ಮಂಗಳೂರು: ಅಂತಾರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಘ (ಇಸ್ಕಾನ್) ಮಂಗಳೂರು ಶಾಖೆ ವತಿಯಿಂದ ಸೆಪ್ಟಂಬರ್ ೬ ಮತ್ತು ೭ರಂದು ನಗರದ ಕೊಡಿಯಾಲ್‌ಬೈಲ್‌ನ ಪಿವಿಎಸ್ ಕಲಾಕುಂಜ ಸಭಾಂಗಣದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಮಹೋತ್ಸವ ಆಚರಿಸಲಾಗುವುದು ಎಂದು ಇಸ್ಕಾನ್ ಮಂಗಳೂರು ಅಧ್ಯಕ್ಷ ಗುಣಕರ ರಾಮದಾಸ ತಿಳಿಸಿದರು.
ಮಹೋತ್ಸವದ ಅಂಗವಾಗಿ ಸೆ. ೨ ಮತ್ತು ೩ರಂದು ದೇವಾಲಯದ ಸಭಾಂಗಣದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಉತ್ಸವ ನಡೆಯಲಿದೆ. ಭರತನಾಟ್ಯ, ಪ್ರಬಂಧ, ಭಜನೆ, ಚಿತ್ರಕಲಾ ಮತ್ತು ಕೃಷ್ಣವೇಷ ಸ್ಪರ್ಧಾಕೂಟ ಆಯೋಜಿಸಲಾಗಿದೆ ಎಂದು ಎಂದು ಸೋಮವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.
ಎರಡು ಅನಾಥಾಶ್ರಮದ ಮಕ್ಕಳಿಗೆ ವಿಶೇಷ ಆಮಂತ್ರಣ ನೀಡಿ ಈ ಸಂದರ್ಭದಲ್ಲಿ ಅವರಿಗೆ ಪ್ರಸಾದ ನೀಡುವ ಕಾರ್ಯಕ್ರಮ ಇದೆ. ಭಕ್ತರು ಹರಿನಾಮ ಜಪ ಮಂತ್ರವನ್ನು ಜಪಿಸಿ ೧೦೮ ಹೆಜ್ಜೆಗಳನ್ನು ದಾಟುವ ಕಾರ್ಯಕ್ರಮಕ್ಕೆ ವಿಶೇಷ ವೇದಿಕೆ ನಿರ್ಮಿಸಲಾಗಿದೆ. ಮಥುರಾ ನಗರದಿಂದ ತರಿಸಲ್ಪಟ್ಟ ರಕ್ಷಾಬಂಧನವನ್ನು ಭಕ್ತರಿಗೆ ನೀಡಲಾಗುವುದು ಎಂದು ಅವರು ಹೇಳಿದರು.
ಸೆ.೬ರಂದು ಬೆಳಗ್ಗೆ ೭ಕ್ಕೆ ಶೃಂಗಾರ, ಅಲಂಕಾರ ಪೂಜೆ, ೮ ಕ್ಕೆ ಸಭಾ ಕಾರ್ಯಕ್ರಮ, ಬಹುಮಾನ ವಿತರಣೆ, ೯ಕ್ಕೆ ತೊಟ್ಟಿಲು ಸೇವೆ ಬೆಣ್ಣೆ ಕೃಷ್ಣನಿಗೆ, ಮಧ್ಯಾಹ್ನ ೧೨ ಕ್ಕೆ ರಾಜಭೋಗ ಆರತಿ, ಸಂಜೆ ೪ಕ್ಕೆ ಭಜನೆ, ೬ಕ್ಕೆ ಅಭಿಷೇಕ, ೮.೧೫ಕ್ಕೆ ಮಹಾಪೂಜೆ ನಡೆಯಲಿದೆ. ಸೆ.೭ರಂದು ಬೆಳಗ್ಗೆ ೭ಕ್ಕೆ ಶೃಂಗಾರ, ಅಲಂಕಾರ ಪೂಜೆ, ೮ಕ್ಕೆ ಸಭಾ ಕಾರ್ಯಕ್ರಮ, ಬಹುಮಾನ ವಿತರಣೆ, ೯ಕ್ಕೆ ತೊಟ್ಟಿಲು ಸೇವೆ ಬೆಣ್ಣೆ ಕೃಷ್ಣನಿಗೆ, ಮಧ್ಯಾಹ್ನ ೧೨ಕ್ಕೆ ರಾಜಭೋಗ ಆರತಿ, ಮಧ್ಯಾಹ್ನ ೨ರಿಂದ ರಾತ್ರಿ ೮ರವರೆಗೆ ಭಜನೆ, ೯ಕ್ಕೆ ಮಹಾಭಿಷೇಕ, ಮಧ್ಯರಾತ್ರಿ ೧೨ಕ್ಕೆ ಮಹಾ ಮಂಗಳಾರತಿ ನಡೆಯಲಿದೆ. ಭಕ್ತರು ಹೂ, ಹಣ್ಣು, ತೆಂಗಿನಕಾಯಿ, ತುಳಸಿ ಅರ್ಪಿಸಬಹುದು. ಬೆಳಗ್ಗೆ ೯ರಿಂದ ರಾತ್ರಿ ೧೨ರವರೆಗೆ ಪ್ರಸಾದ ವಿತರಣೆ ನಡೆಯಲಿದೆ ಎಂದರು.
ಶ್ರದ್ಧೆ, ಭಕ್ತಿ-ಭಾವ, ಆಚಾರ-ವಿಚಾರಗಳನ್ನು ಇಂದಿನ ಜನತೆ ಮೈಗೂಡಿಸಿಕೊಳ್ಳಲು ಇಂತಹ ಸಾಂಸ್ಕೃತಿಕ ಉತ್ಸವಗಳು ಪ್ರೇರಣೆಯಾಗಲಿದ್ದು, ಸಮಾಜದಲ್ಲಿ ಭಾತೃತ್ವ, ಸಾಮರಸ್ಯ ಹಾಗೂ ಸೌಹಾರ್ದತೆಯ ವಾತಾವರಣ ಸೃಷ್ಟಿಸಲು ಪೂರಕವಾಗಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಇಸ್ಕಾನ್ ಮಂಗಳೂರು ಕಾರ್ಯದರ್ಶಿ ಸನಂದನದಾಸ, ಜತೆ ಕಾರ್ಯದರ್ಶಿ ಸುಂದರಗೌರ ದಾಸ ಉಪಸ್ಥಿತರಿದ್ದರು.