ಚಿಕ್ಕಬಳ್ಳಾಪುರ: ಈಶ ಗ್ರಾಮೋತ್ಸವದಲ್ಲಿ ಗೆಲುವನ್ನು ಸಾಧಿಸಿದ ವಾಲಿಬಾಲ್ ರಾಷ್ಟ್ರೀಯ ರನ್ನರ ಅಪ್ ಕರ್ನಾಟಕ ತಂಡವನ್ನು ಸನ್ಮಾನಿಸಲಾಯಿತು. 2025ರ ಪುರುಷರ ವಾಲಿಬಾಲ್ ಸ್ಪರ್ಧೆಯಲ್ಲಿ ಬೆಂಗಳೂರು ತಾಲೂಕಿನ ಹೆಗ್ಗಡಿಹಳ್ಳಿ ತಂಡವು ರನ್ನರ್ ಆಫ್ ಆಗಿದ್ದು ಕ್ರೀಡಾಪಟುಗಳು ತಾಲೂಕಿನ ಈಶ ಆದಿಯೋಗಿ ಧ್ಯಾನ ಕೇಂದ್ರ ಆಗಮಿಸಿ, ಸನ್ನಿಧಿಯ ನಾಗ ಮಂಟಪ, ಯೋಗೇಶ್ವರ ಲಿಂಗ ಮತ್ತು ಆದಿಯೋಗಿಯ ದರ್ಶನವನ್ನು ಪಡೆಯಿತು. ಇದೇ ವೇಳೆ ಆಟಗಾರರನ್ನು ಸನ್ಮಾನಿಸಲಾಯಿತು.
6 ರಾಜ್ಯಗಳು ಮತ್ತು 1 ಕೇಂದ್ರಾಡಳಿತ ಪ್ರದೇಶದಿಂದ 4,249 ಕ್ಕೂ ಹೆಚ್ಚು ಪುರುಷರ ವಾಲಿಬಾಲ್ ತಂಡಗಳೊಂದಿಗೆ ಸ್ಪರ್ಧಿಸಿ, ಈ ತಂಡವು ಸೆ.21 ರಂದು ಕೊಯಂಬತ್ತೂರಿನ ಈಶ ಯೋಗ ಕೇಂದ್ರದಲ್ಲಿ ನಡೆದ ರಾಷ್ಟ್ರ ಮಟ್ಟದ ಫೈನಲ್ಸ್ ಪಂದ್ಯದಲ್ಲಿ ರನ್ನರ್ ಆಫ್ ಆಗಿತ್ತು. ಇದಕ್ಕೆ ಕೇಂದ್ರ ಕ್ರೀಡಾ ಸಚಿವ ಮನ್ಸುಖ್ ಮಂಡಾವಿಯಾ, ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್, ಚೆಸ್ಸ್ ಗ್ರ್ಯಾಂಡ್‌ಮಾಸ್ಟರ್ ವೈಶಾಲಿ ರಮೇಶ್‌ಬಾಬು ಮತ್ತು ಪ್ಯಾರಾಲಿಂಪಿಕ್ ಪದಕ ವಿಜೇತೆ ಭಾವಿನಾ ಪಟೇಲ್ ಸದ್ಗುರುವಿನ ಸಮ್ಮುಖದಲ್ಲಿ 3 ಲಕ್ಷ ನಗದು ಬಹುಮಾನವನ್ನೂ ನೀಡಿದರು.
ಪ್ರಸಕ್ತ ಸಾಲಿನ ಈಶ ಗ್ರಾಮೋತ್ಸವದಲ್ಲಿ ಕರ್ನಾಟಕದ 18 ಜಿಲ್ಲೆಗಳಿಂದ 7,200 ಕ್ಕೂ ಹೆಚ್ಚು ಗ್ರಾಮೀಣ ಸ್ಪರ್ಧಿಗಳು ದಾಖಲೆಯ ಮಟ್ಟದಲ್ಲಿ ಭಾಗವಹಿಸಿದ್ದರು. ರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಕೇರಳ, ತೆಲಂಗಾಣ ಮತ್ತು ಒಡಿಶಾ ಸೇರಿದಂತೆ ೬ ರಾಜ್ಯಗಳಲ್ಲಿ ಮತ್ತು ಪುದುಚೇರಿ ಕೇಂದ್ರಾಡಳಿತ ಪ್ರದೇಶದಲ್ಲಿ ಸ್ಪರ್ಧೆಗಳು ನಡೆದಿದ್ದು 63,220 ಕ್ಕೂ ಹೆಚ್ಚು ಸ್ಪರ್ಧಿಗಳು ಉತ್ಸಾಹದಿಂದ ಭಾಗವಹಿಸಿದ್ದರು.
ಕಳೆದ 2004ರಲ್ಲಿ ಸದ್ಗುರುಗಳು ಕ್ರೀಡಾ ಗ್ರಾಮೋತ್ಸವಕ್ಕೆ ಚಾಲನೆ ನೀಡಿದರು. ಗ್ರಾಮೀಣ ಜನರ ಜೀವನದಲ್ಲಿ ಕ್ರೀಡೆ ಮತ್ತು ಆಟದ ಚೈತನ್ಯವನ್ನು ತರುವ ಉದ್ದೇಶಿತ ಈ ಕ್ರೀಡಾಕೂಟದಲ್ಲಿ ವೃತ್ತಿಪರ ಆಟಗಾರರಿಗಲ್ಲದೇ ದಿನಗೂಲಿ ಕಾರ್ಮಿಕರು ಮತ್ತು ಗೃಹಿಣಿಯರು ಭಾಗವಹಿಸಿದ್ದರು.