ಶಿರಾ ತಾಲೂಕು ಚಿಕ್ಕನಹಳ್ಳಿಯ ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಜಿಲ್ಲಾಧಿಕಾರಿ ಶುಭಕಲ್ಯಾಣ್​ ಅನಿರೀತ ಭೇಟಿ ನೀಡಿ ಪರಿಶೀಲಿಸಿದರು. 
ಜಿಲ್ಲೆ

ನಿಮ್ಮ ಮನೆ ಶೌಚಗೃಹ ಹೀಗೆ ಇದೆಯಾ?

ತುಮಕೂರು ಡೆಸ್ಕ್
ಚಿಕ್ಕನಹಳ್ಳಿ ಮುರಾರ್ಜಿ ವಸತಿ ಶಾಲೆ ವಾರ್ಡನ್​ಗೆ ಡಿಸಿ ಶುಭಕಲ್ಯಾಣ್​ ಪ್ರಶ್ನೆ

ಶಿರಾ: ನಿಮ್ಮ ಮನೆಯಲ್ಲಿ ಟಾಯ್ಲೆಟ್​ (ಶೌಚಗೃಹ) ಹೀಗೆ ಇಟ್ಟು ಕೊಳ್ಳುತ್ತೀರಾ? ಹೀಗೆಂದ ಜಿಲ್ಲಾಧಿಕಾರಿ ಶುಭಕಲ್ಯಾಣ್​, ಚಿಕ್ಕನಹಳ್ಳಿ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ದುರ್ವಾಸನೆ ಬೀರುತ್ತಿದ್ದ ಶೌಚಗೃಹ ಕಂಡು ವಾರ್ಡನ್​ನನ್ನು ತರಾಟೆಗೆ ತೆಗೆದುಕೊಂಡ ಪರಿ.


ಡೆಂಘೆ ಪ್ರಕರಣಗಳು ಜಿಲ್ಲೆಯಲ್ಲಿ ಹೆಚ್ಚುತ್ತಿದ್ದು ಸ್ವಚ್ಛ ವಾಗಿಟ್ಟುಕೊಳ್ಳಬೇಕು ಎಂದು ಗೊತ್ತಾಗುವುದಿಲ್ಲವೇ?. ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ವಸತಿ ನಿಲಯದ ವಿದ್ಯಾರ್ಥಿಗಳು ಮಲಗುವ ಕೋಣೆ, ಭೋಜನಾಲಯ, ಅಡುಗೆ ಕೋಣೆ, ಶೌಚಗೃಹಗಳು ಸೇರಿ ವಸತಿ ನಿಲಯದ ಆವರಣದ ಸುತ್ತಮುತ್ತ ಸ್ವಚ್ಛತೆ ಕಾಪಾಡಕೊಳ್ಳಬೇಕು. ಕಾಂಪೌಂಡ್​ನೊಳಗೆ ನಾಯಿ ನುಸುಳದಂತೆ ಕ್ರಮ ವಹಿಸಬೇಕೆಂದು ಖಡಕ್​ ಸೂಚನೆ ನೀಡಿದರು.


ಪುಡ್​ ಕಲರ್​ ಬಳಸಬೇಡಿ: ಅಡುಗೆಗೆ ಯಾವುದೇ ಪುಡ್​ ಕಲರ್​ ಬಳಸಬಾರದು. ಅಡುಗೆ ತಯಾರಿಕೆಯ ಪಾತ್ರೆಗಳು ಸ್ವಚ್ಛವಾಗಿರಬೇಕು. ಆಹಾರ ತಯಾರಿಕೆಯಲ್ಲಿ ಹುಳುಗಳಿಲ್ಲದ ದವಸ-ಧಾನ್ಯ, ಉತ್ತಮ ಅಡುಗೆ ಎಣ್ಣೆ ಬಳಸಬೇಕು. ಮಕ್ಕಳ ಆರೋಗ್ಯ ನಿಮ್ಮ ಕೈಯಲ್ಲಿದ್ದು, ಶುಚಿಯಾದ ಆಹಾರ ತಯಾರಿಸುವಂತೆ ಅಡುಗೆ ಸಿಬ್ಬಂದಿಗೆ ಜಿಲ್ಲಾಧಿಕಾರಿ ಶುಭಕಲ್ಯಾಣ್​ ತಾಕೀತು ಮಾಡಿದರು.


ಡಿಸಿ ಭೇಟಿ ಅನಿರೀಕ್ಷಿತ: ಶಿರಾ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗ, ನಗರದಲ್ಲಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಹಾಗೂ ಸಾರ್ವಜನಿಕ ಆಸ್ಪತ್ರೆ, ಪಶು ಆಸ್ಪತ್ರೆ, ಅಲ್ಲದೆ ನಗರದ ವಿವಿಧ ವಾರ್ಡ್​ಗಳಿಗೆ ಅನಿರೀಕ್ಷಿತ ಭೇಟಿ ನೀಡಿದ ಶುಭಕಲ್ಯಾಣ್​ ಪರಿಶೀಲಿಸಿದರು. ಡೆಂಘೆ ಹೆಚ್ಚಳ ಹಿನ್ನೆಲೆ ಸ್ವಚ್ಛತೆಗೆ ಒತ್ತುಕೊಡುವಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟವರಿಗೆ ಕಿವಿಹಿಂಡಿದರು.

ಮಕ್ಕಳ ಐಕ್ಯೂ ಟೆಸ್ಟ್​!
ವಸತಿ ಶಾಲೆಯ 8, 9, 10ನೇ ತರಗತಿ ವಿದ್ಯಾರ್ಥಿಗಳ ಕೋಣೆಗೆ ಭೇಟಿ ನೀಡಿದ ಶುಭಕಲ್ಯಾಣ್​, ಮಕ್ಕಳ ಬುದ್ಧಿಮತ್ತೆ ಪರೀಸಿದರು. ಮಗ್ಗಿ, ಆಂಗ್ಲ ಪದಗಳ ಸ್ಪೆಲಿಂಗ್​ ಕೇಳಿದರಲ್ಲದೆ ಕನ್ನಡ ಪುಸ್ತಕದಲ್ಲಿ ಸಾಹಿತ್ಯ ಭಾಗವನ್ನು ಓದಿಸಿದರು. ಶಿಕ್ಷಕರ ಬೋಧನಾ ಕ್ರಮದ ಬಗ್ಗೆಯು ವಿದ್ಯಾರ್ಥಿಗಳಿಂದ ಮಾಹಿತಿ ಪಡೆದರಲ್ಲದೆ, ಯಾವುದೇ ತಪ್ಪಿಲ್ಲದೆ ಮಗ್ಗಿ ಒಪ್ಪಿಸಿದ ವಿದ್ಯಾರ್ಥಿ ತನ್ಮಯ್​ನನ್ನು ಬೆನ್ನತಟ್ಟಿ ಪ್ರಶಂಸಿದರು. ಸೇನೆ ಸೇರುವ ಬಯಕೆಯನ್ನು ತನ್ಮಯ್​ ಈ ವೇಳೆ ವ್ಯಕ್ತಪಡಿಸಿದ. ಓದುವ ಉದ್ದೇಶದಿಂದಲೇ ವಸತಿ ನಿಲಯಕ್ಕೆ ದಾಖಲಾಗಿದ್ದೀರಿ. ಸಮಯ ವ್ಯರ್ಥ ಮಾಡದೆ ಶಿಕ್ಷಕರು ಬೋಧಿಸುವ ಪಠ್ಯವನ್ನು ನಿರಂತರವಾಗಿ ಅಭ್ಯಾಸ ಮಾಡಿದಾಗ ಮಾತ್ರ ಉಜ್ವಲ ಭವಿಷ್ಯ ನಿಮ್ಮದಾಗುತ್ತದೆ. ಪಠ್ಯ ಅರ್ಥವಾಗದೇ ಸಂದೇಹಗಳಿದ್ದಲ್ಲಿ ಬಿಡುವಿನ ವೇಳೆಯಲ್ಲಿ ಆಯಾ ಸಂಬಂಧಪಟ್ಟ ವಿಷಯ ಶಿಕ್ಷಕರಿಂದ ಪರಿಹರಿಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು. ಇನ್ನೂ ವಿಷಯ ಗ್ರಹಿಕೆಯಲ್ಲಿ ಹಿಂದೆಬಿದ್ದಿರುವ ವಿದ್ಯಾರ್ಥಿಗಳನ್ನು ಪತ್ತೆ ಹಚ್ಚಿ ವಿಶೇಷ ತರಗತಿಗಳನ್ನು ಮಾಡಿ. ಪ್ರಸಕ್ತ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಶೇ.100ರಷ್ಟು ಬರಬೇಕು ಎಂದು ಬೋಧಕ ವರ್ಗದವರಿಗೆ ಸೂಚನೆ ನೀಡಿದರು. ಪ್ರಾಂಶುಪಾಲ ಜಗದೀಶ್​ ಕಣಕಲ್​, ನಿಲಯದ ಮೇಲ್ವಿಚಾರಕ ಗಿರೀಶ್​, ಶಿಕ್ಷಕರಾದ ಮಂಜುಶ್ರೀ, ಅಂಬುಜ ಇದ್ದರು.

ಕಂದಾಯ ಪ್ರಗತಿ ಸಾಧಿಸಲು ಸೂಚನೆ: ಯಲಿಯೂರು ಗ್ರಾಮಕ್ಕೆ ಭೇಟಿ ನೀಡಿದ ಶುಭಕಲ್ಯಾಣ್​, ಬಾಕಿ ಇರುವ ಪಹಣಿಗೆ ಆಧಾರ್​ ಜೋಡಣೆ, ಲ್ಯಾಂಡ್​ ಬೀಟ್​, ಮರಣ ಪ್ರಮಾಣ ಪತ್ರ, ಪಿಂಚಣಿ ವಿತರಣೆ, ಪೌತಿ ಖಾತೆ ಅರ್ಜಿಗಳನ್ನು ವಿಲೇವಾರಿ ಮಾಡಿ ಕಂದಾಯ ಪ್ರಗತಿ ಸಾಧಿಸಬೇಕು. ಗ್ರಾಮಗಳಲ್ಲಿ 2-3 ತಲೆಮಾರುಗಳಿಂದ ಮೃತಪಟ್ಟವರ ವಾರಸುದಾರರ ಹೆಸರಿಗೆ ಪೌತಿ ಖಾತೆಯಾಗದೆ ಅರ್ಹರಿಗೆ ಸರ್ಕಾರಿ ಸವಲತ್ತುಗಳನ್ನು ನೀಡಲು ಸಮಸ್ಯೆಯಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳು ಗಮನಹರಿಸುವಂತೆ ಸೂಚನೆ ನೀಡಿದರು. ಮಧುಗಿರಿ ಉಪವಿಭಾಗಕ್ಕೆ ಸಂಬಂಧಿಸಿದಂತೆ ಜುಲೈ ಅಂತ್ಯದೊಳಗೆ 1500 ಪೌತಿ ಖಾತೆ ಅರ್ಜಿ ವಿಲೇವಾರಿ ಮಾಡಲು ಗುರಿ ನೀಡಲಾಗಿದೆಯಾದರೂ ನಿರೀಕ್ಷಿತ ಪ್ರಗತಿಯಾಗಿಲ್ಲ. ಕೂಡಲೇ ಅಧೀನ ಅಧಿಕಾರಿಗಳಿಗೆ ಪವತಿ ಖಾತೆ ಪ್ರಗತಿ ಸಾಧಿಸಬೇಕು. ಇನ್ನು ಮೇ ತಿಂಗಳಿನಿಂದ ಗೃಹಲಕ್ಷಿ$್ಮ ಯೋಜನೆಯಡಿ 2000 ರೂ. ಖಾತೆಗೆ ಜಮೆಯಾಗಿಲ್ಲವೆಂದು ಮಹಿಳೆಯರಿಂದ ದೂರು ಬರುತ್ತಿರುವುದರಿಂದ ಬಾಕಿ ಇರುವ ಹಣ ಫಲಾನುಭವಿಗಳ ಖಾತೆಗೆ ಜಮೆ ಮಾಡುವ ಬಗ್ಗೆ ಕೂಡಲೇ ಕ್ರಮವಹಿಸಬೇಕೆಂದು ಸ್ಥಳದಲ್ಲಿದ್ದ ಎಸಿ ಗೋಟೂರು ಶಿವಪ್ಪ ಅವರಿಗೆ ನಿರ್ದೇಶನ ನೀಡಿದರು.