ಕೋಲಾರ: ಬೆಳೆಗಾರರು ಕಂಗಾಲಾಗುವಂತೆ ಮಾಡಿರುವ ಮಾವಿನ ದರ ಕುಸಿತವನ್ನು ನಿಯಂತ್ರಿಸಿ ಬೆಂಬಲ ಬೆಲೆ ನಿಗದಿ ಮಾಡುವ ಸಂಬಂಧ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸದೆ ಇರುವುದು ಮಾವು ಬೆಳೆಗಾರರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಬಾರಿ ಹಿಂದೆಂದೂ ಕುಸಿಯದ ರೀತಿಯಲ್ಲಿ ಮಾವಿನ ಬೆಲೆ ಕುಸಿದಿದೆ. ಮೇ ಮೂರನೇ ವಾರದಿಂದ ಮಾವು ಮಾರುಕಟ್ಟೆ ಶುರುವಾಗಿದ್ದು, ಇದುವರೆಗೂ ಮಲ್ಲಿಕಾ, ಬಾದಾಮಿ, ರಾಜಗೀರ್ ತಳಿಗಳು ಸ್ವಲ್ಪಮಟ್ಟಿಗೆ ಆರಂಭದಲ್ಲಿ ದರ ಕಾಯ್ದುಕೊಂಡಿದ್ದವು. ನಂತರ ಕುಸಿದ ಯಾವುದೇ ತಳಿಯ ಬೆಲೆಯಲ್ಲೂ ಚೇತರಿಕೆಯಾಗಿಲ್ಲ.
ರೈತರ ನಿಯೋಗವು ಬೆಂಗಳೂರಿನಲ್ಲಿ ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಅವರಿಗೆ ಮನವಿ ಸಲ್ಲಿಸಿತ್ತು, ಸಚಿವ ಸಂಪುಟದಲ್ಲಿ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದ್ದರು. ಆದರೆ ಅದು ಹುಸಿಯಾಗಿದೆ.
ವಿಶೇಷವಾಗಿ ಮಲ್ಲಿಕಾ, ಬಾದಾಮಿ, ರಾಜಗೀರ್ , ಬೇನಿಶಾ, ದಶೇರಿ, ನೀಲಂ, ತೋತಾಪುರಿ ತಳಿಗಳನ್ನು ಜಿಲ್ಲೆಯ ಶ್ರೀನಿವಾಸಪುರ, ಮುಳಬಾಗಿಲು, ಕೋಲಾರ, ಬಂಗಾರಪೇಟೆ, ಕೆಜಿಎಫ್, ಮಾಲೂರು ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಸೇರಿ ರಾಜ್ಯದ ಕೆಲ ಜಿಲ್ಲೆಗಳಲ್ಲಿ ರೈತರು ಬೆಳೆಯುತ್ತಿದ್ದಾರೆ. ಅದರಲ್ಲೂ ತೋತಾಪುರಿ ತಳಿ ಹೆಚ್ಚಾಗಿ ಬೆಳೆಯುತ್ತಿದ್ದು, ಪ್ರತಿ ವರ್ಷ ಆದಾಯ ಗಳಿಸುತ್ತಿದ್ದರು. ಇದೀಗ ಮಾರುಕಟ್ಟೆಯಲ್ಲಿ 4.5 ರೂ. ನಿಂದ 5 ರೂ. ತನಕ ಮಾರಾಟವಾಗುತ್ತಿದ್ದು, ಬೆಳೆಗಾರರು ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಬೆಲೆ ಕುಸಿತದಿಂದ ಬೇಸತ್ತಿರುವ ರೈತರು ಪ್ರತಿಭಟನೆ, ಬಂದ್ ಮಾಡಿದರು. ಕೆಲ ಬೆಳೆಗಾರರು ಕೇಂದ್ರ ತೋಟಗಾರಿಕೆ ಸಚಿವ ಶಿವರಾಜ್ ಸಿಂಗ್ ಚೌಹಾಣ್, ತೋಟಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ಗೆ ಮನವಿ ಸಲ್ಲಿಸಿದರು. ಇದಕ್ಕೆ ಸ್ಪಂದನೆ ಸಿಕ್ಕಿತಾದರೂ ಸರ್ಕಾರ ರ್ನಿದಿಷ್ಟ ತೀರ್ಮಾನ ಕೈಗೊಳ್ಳದೆ ಇರುವುದು ಮಾವು ಬೆಳೆಗಾರರ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕಿದಂತಾಗಿದೆ.
ಸಭೆ ಸಮಾರಂಭಗಳಲ್ಲಿ ರೈತರ ಬಗ್ಗೆ ಜಪ ಮಾಡುವ ಹಾಲಿ, ಮಾಜಿ ಶಾಸಕರು, ಸಂಸದರು, ಸರ್ಕಾರದ ಮೇಲೆ ಒತ್ತಡ ತಂದು ಬೆಂಬಲ ಬೆಲೆ ಘೋಷಣೆ ಮಾಡಿಸಲು ಪ್ರಯತ್ನ ಮಾಡಿಲ್ಲ. ಇನ್ನು ಅವಿಭಜಿತ ಕೋಲಾರ ಜಿಲ್ಲೆಯನ್ನು ಪ್ರತಿನಿಧಿಸಿ ಸರ್ಕಾರದ ಸಚಿವ ಸಂಪುಟದಲ್ಲಿ ಸಚಿವರಾಗಿರುವವರು ಸಹ ಗಮನ ಹರಿಸದೆ ಇರುವುದು ಜಿಲ್ಲೆಯ ರೈತರ ಬಗ್ಗೆ ಇವರಿಗೆ ಕಾಳಜಿ ಇಲ್ಲವೇ ಎಂಬ ಪ್ರಶ್ನೆ ಹುಟ್ಟುಹಾಕಿದೆ.
ಎರಡೂ ಜಿಲ್ಲೆಯ ಸಚಿವರಿಗಿಲ್ಲ ಕಾಳಜಿ..?
ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಬಹುತೇಕ ಸಚಿವರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಮಾವು ಬೆಳೆಗಾರರೂ, ಕೃಷಿಕರೂ ಆಗಿದ್ದಾರೆ. ಸಚಿವ ಸಂಪುಟದಲ್ಲಿ ಕೋಲಾರ ಜಿಲ್ಲೆಯವರಾದ ಕೆ.ಎಚ್.ಮುನಿಯಪ್ಪ, ಕೃಷ್ಣಬೈರೇಗೌಡ, ಚಿಕ್ಕಬಳ್ಳಾಪುರ ಜಿಲ್ಲೆಯ ಎಂ.ಸಿ.ಸುಧಾಕರ್ ಮಂತ್ರಿಗಳಾಗಿದ್ದಾರೆ. ಇವರ ಜತೆಗೆ ಶಾಸಕರು ಸಹ ಇದ್ದಾರೆ. ಬೆಲೆ ಕುಸಿತದಿಂದ ಮಾವು ಬೆಳೆಗಾರರು ಗೋಳಾಡುತ್ತಿದ್ದರೂ ಸಿಎಂ, ಆಯಾ ಇಲಾಖೆಯ ಸಚಿವರ ಮೇಲೆ ಒತ್ತಡ ತಂದು ಬೆಲೆ ನಿಗದಿ ಮಾಡಿಸಲು ಪ್ರಯತ್ನಿಸದೆ ಇರುವುದಬೆಳೆಗಾರರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಪತ್ರ ವ್ಯವಹಾರಕ್ಕೆ ಸಿಎಂ ಸಿಮೀತ...!
ಸಿದ್ದರಾಮಯ್ಯ ಅವರು ರೈತರ ವಿಚಾರದಲ್ಲಿ ನಿರ್ಧಾರ ಕೈಗೊಳ್ಳುವ ಅಧಿಕಾರ ಇದ್ದರೂ ಸಹ, ಜೂ.12ರಂದು ಆಂಧ್ರ ಸಿಎಂ ಚಂದ್ರಬಾಬು ನಾಯ್ಡುಗೆ ಪತ್ರ ಬರೆದು ಚಿತ್ತೂರಿಗೆ ಕರ್ನಾಟದಿಂದ ಬರುವ ಮಾವನ್ನು ಖರೀದಿ ಮಾಡಲು ಅವಕಾಶ ನೀಡಬೇಕು ಎಂದು ಕೋರಿದ್ದಾರೆ. ಅದೇ ರೀತಿ ಶುಕ್ರವಾರ ಕೇಂದ್ರ ತೋಟಗಾರಿಕೆ ಸಚಿವ ಶಿವರಾಜ್ ಸಿಂಗ್ ಅವರಿಗೆ ಪತ್ರ ಬರೆದು ಮಾವಿಗೆ ಬೆಂಬಲ ಬೆಲೆ ನಿಗದಿ ಮಾಡಲು ಕೇಂದ್ರ ಸರ್ಕಾರದಿಂದ ಕ್ರಮವಹಿಸಬೇಕು ಎಂದು ಸಹಕಾರ ಕೋರಿದ್ದಾರೆ. ಇದೆಲ್ಲ ಕಾರ್ಯಗತವಾಗದ ಕೆಲಸಗಳಾಗಿದ್ದು ಪತ್ರವ್ಯವಹಾರದಲ್ಲೇ ಕಾಲ ಹರಣ ಮಾಡುವ ಬದಲು ನಿರ್ಧಾರ ಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ಜಿಲ್ಲಾಡಳಿತದಿಂದ ಪ್ರಸ್ತಾವ ಸಲ್ಲಿಕೆ
ಜಿಲ್ಲೆಯಲ್ಲಿ 44,717 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದ್ದು, ತೋತಾಪುರಿ ತಳಿಯಲ್ಲಿ 31,300 ಹೆಕ್ಟೇರ್ ಹಾಗೂ 13,417 ಹೆಕ್ಟೇರ್ ಪ್ರದೇಶದಲ್ಲಿ ಇತರೆ ತಳಿಗಳನ್ನು ಬೆಳೆಯಲಾಗುತ್ತಿದೆ. ಈ ಬಾರಿ ಶೇ.60 ತೋತಾಪುರಿ ತಳಿ ಇಳುವರಿ ಅಂದಾಜಿಸಲಾಗಿದ್ದು, ಕನಿಷ್ಠ ಖರೀದಿ ದರ ನಿಗದಿಪಡಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ ಕಾರ್ಯದರ್ಶಿಗೆ ಪ್ರಸ್ತಾವ ಸಲ್ಲಿಸಿದ್ದಾರೆ.
ಜಿಲ್ಲೆಯಲ್ಲಿ 4 ಸಂಸ್ಕರಣ ಟಕಗಳಿದ್ದು, ಪ್ರತಿ ದಿನ 900 ಟನ್ ಸಂಸ್ಕರಣೆ ಮಾಡಿದರೆ 30 ದಿನಕ್ಕೆ 27,000 ಟನ್ ಸಂಸ್ಕರಣೆ ಮಾಡಬಹುದು. ಒಟ್ಟು ಇಳುವರಿಯಲ್ಲಿ ತೋತಾಪುರಿ ತಳಿಯು 1,65,000 ಟನ್ ಅಂದಾಜಿಸಲಾಗಿದೆ. ಕೆಜಿ ಉತ್ಪಾದನೆಗೆ 8.55 ರೂ. ತಗಲುತ್ತದೆ. ಆದರೆ, ಸದ್ಯ ಮಾರುಕಟ್ಟೆಯಲ್ಲಿ ತೋತಾಪುರ ಕೆಜಿ 5 ರಿಂದ 6 ರೂ.ಗೆ ಮಾರಾಟವಾಗುತ್ತಿದೆ.
ಮಾವು ದರ ಕುಸಿದಿದ್ದು ಬೆಳಗಾರರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ಬಗ್ಗೆ ಸರ್ಕಾರದ ಗಮನಕ್ಕೆ ಇದ್ದರು ಸಹ ಸಿಎಂ ನಿರ್ಧಾರ ಕೈಗೊಳ್ಳುವಲ್ಲಿ ವಿಲರಾಗಿದ್ದಾರೆ. ರೈತರ ಕಣ್ಣು ಒರೆಸಲು ಪತ್ರ ವ್ಯವಹಾರಕ್ಕೆ ಸಿಮೀತರಾಗಿದ್ದಾರೆ.
> ನಾರಾಯಣಸ್ವಾಮಿ
ಮಾವು ಬೆಳೆಗಾರ, ವೆಂಕಟಾಪುರ