೂಲ್‌ನಲ್ಲಿ ತಮ್ಮ ಪ್ರಾಥಮಿಕ, ಪ್ರೌಢ ಶಿಕ್ಷಣವನ್ನು ಮುಗಿಸಿದ ಜಗದೀಶಚಂದ್ರ ನಾಯ್ಕ, ಸುಳ್ಯದಿಂದ ಇಲೆಕ್ಟ್ರಾನಿಕ್ಸ್ ಮತ್ತು ಕಾಮ್ಯುನಿಕೇಷನ್‌ನಲ್ಲಿ ಪದವಿಯನ್ನು ಪಡೆದರು.
ನಂತರ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಕಂಪ್ಯೂಟರ್ ಸೈನ್ಸ್ ನಲ್ಲಿ ಸ್ನಾತಕೋತ್ತರ ಪದವಿ(ಎಂ.ಟೆಕ್.)ಮಾಡಿದರು. ಇಮೇಜ್ ಪ್ರೋಸೆಸಿಂಗ್ ನಲ್ಲಿ ಪಿಎಚ್‌ಡಿ ಮಾಡಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ.
ಇದನ್ನೂ ಓದಿ:ಚಂದ್ರಯಾನ-3 ತಂಡದಲ್ಲಿ ಉತ್ತರ ಕನ್ನಡದ ಇಂಜಿನಿಯರ್
ನಂತರ ಇಸ್ರೋದಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು ಉಪಗ್ರಹ ಉಡಾವಣೆ ಮತ್ತು ಡಾಟಾ ಸಂಸ್ಕರಣೆಯನ್ನು ಒಳಗೊಂಡ ವಿವಿಧ ಯೋಜನೆಗಳಿಗೆ ಗಣನೀಯ ಕೊಡುಗೆಗಳನ್ನು ನೀಡಿದ್ದಾರೆ.
ಪ್ರಸ್ತುತ ಚಂದ್ರಯಾನ-3 ದಲ್ಲಿ ಹೈಸಿಸ್/ರಿಸ್ಟಾ -2ಎ ಸ್ಪೇಸ್ ಕ್ರಾಫ್ಟ್ ಇಡೀಮಿಷನ್ ಮತ್ತು ಚೆಕ್ ಔಟ್ ಸಾಫ್ಟ್ವೇರ್ ಗ್ರೂಪ್‌ನ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಿದ್ದರು.
ಜಗತ್ತು ನಿಬ್ಬೆರಗಾಗಿಸುವ ಚಂದ್ರಯಾನ-3 ದಲ್ಲಿ ಕಾರವಾರ ಮೂಲದವರ ಕೊಡುಗೆ ಇರುವುದು ಹೆಮ್ಮೆಯ ಸಂಗತಿ ಎಂದು ನ್ಯೂ
ಹೈಸ್ಕೂಲ್‌ನ ನಾಗರಾಜ ಜೋಶಿ ಹೇಳಿದ್ದಾರೆ.