ಶಿಗ್ಗಾಂವಿ: ಶುದ್ಧ ಮನಸ್ಥಿತಿ, ಆತ್ಮಾನುಭವ, ಸಂಕಲ್ಪ ಮತ್ತು ಸಮರ್ಪಣಾ ಭಾವ ಬೆಳೆಸುವ ಇಷ್ಟಲಿಂಗಪೂಜೆ ನಿತ್ಯ ಆಚರಣೆಯಾಗಬೇಕು ಎಂದು ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಮಾರುತಿ ಶಿಡ್ಲಾಪೂರ ಹೇಳಿದರು.
ಪಟ್ಟಣದ ವಿರಕ್ತಮಠದಲ್ಲಿ ಸೋಮವಾರ ಆಯೋಜಿಸಿದ್ದ ತಾಲೂಕು ಶರಣ ಸಾಹಿತ್ಯ ಪರಿಷತ್ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಅವರು ಮಾತನಾಡಿ, ಶರಣ ಸಾಹಿತ್ಯ ಪರಿಷತ್ನ ಶರಣ ತತ್ವದ ಆಳವನ್ನು ಸಾಮಾನ್ಯರಿಗೆ ಮುಟ್ಟಿಸುವ ಉದ್ದೇಶದಿಂದ ತಾಲೂಕಿನ ಶಸಾಪಗೆ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಗುತ್ತಿದೆ. ಈ ಮೂಲಕ ಶರಣರ ಸೇವೆ ತಾಲೂಕಿನಲ್ಲಿ ಮರಳಿ ಪ್ರಾರಂಭವಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಶ್ರೀ ಸಂಗನಬಸವ ಸ್ವಾಮೀಜಿ ಮಾತನಾಡಿ, ಸಮಾಜವನ್ನು ಸಮತ್ವದ ಮಾರ್ಗದಲ್ಲಿ ಸಾಗಿಸಲು ಶರಣ ಸಂಸ್ಕೃತಿಯ ಸಂದೇಶ ಮನೆ-ಮನಗಳನ್ನು ಮುಟ್ಟಬೇಕು. ಶರಣ ಸಂಸ್ಕೃತಿಯ ಸಂದೇಶಗಳಿಂದ ಮಾನವರ ಮಧ್ಯದಲ್ಲಿರುವ ಕಂದಕ ದೂರವಾಗಬೇಕು ಎಂದರು.
ನಿವೃತ್ತ ಪಶುಸಂಗೋಪನಾ ಇಲಾಖೆ ಅಧಿಕಾರಿ ಸಿ.ಡಿ. ಯತ್ನಳ್ಳಿ ಅವರನ್ನು ನೂತನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಎಂ.ಬಿ. ಹಳೆಮನಿ, ಸತೀಶ ಬಾಗನ್ನವರ, ಜಿ.ಎನ್. ಯಲಿಗಾರ, ಕೆ.ಟಿ. ಪಾಟೀಲ, ಶಶಿಕಾಂತ ರಾಠೋಡ, ಉಷಾ ಪಾಟೀಲ, ನಾಗಪ್ಪ ಬೆಂತೂರ, ರಮೇಶ ಹರಿಜನ, ಮಾಲತೇಶ ನಾಯ್ಕೊಡಿ ಇತರರಿದ್ದರು.