ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಯಲ್ಲಿ ಪ್ರತಿಷ್ಠಾಪಿಸಿದ್ದ ಗೌರಿ ಮೂರ್ತಿ ವಿಸರ್ಜನೆ ಹಿನ್ನೆಲೆಯಲ್ಲಿ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವದಲ್ಲಿ ಅಂತರಗಂಗೆಯ ಗೌರಿಯನ್ನು ಮಡುವಿಗೆಮೆರವಣಿಗೆಯ ಮೂಲಕ ಕೊಂಡೊಯ್ಯಲಾಯಿತು. ಚಂದ್ರಶೇಖರ್, ನಾಗೇಶ್, ಕೆ.ವಿ ಮಾದೇಶ್, ಮಲ್ಲಿಕಾರ್ಜುನ, ಕರವೀರಸ್ವಾಮಿ ಇತರರು ಇದ್ದರು.  
ಜಿಲ್ಲೆ

ಮಹದೇಶ್ವರ ಬೆಟ್ಟದಲ್ಲಿ ಗೌರಿ ಮೂರ್ತಿ ವಿಸರ್ಜನೆ

ಹನೂರು: ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಯಲ್ಲಿ ಗೌರಿ ಹಬ್ಬದಂದು ಗೌರಿ ಪ್ರತೀಕವಾಗಿ ಪ್ರತಿಷ್ಠಾಪಿಸಲಾಗಿದ್ದ ಕಳಸದಲ್ಲಿನ ಗಂಗೆಗೆ ಶುಕ್ರವಾರ ರಾತ್ರಿ ವಿಶೇಷ ಪೂಜೆ ನೆರವೇರಿಸಿ ಅಂತರಂಗೆಯ ಗೌರಿ ಮಡುವಿನಲ್ಲಿ ವಿಸರ್ಜಿಸಲಾಯಿತು.

ಗೌರಮ್ಮನ ಕಳಸ ಹಾಗೂ ಮೂರ್ತಿಗೆ ಬೇಡಗಂಪಣ ಗುರುಪರಂಪರೆಯಂತೆ ಸಾಲೂರು ಬೃಹನ್ಮಠದ ಪಡಿತರ ಸೇವೆಯಲ್ಲಿ 5 ದಿನ ವಿಶೇಷ ಪೂಜೆ ಸಲ್ಲಿಸಲಾಯಿತು. ಶುಕ್ರವಾರ ಬೆಳಗ್ಗೆ ಉಪವಾಸವಿದ್ದ ಬೇಡಗಂಪಣ ಅರ್ಚಕರು ಗೋವಿನ ಹಾಲನ್ನು ಕರೆ ತಂದು ಮಾದಪ್ಪ ಹಾಗೂ ಸ್ವರ್ಣಗೌರಿಗೆ ಏಕಕಾಲದಲ್ಲಿ ಅಭಿಷೇಕ ನೆರವೇರಿಸಿದರು. ಬಳಿಕ ಸಾಲೂರು ಬೃಹನ್ಮಠದ ಪಡಿ ಸೇವೆಯೊಂದಿಗೆ ಗೌರಮ್ಮನಿಗೆ ಸಂಕಲ್ಪಪೂಜೆ, ಗಣಪತಿ ಪೂಜೆ, ರುದ್ರ ಕಳಸ ಪೂಜೆಯೊಂದಿಗೆ ಏಕವಾರು ರುದ್ರಾಭಿಷೇಕ, ಶಿವ ಅಷ್ಟೋತ್ತರ ಬಿಲ್ವಾರ್ಚನೆ ನೆರವೇರಿಸಿದರು. ಬಳಿಕ ಮಹಾ ನೈವೇದ್ಯವನ್ನು ಸ್ವಾಮಿಗೆ ಅರ್ಪಿಸಿ ಮಹಾಮಂಗಳಾರತಿ ಬೆಳಗಿಸಲಾಯಿತು.

ವಿಸರ್ಜನಾ ಪೂಜಾ ಕೈಂಕರ್ಯ: ರಾತ್ರಿ ಸುಮಾರು 8ಗಂಟೆ ವೇಳೆಯಲ್ಲಿ ಗೌರಿ ಮೂರ್ತಿ ಹಾಗೂ ಗಂಗೆ ತುಂಬಿದ ಕಳಸವನ್ನು ಹೊತ್ತ ಬೇಡಗಂಪಣ ಅರ್ಚಕರು ಸಾಲೂರು ಬೃಹನ್ಮಠದ ಪೀಠಾಧಿಪತಿ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವದಲ್ಲಿ ಸತ್ತಿಗೆ, ಸೂರಿಪಾನಿ ಹಾಗೂ ವಾದ್ಯಮೇಳದಂದಿಗೆ ಮೆರವಣಿಗೆ ಮೂಲಕ ಅಂತರಗಂಗೆಯ ಗೌರಿ ಮಡುವಿಗೆ ತೆರಳಿ ಗಂಗೆಗೆ ಪೂಜೆ ಸಲ್ಲಿಸಿದರು.

ಈ ವೇಳೆ ಸಿಡಿಮದ್ದಿನ ಪಟಾಕಿ ಸಿಡಿಸಲಾಯಿತು. ನೆರೆದಿದ್ದ ಭಕ್ತ ಸಮೂಹ ಗೌರಿ ಮೂರ್ತಿಗೆ ಧೂಪ, ದೀಪದ ದೀವಾಟಿಕೆ ಸೇವೆ ಜತೆಗೆ ಏಕ ಆರತಿ, ಕಳಸ ಆರತಿ, ತ್ರಿ ಆರತಿ, ಪಂಚ ಆರತಿ, ನಕ್ಷತ್ರ ಆರತಿ ಹಾಗೂ ರಥ ಆರತಿ ಮಾಡುವ ಮೂಲಕ ವಿಶೇಷ ಪೂಜಾ ಕೈಂಕರ್ಯ ನೆರವೇರಿಸಿತು. ಗೌರಿ ಮೂರ್ತಿಗೆ ನೈವೇದ್ಯ ಹಾಗೂ ಮಹಾಮಂಗಳಾರತಿ ಬೆಳಗಿಸಿದ ಬಳಿಕ ವಿಸರ್ಜಿಸಲಾಯಿತು.

ಅಲ್ಲಿಂದ ನಿರ್ಗಮಿಸಿದ ಬೇಡಗಂಪಣ ಅರ್ಚಕರು ದೇಗುಲಕ್ಕೆ ತೆರಳಿ ಮಾದಪ್ಪನಿಗೆ ತ್ರಿಕಾಲ ಪೂಜೆ ಸಲ್ಲಿಸಿ ಹುಲಿ ಹಾಗೂ ಬಸವ ಉತ್ಸಾವಾಧಿ ವಾಹನ ಹಾಗೂ ನಂದಿಕಂಬದ ಕುಣಿತದೊಂದಿಗೆ ದೇಗುಲದ ಸುತ್ತ ಪ್ರದಕ್ಷಿಣೆ ಹಾಕಿದರು. ಬಳಿಕ ಭಕ್ತರಿಗೆ ಪ್ರಸಾದ ವಿನಿಯೋಗಿಸಲಾಯಿತು.
ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಉಪ ಕಾರ್ಯದರ್ಶಿ ಚಂದ್ರಶೇಖರ್, ಲೆಕ್ಕ ಅಧೀಕ್ಷಕ ನಾಗೇಶ್, ಬೇಡಗಂಪಣ ಅರ್ಚಕ ಕೆ.ವಿ ಮಾದೇಶ್, ಪಾರುಪತ್ತೆದಾರ ಮಲ್ಲಿಕಾರ್ಜುನ, ದೇಗುಲದ ಪ್ರಧಾನ ಆಗಮಿಕ ಕರವೀರಸ್ವಾಮಿ ಇತರರು ಇದ್ದರು.