ಜಿಲ್ಲೆ

ವಕ್ಫ್ ಹೆಸರಿನಲ್ಲಿ ಇಸ್ಲಾಮೀಕರಣ ಸಲ್ಲದು; ವಿಹಿಂಪ ಸಂತ ಸಮಾವೇಶದಲ್ಲಿ ಖಂಡನೆ

ಬೆಂಗಳೂರು: ವಕ್ಫ್ ಹೆಸರಿನಲ್ಲಿ ರಾಜ್ಯದಲ್ಲಿ ಇಸ್ಲಾಮೀಕರಣ ನಡೆಯುತ್ತಿದೆ ಎಂದು ವಿಶ್ವ ಹಿಂದು ಪರಿಷತ್ ಶನಿವಾರ ಆಯೋಜಿಸಿದ್ದ ಸಂತ ಸಮಾವೇಶದಲ್ಲಿ ಖಂಡನೆ ವ್ಯಕ್ತವಾಗಿದ್ದು, ಇದನ್ನು ತಡೆಯಲು ಹೋರಾಟ ರೂಪಿಸಲಾಗಿದೆ. ವಿ.ವಿ.ಪುರಂ ವಾಸವಿ ವಿದ್ಯಾನಿಕೇತನ ಸಭಾಂಗಣದಲ್ಲಿ ನಡೆದ ಸಮಾವೇಶದಲ್ಲಿ ಉಡುಪಿ ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ನೇತೃತ್ವದಲ್ಲಿ ಹರಿಹರ ಪಂಚಮಸಾಲಿ ಪೀಠದ ಶ್ರೀವಚನಾನಂದ ಸ್ವಾಮೀಜಿ, ಮಂಗಳೂರಿನ ವಜ್ರದೇಹಿ ಮಠದ ಶ್ರೀಗಳು, ಶಿವಮೊಗ್ಗದ ಕೂಡಲಿ ಶೃಂಗೇರಿ ಮಠದ ಶ್ರೀಗಳು, ಬಳ್ಳಾರಿ ಕಲ್ಯಾಣ ಮಠದ ಶ್ರೀಗಳು ಸೇರಿ ಸುಮಾರು 25ಕ್ಕೂ ಹೆಚ್ಚು ಮಠಾಧೀಶರು ಸಂತ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಇಸ್ಲಾಮೀಕರಣ ತಡೆಯುವಲ್ಲಿ ಹಿಂದುಗಳು ಜಾತಿಭೇದ, ಬಡವ-ಶ್ರೀಮಂತ ಎಂಬ ಭೇದವಿಲ್ಲದೆ ಸಮಸ್ತ ಹಿಂದುಗಳು ಸಕ್ರೀಯವಾಗಿ ಭಾಗಿಯಾಗಬೇಕು. ಅದಕ್ಕಾಗಿ ಕರ್ನಾಟಕದ ಪ್ರತೀ ನಗರ ಮತ್ತು ಪ್ರತೀ ಗ್ರಾಮದಲ್ಲೂ ಇಸ್ಲಾಮೀಕರಣದ ವಿರುದ್ಧ ಹೋರಾಟ ನಡೆಸಲು ತಯಾರಿರುವ ಸ್ಥಳೀಯ ಹಿಂದು ಸಂಘಟನೆ ಕಾರ್ಯಕರ್ತರನ್ನು ಸಂಪರ್ಕಿಸಿ ಒಗ್ಗಟ್ಟಿನಿಂದ ಹೋರಾಟಕ್ಕೆ ಬೆಂಬಲಿಸುವಂತೆ ಸಂತ ಸಮಾವೇಶವು ಸಮಸ್ತ ಹಿಂದು ಸಮಾಜ ಬಾಂಧವರಿಗೆ ಕರೆ ನೀಡಿದೆ. ಸಮಾವೇಶದ ನಂತರ ವಿಹಿಂಪ ಅಧ್ಯಕ್ಷ ಅಲೋಕ್ ಕುಮಾರ್ ನೇತೃತ್ವದಲ್ಲಿ ಎಲ್ಲ ಸ್ವಾಮೀಜಿಗಳು ರಾಜಭವನಕ್ಕೆ ಹೋಗಿ ರಾಜ್ಯಪಾಲರನ್ನು ಭೇಟಿಯಾಗಿ ಚರ್ಚೆ ನಡೆಸಿ ಮನವಿ ಸಲ್ಲಿಸಿದರು.

ಸಮಾವೇಶದಲ್ಲಿ ಕೈಗೊಂಡ ನಿರ್ಣಯಗಳು

*ವಕ್ಫ್ ಹೆಸರಿನಲ್ಲಿ ಹಿಂದುಗಳ, ಹಿಂದು ದೇವಸ್ಥಾನ, ಸಂಸ್ಥೆಗಳ, ರೈತರ ಜಮೀನನ್ನು ಕಬಳಿಸಿರುವುದನ್ನು ಸಂಪೂರ್ಣವಾಗಿ ಹಿಂಪಡೆಯುವವರೆಗೆ ಹೋರಾಟ ಮಾಡುವುದು. *ಕರ್ನಾಟಕದಲ್ಲಿ ವಕ್ಫ್ ಹಗರಣಕ್ಕೆ ಕಾರಣರಾದ ಅಧಿಕಾರಿಗಳು, ರಾಜಕಾರಣಿ, ಮಂತ್ರಿಗಳನ್ನ ತನಿಖೆಗೆ ಒಳಪಡಿಸಿ ಶಿಕ್ಷೆ ವಿಧಿಸಲು ಸರಕಾರಕ್ಕೆ ಒತ್ತಾಯ *ವಕ್ಫ್ ಭೂಕಬಳಿಕೆ ಹೆಸರಿನಲ್ಲಿ ಹಿಂದುಗಳಿಗೆ ನೀಡಿದ ನೋಟೀಸ್ ಹಿಂಪಡೆದು, ಭೂಮಿ ವಾಪಸ್ಸು ಕೊಡಬೇಕು. *ಇತ್ತೀಚೆಗೆ ರಾಜ್ಯ ಸರ್ಕಾರ 2750 ಎಕರೆ ಸರ್ಕಾರೀ ಭೂಮಿಯನ್ನು ಖಬರ್‌ಸ್ಥಾನದ ಹೆಸರಿನಲಿ ವಕ್ಫ್‌ಗೆ ಹಸ್ತಾಂತರಿಸಲು ನೀಡಿರುವ ಆದೇಶ ರದ್ದುಗೊಳಿಸಬೇಕು. *ಕೇಂದ್ರ ಸರಕಾರವು ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ಉದ್ದೇಶಿಸಿರುವ ತಿದ್ದುಪಡಿ ಮಸೂದೆಗೆ ಬೆಂಬಲ

ಲವ್ ಜಿಹಾದ್ ಬಗ್ಗೆ ಆತಂಕ

ಇದೇ ವೇಳೆ ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಇದ್ದರೂ ನಿರಂತರ ಮತಾಂತರ ನಡೆಯುತ್ತಿರುವ ಬಗ್ಗೆ, ಲವ್ ಜಿಹಾದ್‌ನಂತರ ಆಘಾತಕಾರಿ ಬೆಳವಣಿಗೆಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ ಸಭೆಯು ಈಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣಿಸಿ ಮುಗ್ಧ ಯುವತಿಯರನ್ನು ರಕ್ಷಿಸುವಂತೆ ಒತ್ತಾಯಿಸಿತು.ಹಿಂದು ದೇವಸ್ಥಾನಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸುವ ಬಗ್ಗೆ ಸಮಾವೇಶದಲ್ಲಿ ಕೆಲ ನಿರ್ಣಯಗಳನ್ನು ಕೈಗೊಳ್ಳಲಾಯಿತು.