ಜಿಲ್ಲೆ

ನಂಬಿದವರಿಗೆ ಬದ್ಧರಾಗಿ ಕಾರ್ಯ ನಿರ್ವಹಿಸಿ

ಈಶಪ್ರಿಯ ತೀರ್ಥ ಸ್ವಾಮೀಜಿ ಕಿವಿಮಾತು

ವಿದ್ಯಾರ್ಥಿ ಸಂಘದ ಪದಗ್ರಹಣ ಸಮಾರಂಭ

ವಿಜಯವಾಣಿ ಸುದ್ದಿಜಾಲ ಉಡುಪಿ

ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣ ಬರುವಂತಾಗಲು ಹಾಗೂ ಸಂಘಟನೆಯ ಮಹತ್ವದ ಅರಿವು ಉಂಟಾಗಲು ಎಲ್ಲ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿ ಸಂಘ ರಚಿಸಲಾಗುತ್ತದೆ. ಕಲಿಕೆಯೊಂದಿಗೆ ರಾಷ್ಟ್ರಾಭಿಮಾನ ಮೈಗೂಡಿಸಿಕೊಂಡು ನಿಮ್ಮನ್ನು ನಂಬಿದವರಿಗೆ ಬದ್ಧರಾಗಿ ಕಾರ್ಯ ನಿರ್ವಹಿಸಬೇಕು ಎಂದು ಉಡುಪಿ ಶ್ರೀ ಅದಮಾರು ಮಠ ಶಿಕ್ಷಣ ಸಂಸ್ಥೆ (ರಿ.) ಬೆಂಗಳೂರು ಅಧ್ಯಕ್ಷರೂ ಆದ ಅದಮಾರು ಮಠದ ಈಶಪ್ರಿಯ ತೀರ್ಥ ಶ್ರೀಪಾದರು ಕಿವಿಮಾತು ಹೇಳಿದರು.

ಉಡುಪಿಯ ಪೂರ್ಣಪ್ರಜ್ಞ ಕಾಲೇಜ್​ (ಸ್ವಾಯತ್ತ)ನ 2025-26ನೇ ಸಾಲಿನ ವಿದ್ಯಾರ್ಥಿ ಸಂಘದ ಪದಗ್ರಹಣ ಸಮಾರಂಭ ಉದ್ಘಾಟಿಸಿ, ವಿದ್ಯಾರ್ಥಿ ಸಂಘದ ಕಾರ್ಯ ಚಟುವಟಿಕೆಗಳಿಗೆ ಚಾಲನೆ ನೀಡಿ ಆಶೀರ್ವಚನ ನೀಡಿದರು.

ಸಮಾಜದ ಸ್ವಾಸ್ಥ್ಯ ರಕ್ಷಿಸಬೇಕು

ಉಡುಪಿ ಜಿಲ್ಲಾ ಪೊಲೀಸ್​ ವರಿಷ್ಠ ಹರಿರಾಂ ಶಂಕರ್​ ಮಾತನಾಡಿ, ಯುವ ಸಮೂಹ ದುಶ್ಚಟಗಳಿಗೆ ಬಲಿಯಾಗದೆ ಸಮಾಜದ ಸ್ವಾಸ್ಥ್ಯ ರಕ್ಷಿಸಬೇಕು. ಹೆತ್ತವರಿಗೆ, ಗುರು-ಹಿರಿಯರಿಗೆ ಗೌರ ಕೊಡುವ ಹಾಗೂ ಎಚ್ಚರಿಕೆಯಿಂದ ನಡೆದುಕೊಳ್ಳುವಂತೆ ಸಲಹೆ ನೀಡಿದರು.

ತೆಂಕನಿಡಿಯೂರು ಸರ್ಕಾರಿ ಕಾಲೇಜಿನ ಪ್ರಾಂಶುಪಾಲ ಪ್ರೊ. ನಿತ್ಯಾನಂದ ಗಾಂವಕರ್​ ಮಾತನಾಡಿ, ನಾಯಕತ್ವದ ಕುರಿತಾಗಿ ವಿವರಿಸಿದರು. ಕಾಲೇಜು ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿ ಡಾ. ಜಿ.ಎಸ್​. ಚಂದ್ರಶೇಖರ ಅಧ್ಯಕ್ಷತೆ ವಹಿಸಿದ್ದರು.

ಪ್ರಾಂಶುಪಾಲ ಡಾ. ರಾಮು ಎಲ್​. ಪ್ರತಿಜ್ಞಾವಿಧಿ ಬೋಧಿಸಿದರು. ಎಎಂಇಸಿ ಬೆಂಗಳೂರಿನ ಗೌರವ ಕಾರ್ಯದರ್ಶಿ ಡಾ. ಎ.ಪಿ. ಭಟ್​, ಪಿಎಂಸಿ ಗೌರವ ಖಜಾಂಜಿ ಸಿಎ ಪ್ರಶಾಂತ ಹೊಳ್ಳ, ಶೈಕ್ಷಣಿಕ ಸಲಹೆಗಾರ ಡಾ. ಪಿ.ಎಸ್​. ಐತಾಳ ಉಪಸ್ಥಿತರಿದ್ದರು. ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಗಳಾದ ಡಾ. ಆನಂದ ರಾಯಮಾನೆ, ಸುಮಲತಾ, ಪ್ರತಿಭಾ ಆಚಾರ್ಯ, ಡಾ. ಮಂಜುನಾಥ ಕರಬ ಪಾಲ್ಗೊಂಡಿದ್ದರು.

ವಿದ್ಯಾರ್ಥಿ ಸಂಘದ ನೂತನ ಅಧ್ಯಕ್ಷೆ ಪಿ.ಕೆ. ನೇಹಾ ಸ್ವಾಗತಿಸಿದರು. ಕಾರ್ಯದರ್ಶಿ ಶರಲ್​ ವಂದಿಸಿದರು.