ಕನಕಪುರ : ರಾಮನಗರ ಶಾಸಕ ಇಕ್ಬಾಲ್ ಹುಸೇನ್ ರಕ್ಷಣೆಗೆ ಅಧಿಕಾರಿಗಳು ಕಂದಾಯ ಗ್ರಾಮ ಘೋಷಣೆಗೆ ಬಂದಿದ್ದೀರಿ ಎಂದು ಹೊಂಗಾಣಿದೊಡ್ಡಿ ಗ್ರಾಮಸ್ಥರು ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.
ತಾಲೂಕಿನ ಅಚ್ಚಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಂಗಾಣಿದೊಡ್ಡಿ ಗ್ರಾಮದಲ್ಲಿ ಕಂದಾಯ ಗ್ರಾಮ ನಿರ್ಮಾಣಕ್ಕೆ ಸೋಮವಾರ ಹಮ್ಮಿಕೊಂಡಿದ್ದ ವಿಶೇಷ ಗ್ರಾಮ ಸಭೆಯಲ್ಲಿ ಇಡೀ ಗ್ರಾಮವನ್ನೇ ಶಾಸಕರ ಹೆಸರಿಗೆ ಬರೆಸಿಕೊಂಡಿರುವ ಹಿನ್ನೆಲೆಯಲ್ಲಿ ಈ ಗ್ರಾಮವನ್ನು ಕಂದಾಯ ಗ್ರಾಮ ಮಾಡಲು ಬಂದಿದ್ದೀರಾ?, ಶಾಸಕರ ವಿರುದ್ಧದ ಆರೋಪ ಮುಚ್ಚಿಹಾಕಲು ಕಂದಾಯ ಗ್ರಾಮ ಘೊಷಣೆಯ ಹುನ್ನಾರವೇ ಎಂದು ಗ್ರಾಮಸ್ಥರಾದ ಮುನಿಸಿದ್ದೇಗೌಡ, ರಾಜು, ರವಿ, ಮಹದೇವ ಇತರರು ಪ್ರಶ್ನಿಸಿದರು.
ಮೂರು ತಲೆಮಾರುಗಳಿಂದ ಇಲ್ಲಿ ಜೀವನ ಮಾಡುತ್ತಿರುವ ಗ್ರಾಮಸ್ಥರಿಗೆ ಊರನ್ನು ಬಿಟ್ಟುಕೊಡಬೇಕು, ಅಂದಿನಿಂದ ಇಂದಿನವರೆಗೂ ಕುಟುಂಬದ ಸದಸ್ಯರ ಸಂಖ್ಯೆ ಹೆಚ್ಚಾಗಿದೆ, ಅವರಿಗೂ ನಿವೇಶನ ಹಾಗೂ ಬದುಕುವ ಹಕ್ಕು ಕೊಡಬೇಕು. ಸಾತನೂರು ಹೋಬಳಿ, ಅಚ್ಚಲು ಗ್ರಾಪಂ ವ್ಯಾಪ್ತಿಯಲ್ಲಿ ಜಕ್ಕೇಗೌಡನದೊಡ್ಡಿ, ಒಡ್ಲೇಗೌಡನದೊಡ್ಡಿ, ಮದುವೆತಕ್ಕಲುದೊಡ್ಡಿ ಗ್ರಾಮಗಳು ಇದೇ ರೀತಿ ಅತಂತ್ರ ಸ್ಥಿತಿಯಲ್ಲಿದ್ದರೂ ಅವುಗಳನ್ನು ಕಂದಾಯ ಗ್ರಾಮವನ್ನಾಗಿ ಘೊಷಿಸಿಲ್ಲ. ಇವುಗಳನ್ನು ಬಿಟ್ಟು ಹೊಂಗಾಣಿದೊಡ್ಡಿ ಕಂದಾಯ ಗ್ರಾಮ ಮಾಡುವ ಉದ್ದೇಶ ಏನು? ಇಂತಹ ವಿವಾದಿತ ಸ್ಥಳವನ್ನೇ ತರಾತುರಿಯಲ್ಲಿ ಕಂದಾಯ ಗ್ರಾಮ ಮಾಡಲು ಹೊರಟಿದ್ದೀರಿ. ಇಲ್ಲಿ ನಿಯಮ ಗಾಳಿಗೆ ತೂರುತ್ತಿರುವುದು ಸರಿಯಾದ ಕ್ರಮವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಪಂ ಸದಸ್ಯ ಕುಮಾರಸ್ವಾಮಿ ಮಾತನಾಡಿ, ಒಂದು ಕಂದಾಯ ಗ್ರಾಮವನ್ನು ಘೋಷಣೆ ಮಾಡಬೇಕಾದರೆ ಮೊದಲು ತಾಲೂಕು ತಹಸೀಲ್ದಾರ್‌ರ ಸಭೆ ನಡೆಸಿ ನಂತರ ಗ್ರಾಪಂ ಸರ್ವ ಸದಸ್ಯರ ಸಭೆಯ ನಿರ್ಣಯ ಹಾಗೂ ಗ್ರಾಮಸ್ಥರ ಅಭಿಪ್ರಾಯ ಪಡೆಯಬೇಕಲು. ಅದಾವುದನ್ನೂ ಕೇಳದೆ ಕಂದಾಯ ಅಥವಾ ಮಾದರಿ ಗ್ರಾಮ ಮಾಡಬೇಕೆಂದು ಬಂದಿರುವ ಕ್ರಮ ಸರಿಯಲ್ಲ. ಮೊದಲು ಗ್ರಾಮಕ್ಕೆ ಮೂಲ ಸೌಕರ್ಯ ಒದಗಿಸಬೇಕು, ರಸ್ತೆ, ಕುಡಿಯುವ ನೀರು, ಚರಂಡಿ, ಶಾಲೆ, ದೇವಸ್ಥಾನ, ರೈತರ ಅನುಕೂಲಕ್ಕಾಗಿ ಒಕ್ಕಣೆ ಕಣ ನಿರ್ಮಿಸಬೇಕು. ಶಾಸಕರ ಹೆಸರಿನಲ್ಲಿ ಸರ್ವೇ ನಂಬರಿನ ಗ್ರಾಮವನ್ನು ಸರ್ಕಾರದ ವಶಕ್ಕೆ ನೀಡಿ ನಂತರ ಗ್ರಾಮಸ್ಥರಿಗೆ ವರ್ಗಾಯಿಸಬೇಕೆ ವಿನಃ ಈ ರೀತಿ ಯಾರದೋ ರಕ್ಷಣೆಗಾಗಿ ಮಾಡುವ ಕ್ರಮ ಸರಿಯಲ್ಲ ಎಂದರು.
ತಾಲೂಕು ತಹಸೀಲ್ದಾರ್ ಮಂಜುನಾಥ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಭೈರಪ್ಪ, ಸರ್ವೇ ಅಧಿಕಾರಿ ನಂದೀಶ್, ಉಪತಹಸೀಲ್ದಾರ್ ಹನುಮಂತಕುಮಾರ್, ಪಿಡಿಒ ಬಂಗಾರಯ್ಯ, ಗ್ರಾಪಂ ಅಧ್ಯಕ್ಷ ಸತೀಶ್, ಉಪಾಧ್ಯಕ್ಷೆ ಚಂದ್ರಮ್ಮ, ಗ್ರಾಮಸ್ಥರಾದ ಶೇಖರ್, ಚಿಕ್ಕಮರಿ, ಮಲ್ಲು, ಲಿಂಗಣ್ಣ, ಮುನಿರಾಜು, ಸಾಕಮ್ಮ, ಮಹದೇವಯ್ಯ ಗ್ರಾಪಂ ಸದಸ್ಯರು, ಕಂದಾಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಇದ್ದರು.