ಹರಪನಹಳ್ಳಿ: ದೇಶದಲ್ಲಿ ದ್ವೇಷದ ಗಾಳಿ ಬೀಸುತ್ತಿದೆ. ರಾಜಕಾರಣಿಗಳು ಯುವಕರನ್ನು ಭಾವನಾತ್ಮಕವಾಗಿ ಹಿಡಿದಿಟ್ಟುಕೊಳ್ಳುವ ತಂತ್ರ ಮಾಡುತ್ತಿದ್ದಾರೆ ಎಂದು ಪ್ರಗತಿಪರ ಚಿಂತಕ ಇಸ್ಮಾಯಿಲ್ ಎಲಿಗಾರ್ ಹೇಳಿದರು.
ಪಟ್ಟಣದ ತಾಪಂ ಸಾಮರ್ಥ್ಯ ಸೌಧ ಆವರಣದಲ್ಲಿ ಜನದನಿ ಸಾಹಿತ್ಯ ವೇದಿಕೆ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಶಿವಸುಂದರ ಅವರ ಸಂವಿಧಾನ ಹಾಗೂ ಸನಾತನವಾದ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು. ಭಾರತ ಬಹು ಸಂಸ್ಕೃತಿಯಿಂದ ಕೂಡಿದೆ. ಸಂಸ್ಥಾನಗಳಿಂದ ಹರಿದು ಹಂಚಿದ್ದ ರಾಜ್ಯಗಳನ್ನು ಒಗ್ಗೂಡಿಸಿ ನಿರ್ಮಿಸಿದ ಬೃಹತ್ ದೇಶವನ್ನು ಮನಸ್ಮತಿ ಜನಾಂಗದವರು ಕೋಮುವಾದದ ಮೂಲಕ ವಿಭಜನೆ ಮಾಡುವ ಹುನ್ನಾರ ನಡೆಸಿದ್ದಾರೆ ಎಂದರು.
ಪ್ರಗತಿಪರ ಚಿಂತಕರು ಸುಧೀರ್ ಕುಮಾರ್ ಮರೋಳಿ ಮಾತನಾಡಿ, ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಎಲ್ಲರೂ ಸಮಾನರು ಎಂದು ಉಲ್ಲೇಖಿಸಿದ್ದಾರೆ. ಆದರೆ ಯಾರನ್ನೂ ಸಮಾನವಾಗಿ ಕಾಣದ ಸನಾತನ ಮನಸ್ಸುಗಳಿಗೆ ಇಂಥ ಸಂಗತಿಗಳು ಸದಾ ಅಲರ್ಜಿ ಎನ್ನುವುದು ವಾಸ್ತವ. ಭಾರತದಲ್ಲಿ ಮತ್ತೆ ಸನಾತನವಾದ ಪುನರುಜ್ಜೀವನ ಗೊಳಿಸಲು ಪಣತೊಟ್ಟ ಆರ್‌ಎಸ್‌ಎಸ್ ಹಾಗೂ ಅದರ ಅಂಗ ಸಂಸ್ಥೆಗಳು ಸ್ವಾತಂತ್ರ್ಯ ಬಂದಾಗಿನಿಂದಲೂ ಸಂವಿಧಾನವನ್ನು ವಿರೋದಿಸುತ್ತಿವೆ. ಅದಕ್ಕೆ ಇಂಬು ಕೊಡುವಂತೆ ರಾಜಕೀಯ ಹಾಗೂ ಅಹಿಂದ ಮತಗಳನ್ನು ಸೆಳೆಯುವ ದೃಷ್ಠಿಯಿಂದ ಕಾಲಕ್ಕೆ ತಕ್ಕಂತೆ ಪಥ ಬದಲಿಸಿ ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾವಣೆ ಬಗ್ಗೆ ಒಂದಲ್ಲ ಒಂದು ವಿಚಾರದಲ್ಲಿ ಉದ್ದಟತನದ ಮಾತನಾಡುತ್ತಾರೆ. ಸಂವಿಧಾನ ಸಮ್ಮಾನ ಅಭಿಯಾನ ಆರಂಭಿಸಿದಾಗ ಅವರ ಸುಳ್ಳು ಜನರ ಮುಂದೆ ಬಿಚ್ಚಿಡುವ ಉದ್ದೇಶದಿಂದ ಈ ಕಿರು ಹೊತ್ತಿಗೆ ಬಿಡುಗಡೆ ಮಾಡಲಾಗಿದೆ ಎಂದರು.
ಲೇಖಕ ಶಿವಸುಂದರ್ ಬೆಂಗಳೂರು ಮಾತನಾಡಿ, ಸಿಟಿಜನ್ಸ್ ಫರ್ ಸೋಷಿಯಲ್ ಜಸ್ಟೀಸ್ ಹೆಸರಿನಲ್ಲಿ ಸಂಘಪರಿವಾರವು ಕಳೆದ ಕೆಲ ತಿಂಗಳುಗಳ ಹಿಂದೆ ಸಂವಿಧಾನ ಸನ್ಮಾನ ಅಭಿಯಾನ ನಡೆಸಿತು. ಅದರ ಭಾಗವಾಗಿ ರಾಜ್ಯಾದ್ಯಂತ ಸಂವಿಧಾನ ಮತ್ತು ಅಂಬೇಡ್ಕರ್ ಅವರ ಬಗ್ಗೆ ಅಪಪ್ರಚಾರ ಮಾಡುತ್ತಿರುವುದು ಎಲ್ಲರಿಗೂ ತಿಳಿದು ಬಂದಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಸಂಘ ಪರಿವಾರ 400 ಸೀಟು ಪಡೆದು ಏಕಸಾರ್ವಭೌಮತ್ವ ಸಾಧಿಸುವ ದೊಡ್ಡ ಕನಸು ಸಂವಿಧಾನ ಬದಲಾಯಿಸುವ ಬಹಿರಂಗ ಹೇಳಿಕೆಗಳಿಂದ ಕನಸಾಗೇ ಉಳಿಯಿತು. ಸಂವಿಧಾನ ಬದಲಾದರೆ ಮೀಸಲಾತಿ ರದ್ದಾಗುತ್ತದೆ ಎಂಬ ಆತಂಕ ದಮನಿತ ಸಮುದಾಯದಲ್ಲಿ ಮಡುಗಟ್ಟಿದ್ದರಿಂದ ಈ ಬಾರಿ ದಮನಿತರ ಬಹುಪಾಲು ಮತಗಳು ಬಿಜೆಪಿಗೆ ಬರಲಿಲ್ಲ ಎಂದರು.