ಜಿಲ್ಲೆ

ಕೋಲಾರಕ್ಕೇನು ಪ್ರತ್ಯೇಕ ಕಾನೂನಾ?

ಕೋಲಾರ ಡೆಸ್ಕ್

ಕೋಲಾರ: ಸಹಕಾರ ರಂಗದಲ್ಲಿ ಎಲ್ಲರಿಗೂ ಒಂದೇ ಕಾನೂನು. ಆದರೆ, ಕೋಲಾರ ಜಿಲ್ಲೆಗೆ ಮಾತ್ರ ಪ್ರತ್ಯೇಕ ಕಾನೂನು, ನಡವಳಿ ಇದ್ದಹಾಗೆ ಇದೆ ಎಂದು ಸಹಕಾರ ಇಲಾಖೆ ಸಚಿವ ಕೆ.ಎನ್​.ರಾಜಣ್ಣ ಹೇಳಿದರು.

ನಗರದ ಜಿಲ್ಲಾಡಳಿತ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಹಕಾರ ಇಲಾಖೆ, ಕೋಮುಲ್​, ಡಿಸಿಸಿ ಬ್ಯಾಂಕ್​, ಟಿಎಪಿಸಿಎಂಎಸ್​ ಸೇರಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ಇಲಾಖೆಯ ಪ್ರಗತಿಯೂ ಹೇಳಿಕೊಳ್ಳುವಷ್ಟಾಗಿಲ್ಲ, 2017&-18ರಲ್ಲಿ ವಿತರಣೆ ಮಾಡಿರುವ ಮಹಿಳಾ ಸಂಘಗಳ ಸಾಲ ಮರುಪಾವತಿಯಾಗಿಲ್ಲ, ಆಗ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದರೆ ಬ್ಯಾಂಕ್​ ಗೌರವ ಉಳಿದಿರೋದು ಎಂದರು.

ಬ್ಯಾಂಕ್​ ಆಡಳಿತ ಮಂಡಳಿಗೆ ಚುನಾವಣೆ ನಡೆದಾಗ ಸ್ಪರ್ಧಿಸುವ ಅಭ್ಯರ್ಥಿಗಳ ಹಾಗೂ ಹಿಂದಿನ ಚುನಾವಣೆಗಳಲ್ಲಿ ಆಯ್ಕೆಯಾಗಿರುವ ಅಭ್ಯರ್ಥಿಗಳ ಆಸ್ತಿ ಪ್ರಮಾಣ ಪತ್ರಗಳನ್ನು ಅಧಿಕಾರಿಗಳು ಸಂಗ್ರಹಿಸಬೇಕು. ಈ ರೀತಿ ಮಾಡಿದಾಗ ವಿತರಣೆ ಮಾಡಿರುವ ಸಾಲ ವಸೂಲಿಗೆ ಅನುಕೂಲವಾಗುತ್ತದೆ ಎಂದು ಸಲಹೆ ನೀಡಿದರು.

ಎಂಪಿಸಿಎಸ್​, ್ಯಾಕ್ಸ್​ಗಳಲ್ಲಿ ಹಣಕಾಸು ದುರುಪಯೋಗ ಪ್ರಕರಣ ಬೆಳಕಿಗೆ ಬಂದಿವೆ. ಲೆಕ್ಕಪರಿಶೋಧನೆ ಮಾಡುವಾಗ ಸಾಕಷ್ಟು ಬೆಳಕಿಗೆ ಬಂದಿದ್ದು, ಉಪ ನಿಬಂಧಕರು, ಸಹಾಯಕ ನಿಬಂಧಕರು ತಪ್ಪಿತಸ್ಥರ ವಿರುದ್ಧ ದೂರು ದಾಖಲಿಸಿ ಹಣ ವಸೂಲಿ ಕೆಲಸ ಮಾಡಬೇಕು. ಬಾಕಿ ಇರುವ ಪ್ರಕರಣಗಳ ತನಿಖೆ ಮಾರ್ಚ್​ ಅಂತ್ಯದೊಳಗೆ ಪೂರ್ಣ ಆಗಬೇಕು. ಅಂತೆಯೇ, ಯಾವ ಸಂದ ಲೆಕ್ಕ ಪರಿಶೋಧನೆ ಮಾಡಲ್ಲವೋ, ಅಂತಹವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಹಕಾರ ಇಲಾಖೆಯ ಸಹಾಯಕ ನಿಬಂಧಕ ನವೀನ್​ ಕುಮಾರ್​, ಪ್ರಕರಣ ದಾಖಲಾಗಿದ್ದರೂ ಕೆಲವರು ಕೋರ್ಟ್​ನಿಂದ ತಡೆಯಾಜ್ಞೆ ತಂದಿದ್ದಾರೆ ಎಂದರು.

ಇದಕ್ಕೆ ಗರಂ ಆದ ಸಚಿವ ಕೆ.ಎನ್​.ರಾಜಣ್ಣ, 2013ರಲ್ಲಿ ದಾಖಲಾಗಿರುವ ಪ್ರಕರಣಗಳು ಇತ್ಯರ್ಥಗೊಳ್ಳದೆ ಬಾಕಿ ಉಳಿದುಕೊಂಡಿವೆೆ. ನೀವು ಹೇಳಿದ್ದನ್ನು ಕೇಳಿಸಿಕೊಳ್ಳಲು ಬಂದಿಲ್ಲ, ದುರುಪಯೋಗಕ್ಕೆ ಸಂಬಂಧಿಸಿದ ಪ್ರಕರಣಗಳು ಜಾಸ್ತಿ ಇವೆ, ಆಗಬೇಕಾಗಿರುವ ಕೆಲಸದ ಕಡೆ ಗಮನ ಹರಿಸಿ ಎಂದು ತಾಕೀತು ಮಾಡಿದರು.

ಉಪ ವಿಭಾಗಾಧಿಕಾರಿ ಡಾ.ಮೈತ್ರಿ ಎಚ್​ಪಿಎಸ್​, ಸಹಕಾರ ಇಲಾಖೆಯ ಉಪ ನಿಬಂಧಕ ಕಿಶೋರ್​ ಕುಮಾರ್​, ಕೋಮುಲ್​ ವ್ಯವಸ್ಥಾಪಕ ನಿರ್ದೇಶಕ ಡಾ.ಗೋಪಾಲ್​ಮೂರ್ತಿ, ಡಿಸಿಸಿ ಬ್ಯಾಂಕ್​ ವ್ಯವಸ್ಥಾಪಕ ನಿರ್ದೇಶಕಿ ಶೀಲಾ ಹಾಜರಿದ್ದರು.

ಸೊಸೈಟಿಯಿಂದ ಅನ್ಯಾಯ

ಮುಳಬಾಗಿಲು ತಾಲೂಕು ಗೂವುಕುಂಟೆ ಸೊಸೈಟಿ ಕಾರ್ಯದರ್ಶಿ ಹಣ ದುರುಪಯೋಗ ಸಂಬಂಧ ದೂರು ದಾಖಲಾಗಿ ಜೈಲಿಗೆ ಹೋಗಿ ಬಂದಿದ್ದಾರೆ. ಮುಂಚೆಯಿಂದಲೂ ಅವ್ಯವಹಾರ ನಡೆದಿದೆ, ಆ ಹಿನ್ನೆಲೆಯಿಂದಲೇ ಬೋರ್ಡ್​ ನಿರ್ದೇಶಕರು ರಾಜೀನಾಮೆ ನೀಡಿದ್ದಾರೆ ಎಂದ ಶಾಸಕ ಕೊತ್ತೂರು ಜಿ.ಮಂಜುನಾಥ್​, ಕಾರ್ಯದರ್ಶಿ ಮುಳಬಾಗಿಲು ಬಿಟ್ಟು ಆಂಧ್ರದವರಿಗೆಲ್ಲ ಸಾಲ ನೀಡಿದ್ದಾರೆ ಎಂದು ದೂರಿದರು.

ಹೊಸ ಸಂಗಳ ರಚನೆಗೆ ಒತ್ತು ನೀಡಿ

ಸೆಕ್ಷನ್​ 70ರಡಿ ತಾಲೂಕಿನ ನರಸಾಪುರ ಸೊಸೈಟಿ ಸೇರಿ ವಿವಿಧ ಸಂಗಳ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಇತ್ಯರ್ಥಪಡಿಸಬೇಕು. ಲೋಪಗಳನ್ನು ಪತ್ತೆ ಮಾಡಲು ಸೂಪರ್​ವೈಸರ್​ ಇದ್ದು, ಹಾಲು ಸಂಘಗಳಿಗೆ ಮತ್ತು ಫ್ಯಾಕ್ಸ್​ ಗಳಿಗೆ ಭೇಟಿ ನೀಡಬೇಕು. ಬಾಕಿ ಇರುವ ಎಂಪಿಸಿಎಸ್​ಗಳಲ್ಲಿ ಸಾಫ್ಟ್​ವೇರ್​ ಅಳವಡಿಸಬೇಕು, ಹೊಸ ಸಂಘ ರಚನೆಗೆ ಅವಕಾಶವಿರುವೆಡೆ ಆದ್ಯತೆ ಮೇರೆಗೆ ರಚನೆ ಮಾಡಬೇಕು ಎಂದು ರಾಜಣ್ಣ ತಿಳಿಸಿದರು.

ಅಧಿಕಾರಿಗಳಿಂದ ಅಡ್ಜೆಸ್ಟ್​ಮೆಂಟ್​

ಮಾಲೂರು ಕ್ಷೇತ್ರದ ವ್ಯಾಪ್ತಿಯಲ್ಲೂ ನವೀಕರಣ ಹಾಗೂ ಸಾಲ ಮರುಪಾವತಿ ಮಾಡದೆ ಇರುವ ಸಂಘಗಳಿಗೂ ಸಾಲ ನೀಡಲಾಗಿದೆ. ಚುನಾಯಿತ ಬೋರ್ಡ್​ ಇದ್ದಾಗ ಹೆಚ್ಚು ಕಡಿಮೆ ಆಗುತ್ತದೆ. ಅಧಿಕಾರಿಗಳಿಂದ ಅಡ್ಜೆಸ್ಟ್​ಮೆಂಟ್​ ಆಗಿರುವುದರಿಂದಲೇ ದುರುಪಯೋಗ ಪ್ರಕರಣಗಳು ಬೆಳಕಿವೆ ಎಂದಿವೆ ಎಂದು ಶಾಸಕ ಕೆ.ವೈ.ನಂಜೇಗೌಡ ದೂರಿದರು. ನನ್ನ ಸ್ವಂತ ಊರಿನ ಸಂಗಳ ಹೆಸರಿನಲ್ಲಿ ಸಾಲ ಮಂಜೂರು ಮಾಡಲಾಗಿದೆ. ಆದರೆ ಯಾರೊ ಒಬ್ಬರು ದುಡ್ಡು ಎತ್ತಿಕೊಂಡು ಬಿಜಿನೆಸ್​ ಹಾಕಿಕೊಂಡರೆ ಇದಕ್ಕೆ ಹೊಣೆ ಯಾರು ಎಂದು ಪ್ರಶ್ನಿಸಿದರು. ಈ ಮಧ್ಯೆ ಎಂಎಲ್ಸಿ ಅನಿಲ್​ ಕುಮಾರ್​ ಧ್ವನಿ ಗೂಡಿಸಿ, ಕೋಲಾರ ಶಾಖೆಯಿಂದ 700 ಸಂಘಗಳಿಗೆ ನೀಡಲಾಗಿದೆ. ಮರುಪಾವತಿ ಆಗದೆ ಇರುವವುಗಳಲ್ಲಿ ಬೋಗಸ್​ ಸಂಘಗಳು ಇವೆ ಎಂದು ತಿಳಿಸಿದರು.