ಜಿಲ್ಲೆ

ಇಷ್ಟಲಿಂಗವು ಅನಿಷ್ಟ ಪರಿಹಾರಕ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ

ದೀಕ್ಷೆ ನೀಡಿದ ಗುರು ಕರುಣಿಸಿದ ಇಷ್ಟಲಿಂಗವು ಅನಿಷ್ಟ ಪರಿಹಾರಕವಾಗಿದ್ದು, ಸದಾಕಾಲವೂ ಅದನ್ನು ದೇಹದ ಮೇಲೆಯೇ ಧಾರಣೆ ಮಾಡಿರಬೇಕು ಎಂದು ಕಲಬುರ್ಗಿ ಜಿಲ್ಲೆ ಬೆಳಗುಂಪಾ ಬೃಹನ್ಮಠದ ಶ್ರೀ ಅಭಿನವ ಪರ್ವತೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಕರ್ತೃ ಪುರುಷರ ಶ್ರೀ ಗುರುಶಾಂತಲಿಂಗ ಶಿವಯೋಗಿಗಳ ಜಾತ್ರಾ ಮಹೋತ್ಸವ ನಿಮಿತ್ತ ಏರ್ಪಡಿಸಿದ್ದ ಸಾಮೂಹಿಕ ದೀಕ್ಷಾ ಕಾರ್ಯಕ್ರಮದಲ್ಲಿ 33 ಜಂಗಮ ವಟುಗಳಿಗೆ ಇಷ್ಟಲಿಂಗ ಕರುಣಿಸಿ ಮಂತ್ರೋಪದೇಶ ಮಾಡಿ ಆಶೀರ್ವಚನ ನೀಡಿದ ಅವರು, ನಿತ್ಯವೂ ನಡೆಸುವ ಇಷ್ಟಲಿಂಗ ಪೂಜೆ ಮತ್ತು ಅನುಸಂಧಾನದ ಮೂಲಕ ಸಾಕ್ಷಾತ್ಕಾರದ ಬೆಳಗನ್ನು ಕಾಣಲು ಸಾಧ್ಯ ಎಂದರು.

ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಹಿರಿಯ ಶ್ರೀಗಳಾದ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಕಿರಿಯ ಶ್ರೀಗಳಾದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹಾಗೂ ಬೆಳಗಾವಿ ಜಿಲ್ಲೆ ಸತ್ತಿಗೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ದೀಕ್ಷೆ ಪಡೆದ ವಟುಗಳನ್ನು ಆಶೀರ್ವದಿಸಿದರು. ಗುರುಮೂರ್ತಿ ಯರಗಂಬಳಿಮಠ, ಸೋಮಲಿಂಗಶಾಸ್ತ್ರೀ ಗುಡ್ಡದಮಠ, ರಾಣಿಬೆನ್ನೂರಿನ ಕುಮಾರಶಾಸ್ತ್ರೀ ಹಿರೇಮಠ, ಪ್ರಶಾಂತ ರಾಜಗುರು ಇತರರು ಇದ್ದರು.