ಜಿಲ್ಲೆ

ಐಟಿ-ಬಿಟಿಯತ್ತ ಇನ್ವೆಸ್ಟ್​ಗೆ ಇಲ್ವೆ ಆದ್ಯತೆ

Dharwad

ಹುಬ್ಬಳ್ಳಿ: ಬೆಂಗಳೂರು ನಂತರ ಎರಡನೇ ಐಟಿ ಸಿಟಿಯಾಗಿ ಬೆಳೆಯುವ ಎಲ್ಲ ಅವಕಾಶಗಳು ಹುಬ್ಬಳ್ಳಿಗೆ ಇದ್ದರೂ ಸ್ಥಳೀಯ ಅಧಿಕಾರಿಗಳ ಅಸಹಕಾರ, ಕೆಂಪು ಪಟ್ಟಿ ಪ್ರದರ್ಶನದಿಂದಾಗಿ ಐಟಿ- ಬಿಟಿ ಕ್ಷೇತ್ರ ನಿರೀಕ್ಷಿತ ಮಟ್ಟದಲ್ಲಿ ಬೆಳೆಯಲೇ ಇಲ್ಲ.

ಇಲ್ಲಿ ಐಟಿ- ಬಿಟಿ ಕಂಪನಿ ಸ್ಥಾಪಿಸುತ್ತೇವೆ, ಜಾಗ ಕೊಡಿ ಎಂದು ವರ್ಷಗಳಿಂದ ಅಧಿಕಾರಿಗಳಿಗೆ ದುಂಬಾಲು ಬಿದ್ದವರು ತಮ್ಮ ಬೇಡಿಕೆ ಈಡೇರದೆ ಸುಮ್ಮನಾಗಿದ್ದಾರೆ. ಇನ್ವೆಸ್ಟ್ ಕರ್ನಾಟಕ ಹೂಡಿಕೆದಾರರ ಸಮ್ಮೇಳನ ನಡೆಸುವ ಹುಮ್ಮಸ್ಸಿನಲ್ಲಿರುವ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಅವರು ಮೊದಲು ಇಂತಹ ಸಮಸ್ಯೆಗಳ ಬಗ್ಗೆ ಗಮನ ಹರಿಸಬೇಕಾಗಿದೆ.

ಏನಿದು ಸಮಸ್ಯೆ?: ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ಹುಬ್ಬಳ್ಳಿಯಲ್ಲಿ ಐಟಿ ಪಾರ್ಕ್ ನಿರ್ಮಾಣವಾಯಿತು. ಆ ಮೂಲಕ ಐಟಿ- ಬಿಟಿ ಕ್ಷೇತ್ರಕ್ಕೆ ದೊಡ್ಡ ಪ್ರಮಾಣದಲ್ಲಿ ಹುಬ್ಬಳ್ಳಿ ತೆರೆದುಕೊಂಡಿತ್ತು. ಮುಂದೆ 2006-07ರಲ್ಲಿ ನವನಗರದಲ್ಲಿ ಸುಮಾರು 25 ಎಕರೆಯಲ್ಲಿ ಆರ್ಯಭಟ ಟೆಕ್ ಪಾರ್ಕ್ ನಿರ್ವಿುಸಲಾಯಿತು. ಅಲ್ಲಿ ಸದ್ಯಕ್ಕೆ 5 ಕಂಪನಿಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಕೆಲವರು ಜಾಗ ತೆಗೆದುಕೊಂಡು ಚಟುವಟಿಕೆ ಆರಂಭಿಸಿಲ್ಲ. ಇನ್ನೂ 10 ಎಕರೆ ಜಾಗ ಖಾಲಿ ಬಿದ್ದಿದ್ದು, ಕಂಪನಿ ಆರಂಭಿಸುವ ಆಸೆಯಿಂದ ಹತ್ತಾರು ವರ್ಷದಿಂದ ಪ್ರಯತ್ನ ನಡೆಸುತ್ತಿರುವವರಿಗೆ ಬರೀ ನಿರಾಸೆಯಾಗುತ್ತಿದೆ.

ಆರ್ಯಭಟ ಟೆಕ್ ಪಾರ್ಕ್ ಜಾಗ ಹಂಚಿಕೆಗೆ ಮಹಾನಗರ ಪಾಲಿಕೆ 2016ರ ಜುಲೈ 15ರಂದು ಪತ್ರಿಕೆ ಮೂಲಕ ಪ್ರಕಟಣೆ ಹೊರಡಿಸಿತ್ತು. ಅದರಂತೆ ಹತ್ತಾರು ಕಂಪನಿಗಳು ಜಾಗ ಬಯಸಿ ಅರ್ಜಿ ಸಲ್ಲಿಸಿದ್ದವು. ಅದರಲ್ಲಿ ಐಯಾನ್ ಐಡಿಯಾ ಕಂಪನಿಗೆ 1.50 ಎಕರೆ, ಗುಂಬಿ ಸಾಫ್ಟ್​ವೇರ್ ಲಿಮಿಟೆಡ್​ಗೆ 1 ಎಕರೆ, ಸಿಸ್​ವ್ಯಾಟಿಕ್ ಸೊಲುಷನ್ಸ್ ಲಿಮಿಟೆಡ್​ಗೆ 20 ಗುಂಟೆ ಹಾಗೂ ಕ್ಲಿಕ್ ಹುಬ್ಬಳ್ಳಿ ಡಾಟ್ ಕಾಂ ಸಂಸ್ಥೆಗೆ 20 ಗುಂಟೆ ಜಾಗ ನೀಡಲು ಅಂದು ಸಮಿತಿ ಶಿಫಾರಸು ಮಾಡಿದೆ.

ಆ ಶಿಫಾರಸು ಮಾಡಿದ ಕಡತ ಈಗ ಬೆಂಗಳೂರಿನ ನಗರಾಭಿವೃದ್ಧಿ ಇಲಾಖೆ ಬಳಿ ಇದೆ ಎಂದು ಮಹಾನಗರ ಪಾಲಿಕೆ ಅಧಿಕಾರಿಗಳು ಹೇಳುತ್ತಾರೆ. ಕಳೆದ ನಾಲ್ಕು ವರ್ಷದಿಂದ ಅಲ್ಲಿಯೇ ಆ ಕಡತ ಕೊಳೆಯುತ್ತಿದೆ. ಉತ್ತರ ಕರ್ನಾಟಕ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ವರ್ಗಗಳ ಕಲ್ಯಾಣ ಸಂಸ್ಥೆ ಅಧ್ಯಕ್ಷ ಬಸೀರ್ ಅಹ್ಮದ ಸವಣೂರ ಆರ್ಯಭಟ ಟೆಕ್ ಪಾರ್ಕ್ ಜಾಗ ಹಂಚಿಕೆ ತ್ವರಿತ ಗತಿಯಲ್ಲಿ ಆಗಬೇಕೆಂದು ರಾಜ್ಯ ಸರ್ಕಾರದೊಂದಿಗೆ ಹಲವಾರು ಪತ್ರ ವ್ಯವಹಾರ ಮಾಡಿದ್ದಾರೆ. ಮೇಲ್ಮಟ್ಟದ ಅಧಿಕಾರಿಗಳು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸುತ್ತಾರೆ.

ಜಮೀನು ಆಕಾಂಕ್ಷಿ ಐಟಿ ಕಂಪನಿಯವರು ಸಹ ಜನಪ್ರತಿನಿಧಿಗಳನ್ನು ಭೇಟಿ ಮಾಡಿ ಒತ್ತಾಯಿಸುತ್ತಲೇ ಬಂದಿದ್ದಾರೆ. ಯಾವುದೇ ಪ್ರಯೋಜನವಾಗಿಲ್ಲ.

ಏನಾಗಬೇಕಿದೆ: ಜಿಲ್ಲಾ ಉಸ್ತುವಾರಿ ಹಾಗೂ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಅವರು ಈ ವಿಚಾರವನ್ನು ಒಂದಿಷ್ಟು ಗಂಭೀರವಾಗಿ ಪರಿಗಣಿಸಬೇಕಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಆತ್ಮೀಯತೆ ಹೊಂದಿರುವ ಶೆಟ್ಟರ್ ಅವರು ನಗರಾಭಿವೃದ್ಧಿ ಇಲಾಖೆಯಲ್ಲಿ ಬಾಕಿ ಉಳಿದಿರುವ ಕಡತ ವಿಲೇವಾರಿ ಮಾಡಿಸಬೇಕಿದೆ.

ನಾಲ್ಕು ವರ್ಷಗಳ ಹಿಂದೆಯೇ ಎಲ್ಲ ಪ್ರಕ್ರಿಯೆ ಮುಗಿದು ಈಗ ಜಾಗ ಹಂಚಿಕೆಯ ಆದೇಶ ನೀಡುವುದು ಬಾಕಿ ಇದೆ. ಅದನ್ನು ಕೊಡಿಸಿ ಉಳಿದ ಜಾಗ ವಿತರಣೆಗೂ ಆಸಕ್ತ ಕಂಪನಿಗಳನ್ನು ಕರೆದು ಮಾತುಕತೆ ನಡೆಸಬೇಕು.

ಇನ್ನೊಂದು ಮಹತ್ವದ ಸಂಗತಿ ಎಂದರೆ ಭವಿಷ್ಯದಲ್ಲಿ ಐಟಿ ಬೆಳವಣಿಗೆ ದೃಷ್ಟಿಯಿಂದ ಗಾಮನಗಟ್ಟಿ ಕೈಗಾರಿಕೆ ಪ್ರದೇಶದಲ್ಲಿ 100 ಎಕರೆ ಐಟಿ- ಬಿಟಿಗಾಗಿಯೇ ಕಾಯ್ದಿರಿಸುವ ಕೆಲಸ ಮಾಡಬೇಕು. ಗಾಮನಗಟ್ಟಿ ಕೈಗಾರಿಕಾ ಪ್ರದೇಶ ಐಟಿ ಬೆಳವಣಿಗೆಗೆ ಪ್ರಶಸ್ತ ಸ್ಥಳವಾಗಿದೆ ಎಂಬುದು ಉದ್ಯಮಿಗಳ ಅನಿಸಿಕೆ.

ಸಂಕಲ್ಪ ಸೆಮಿ ಕಂಡಕ್ಟರ್, ಎನ್​ಎಸ್ ಇನ್ಪೋಟೆಕ್, ಏಬಲ್ ಡಿಸೈನ್ ಇಂಜಿನಿಯರಿಂಗ್, ಮಹಾವೀರ ಇನ್ಪೋವೇ, ಪ್ರೊಲಿಂ ಸೇರಿ ಐದಾರು ಕಂಪನಿಗಳು ಮಾತ್ರ ಆರ್ಯಭಟ ಟೆಕ್ ಪಾರ್ಕ್​ನಲ್ಲಿ ಚಟುವಟಿಕೆ ನಡೆಸುತ್ತಿವೆ.

ಐಟಿ ದಿಗ್ಗಜರನ್ನು ಕರೆ ತನ್ನಿ: ಹುಬ್ಬಳ್ಳಿ- ಧಾರವಾಡ, ಬೆಳಗಾವಿ ಸೇರಿ ಉತ್ತರ ಕರ್ನಾಟಕ ಭಾಗದಲ್ಲಿ ಹಲವಾರು ಇಂಜಿನಿಯರಿಂಗ್ ಕಾಲೇಜ್​ಗಳಿದ್ದು, ಐಟಿ- ಬಿಟಿಗೆ ಕೌಶಲ ಮಾನವ ಸಂಪನ್ಮೂಲ ಒದಗಿಸಲು ಸಜ್ಜಾಗಿವೆ. ಈ ಹಿನ್ನೆಲೆಯಲ್ಲಿ ಇನ್ವೆಸ್ಟ್ ಕರ್ನಾಟಕದಲ್ಲಿ ಐಟಿ ದಿಗ್ಗಜ ಕಂಪನಿಗಳು ಭಾಗವಹಿಸುವಂತೆ ಆಹ್ವಾನಿಸುವ ಜವಾಬ್ದಾರಿ ಕೂಡ ರಾಜ್ಯ ಸರ್ಕಾರದ ಮೇಲಿದೆ. ಈಗಾಗಲೇ ಇನ್ಪೋಸಿಸ್ ಬಂದಿದ್ದರೂ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಿಲ್ಲ. ಐಟಿ ಕಂಪನಿಗಳು ಇಲ್ಲಿಗೆ ಬರಲು ಏಕೆ ಹಿಂಜರಿಯುತ್ತಿವೆ? ಅವುಗಳಿಗೆ ಇರುವ ಸಮಸ್ಯೆ ಏನು ಎಂಬುದನ್ನೂ ಸಚಿವ ಶೆಟ್ಟರ್ ತಿಳಿದುಕೊಳ್ಳಬೇಕು. ಜೊತೆಗೆ ಈ ಭಾಗಕ್ಕೆ ಐಟಿ ಕಂಪನಿಗಳು ಬರಲು ಸರ್ಕಾರ, ಸ್ಥಳೀಯಾಡಳಿತ ಒದಗಿಸುವ ಸೌಲಭ್ಯಗಳ ಬಗ್ಗೆಯೂ ಗಮನ ಸೆಳೆಯುವ ಅಗತ್ಯವಿದೆ.

ಆರ್ಯಭಟ ಟೆಕ್ ಪಾರ್ಕ್​ನಲ್ಲಿ ಐಟಿ ವಾತಾವರಣ ನಿರ್ಮಾಣವಾಗಬೇಕಾದರೆ 25 ಎಕರೆಯಲ್ಲಿ ಪೂರ್ತಿಯಾಗಿ ಕಂಪನಿಗಳು ತುಂಬಿಕೊಳ್ಳಬೇಕು, ಕುಡಿಯುವ ನೀರು ಪೂರೈಕೆ, ತ್ಯಾಜ್ಯ ವಿಲೇವಾರಿ ಸೇರಿ ಅಗತ್ಯ ಸೌಲಭ್ಯ ಕಲ್ಪಿಸಬೇಕು. ಜಾಗದ ನಿರೀಕ್ಷೆಯಲ್ಲಿರುವ ಐಟಿ ಕಂಪನಿಯವರ ಬೇಡಿಕೆ ಶೀಘ್ರ ಈಡೇರಿಸಬೇಕು. | ಜಗದೀಶ ಹಿರೇಮಠ, ಏಬಲ್ ಡಿಸೈನ್ ಇಂಜಿನಿಯರಿಂಗ್ ಎಂಡಿ