ಜಿಲ್ಲೆ

ಹಳೇ ಜಿಲ್ಲಾಸ್ಪತ್ರೆ ಕಾರ್ಯಾರಂಭ ಎಂದು?

ಬಾಗಿಲು ಮುಚ್ಚಿರುವ ಹಳೇ ಜಿಲ್ಲಾಸ್ಪತ್ರೆ ಕಟ್ಟಡ.

ಚಿಕ್ಕಬಳ್ಳಾಪುರ ಡೆಸ್ಕ್


ಬಳಕೆ ಇಲ್ಲದೇ ಖಾಲಿಯಾಗಿಯೇ ಇದೆ ಕಟ್ಟಡ : ಅಧಿಕಾರಿಗಳಿಂದ ವಿಳಂಬ

ವಿಜಯವಾಣಿ ಸುದ್ದಿಜಾಲ ಚಿಕ್ಕಬಳ್ಳಾಪುರ
ನಗರದಲ್ಲಿನ ಹಳೇ ಜಿಲ್ಲಾಸ್ಪತ್ರೆ ಕಟ್ಟಡವು ಬಾಗಿಲು ಮುಚ್ಚಿದ್ದು ಉದ್ದೇಶಿತ ತಾಯಿ ಮತ್ತು ಮಕ್ಕಳ ಮೀಸಲಿನ ಆರೋಗ್ಯ ಸೇವೆಯ ಆಸ್ಪತ್ರೆಯನ್ನಾಗಿ ಪರಿವರ್ತಿಸುವಲ್ಲಿ ವಿಳಂಬ ಧೋರಣೆ ಪ್ರದರ್ಶಿಸಲಾಗುತ್ತಿದೆ.
ಕಳೆದ 2018ರಲ್ಲಿ ಏ.6 ಇಲ್ಲಿನ ಹಳೇ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜಿಲ್ಲಾಸ್ಪತ್ರೆಯು, ನಗರದ ಎಂ.ಜಿ.ರಸ್ತೆಯಲ್ಲಿನ ತಿಮ್ಮೇಗೌಡನ ಕೆರೆಯ ಜಾಗದಲ್ಲಿ 23.35 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡಿತು. ಬಳಿಕ ಹಲವು ತಿಂಗಳ ಕಾಲ ಕಟ್ಟಡವು ಬಳಕೆ ಇಲ್ಲದೇ ಧೂಳು ತಿಂದಿತು. ಇದರ ನಡುವೆ 2020ರಲ್ಲಿ ಕರೊನಾ ಸೋಂಕಿನ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ರೋಗಿಗಳ ಚಿಕಿತ್ಸೆಗೆ ಬಳಸಿಕೊಳ್ಳಲಾಯಿತು. ಇದೀಗ ಮತ್ತೆ ಬಳಕೆ ಇಲ್ಲದೇ ಕಟ್ಟಡವು ಖಾಲಿಯಾಗಿ ಉಳಿದಿದೆ.

ತಾಯಿ ಮಕ್ಕಳ ಆಸ್ಪತ್ರೆ
ಹಳೇ ಜಿಲ್ಲಾಸ್ಪತ್ರೆಯ ಕಟ್ಟಡದಲ್ಲಿ ತಾಯಿ ಮತ್ತು ಮಕ್ಕಳ ವಿಶೇಷ ಆಸ್ಪತ್ರೆ ಪ್ರಾರಂಭಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯು ಯೋಜನೆ ರೂಪಿಸಿದೆ. ಆದರೆ, ಇದಕ್ಕೆ ಸಂಬಂಧಿಸಿದಂತೆ ಪ್ರಕ್ರಿಯೆಗಳು ವಿಳಂಬವಾಗಿ ನಡೆಯುತ್ತಿರುವುದು ಜನರಲ್ಲಿ ಅಸಮಾಧಾನ ಮೂಡಿಸಿದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಸಲ್ಲಿಸಿದ ಪ್ರಸ್ತಾವನೆಗೆ ಸರ್ಕಾರ ಅನುಮೋದನೆ ನೀಡಿ, 1 ಕೋಟಿ ರೂ. ಮಂಜೂರು ಮಾಡಿದ್ದು, ಇದರಲ್ಲಿ ಕಟ್ಟಡ ದುರಸ್ತಿ ಕೆಲಸವನ್ನು ಕೈಗೊಳ್ಳಲಾಗಿದೆ. ಇನ್ನು ತ್ವರಿತವಾಗಿ ಉದ್ಘಾಟನೆ ನೆರವೇರಿಸಿ, ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಬೇಕಾಗಿದೆ.

ಬ್ರಿಟಿಷರ ಕಾಲದ ಇತಿಹಾಸ
ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾಗಿರುವ ಆಸ್ಪತ್ರೆ ಕಟ್ಟಡವನ್ನು ಮೊದಲು ತಾಲೂಕು ಆಸ್ಪತ್ರೆ, ಬಳಿಕ ಜಿಲ್ಲಾಸ್ಪತ್ರೆಯನ್ನಾಗಿ ಪರಿವರ್ತಿಸಲಾಗಿತ್ತು. ಪುರುಷರು ಮತ್ತು ಮಹಿಳೆಯರ ಪ್ರತ್ಯೇಕ ವಾರ್ಡ್​ಗಳೊಂದಿಗೆ 150 ಹಾಸಿಗೆಗಳ ಸಾಮರ್ಥ್ಯ ಹೊಂದಿದ್ದ ಈ ಎರಡು ಅಂತಸ್ತಿನ ಕಟ್ಟಡವು ಬಸ್​ ನಿಲ್ದಾಣ, ತಾಲೂಕು ಕಚೇರಿ ಮತ್ತು ರಾಷ್ಟ್ರೀಯ ಹೆದ್ದಾರಿ 7ಕ್ಕೆ ಸಮೀಪದಲ್ಲಿದೆ. ಹಿಂದೆ ಇಲ್ಲಿಗೆ ಪ್ರತಿನಿತ್ಯ ನೂರಾರು ಹೊರ ಹೋಗಿಗಳು ಆಗಮಿಸುತ್ತಿದ್ದರು. ಇದಕ್ಕೆ ಅನುಗುಣವಾಗಿ ಡಯಾಲಿಸಿಸ್​ ಟಕ, ತುರ್ತು ಚಿಕಿತ್ಸಾ ಟಕ, ಪ್ರಯೋಗಾಲಯ, ಔಷಧಾಲಯ ಸೇರಿದಂತೆ ಆರೋಗ್ಯ ಸೇವೆಯ ಹಲವು ವಿಭಾಗಗಳನ್ನು ತೆರೆಯಲಾಗಿತ್ತು. ಇದೀಗ ಎಲ್ಲವೂ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ.

ಅಕ್ರಮ ಚಟುವಟಿಕೆ ಕೇಂದ್ರ
ಕಟ್ಟಡದ ಆವರಣದಲ್ಲಿ ರೆಡ್​ ಕ್ರಾಸ್​ ಸಂಸ್ಥೆಯ ರಕ್ತ ನಿಧಿ ಕೇಂದ್ರವು ಕಾರ್ಯ ನಿರ್ವಹಿಸುತ್ತಿದೆ. ಮತ್ತೊಂದೆಡೆ ಹಳೇ ಕಟ್ಟಡ, ಉದ್ಯಾನ ಸೇರಿದಂತೆ ಇತರ ಜಾಗವು ಕಾಲ ಕಾಲಕ್ಕೆ ಸ್ವಚ್ಛತೆ ನಿರ್ವಹಣೆ ಕಾಣುತ್ತಿಲ್ಲ. ಇದರ ನಡುವೆ ಅಕ್ರಮ ಚಟುವಟಿಕೆಗೆ ಬಳಕೆಯಾಗುತ್ತಿದೆ. ಕುಡುಕರು, ಪುಂಡು ಪೋಕರಿಗಳು ಹರಟೆ ಹೊಡೆದುಕೊಂಡು ಕುಳಿತುಕೊಂಡಿದ್ದು ಮದ್ಯಾರಾಧನೆಗೆ ನಿದರ್ಶನವಾಗಿ ಅಲ್ಲಲ್ಲಿ ಮದ್ಯದ ಬಾಟಲ್​ಗಳು ಕಾಣುತ್ತವೆ. ರಾತ್ರಿ ವೇಳೆ ಕೆಲವರು ಗೇಟು ಹಾರಿಕೊಂಡು ಬಂದು ಹೋಗುತ್ತಿರುತ್ತಾರೆ. ಇನ್ನು ಆವರಣದಲ್ಲಿ ಖಾಸಗಿ ವಾಹನಗಳನ್ನು ನಿಲ್ಲಿಸಿ ಹೋಗಲಾಗುತ್ತದೆ.

ಸಿಬ್ಬಂದಿ ನಿರೀಕ್ಷೆಯಲ್ಲಿ ವಿಳಂಬ
ಈಗಾಗಲೇ ಕಟ್ಟಡವು ಒಂದು ವರ್ಷದಿಂದ ಖಾಲಿ ಬಿದ್ದಿದೆ. ಇದರ ನಡುವೆ ದುರಸ್ತಿ ಕಾರ್ಯ ಮುಗಿಸಿದ್ದರೂ ತಾಯಿ ಮತ್ತು ಮಕ್ಕಳ ಆರೋಗ್ಯ ಸೇವೆಗೆ ಅಗತ್ಯ ಸಿಬ್ಬಂದಿ ಕೊರತೆ ಇದೆ. ಇದಕ್ಕೆ ಹೊಸ ನೇಮಕಾತಿ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಇಲ್ಲಿ ಆಸ್ಪತ್ರೆಯನ್ನು ಪ್ರಾರಂಭಿಸಲಾಗುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ಮಹೇಶ್​ ಕುಮಾರ್​ ತಿಳಿಸಿದರೆ, ಈಗಾಗಲೇ ಸಿಬ್ಬಂದಿ ನೇಮಕಾತಿಗೆ ಟೆಂಡರ್​ ಕರೆಯಲಾಗಿದೆ. ಆದಷ್ಟು ಬೇಗ ಆಸ್ಪತ್ರೆಯ ಉದ್ಘಾಟನೆಯ ನಿರೀಕ್ಷೆ ಇದೆ ಎಂದು ಜಿಲ್ಲಾಸ್ಪತ್ರೆಯ ಶಸಚಿಕಿತ್ಸಕ ಡಾ ರಮೇಶ್​ ತಿಳಿಸಿದ್ದಾರೆ. ಇದರ ನಡುವೆ ಜಿಲ್ಲಾ ಉಸ್ತುವಾರಿ ಸಚಿವರು ಆಸ್ಪತ್ರೆಯ ಸದ್ಬಳಕೆಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.


ಕಳೆದ ಐದು ವರ್ಷಗಳಿಂದಲೂ ಕೇವಲ ಹಳೇ ಜಿಲ್ಲಾಸ್ಪತ್ರೆಯನ್ನು ತಾಯಿ ಮತ್ತು ಮಕ್ಕಳ ವಿಶೇಷ ಆಸ್ಪತ್ರೆಯನ್ನಾಗಿ ಪರಿವರ್ತಿಸುವುದಾಗಿ ಹೇಳಲಾಗುತ್ತಿದೆ. ಕರೊನಾ ಸಂದರ್ಭದಲ್ಲಿ ತಾತ್ಕಾಲಿಕವಾಗಿ ಈ ಕಟ್ಟಡವನ್ನು ಬಳಸಿಕೊಂಡು ಹಾಗೆಯೇ ಖಾಲಿ ಬಿಡಲಾಗಿದೆ. ಒಂದು ವರ್ಷದಿಂದ ಕಟ್ಟಡ ಧೂಳು ತಿನ್ನುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು.

ರವಿಕುಮಾರ್​, ಕನ್ನಡ ಸೇನೆಯ ಜಿಲ್ಲಾಧ್ಯಕ್ಷ, ಚಿಕ್ಕಬಳ್ಳಾಪುರ