ವಿಜಯವಾಣಿ ಸುದ್ದಿಜಾಲ ಹೆಬ್ರಿ ಪಶ್ಚಿಮಘಟ್ಟದ ತಪ್ಪಲಿನಲ್ಲಿ ವಾಸಿಸುತ್ತಿರುವ ಜನರಲ್ಲಿ ಕಸ್ತೂರಿರಂಗನ್ ವರದಿ ಜಾರಿ ಕುರಿತು ದಿನಗಳೆದಂತೆ ಆತಂಕ ಹೆಚ್ಚುತ್ತಿದ್ದು, ಇದರ ಲಾಭ ಪಡೆಯುವ ಕುರಿತು ನಕ್ಸಲರು ಯೋಜನೆ ರೂಪಿಸುವ ಮೂಲಕ ನಕ್ಸಲ್ ಚಟುವಟಿಕೆ ವಿಸ್ತರಿಸುವ ಪಣತೊಟ್ಟಿದ್ದಾರೆ. ಈ ಕಾರಣದಿಂದ ಹೆಬ್ರಿ ಸಹಿತ ಸುತ್ತಮುತ್ತಲಿನ ಜನ ಎದುರಾಗಲಿರುವ ಪರಿಸ್ಥಿತಿ ಕುರಿತು ಚಿಂತಿತರಾಗಿದ್ದಾರೆ. 10 ವರ್ಷಗಳಿಂದ ನಿಷ್ಕ್ರಿಯವಾಗಿದ್ದ ನಕ್ಸಲ್ ಚಟುವಟಿಕೆ ಮತ್ತೆ ಗರಿಗೆದರಿದೆ. ಇತ್ತೀಚೆಗೆ ಕೊಪ್ಪ, ಶೃಂಗೇರಿ ಮತ್ತು ಚಿಕ್ಕಮಗಳೂರಿನ ಒಂಟಿ ಮನೆಗೆ ಭೇಟಿ ನೀಡಿದ ನಕ್ಸಲರು ಮಲೆನಾಡಿನಲ್ಲಿ ಕಸ್ತೂರಿರಂಗನ್ ವರದಿ ಕುರಿತು ಚರ್ಚಿಸಿ ಹೋರಾಟದ ಬಗ್ಗೆ ಮಾತನಾಡಿದ್ದಾರೆ ಎಂಬ ಸುದ್ದಿ ಹರಡಿತ್ತು. ಕೆಲವೇ ದಿನಗಳಲ್ಲೇ ನಕ್ಸಲ್ ನಾಯಕ ವಿಕ್ರಂ ಗೌಡನನ್ನು ನಕ್ಸಲ್ ನಿಗ್ರಹ ಪಡೆ ಎನ್‌ಕೌಂಟರ್ ಮಾಡಿದ್ದಾರೆ. ಆದರೂ ಜನರಲ್ಲಿ ಉಂಟಾದ ಆತಂಕ ಕಡಿಮೆಯಾಗಿಲ್ಲ. ಸುಮಾರ ವರ್ಷಗಳ ಹಿಂದೆ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವಿಚಾರದಲ್ಲಿ ಶುರುವಾದ ಆತಂಕ ಇಂದು ಡೀಮ್ಡ್ ಫಾರೆಸ್ಟ್, ಕಸ್ತೂರಿ ರಂಗನ್ ವರದಿ, ಪರಿಸರಸೂಕ್ಷ್ಮವಲಯಗಳು ಸಹಿತ ವಿವಿಧ ವಿಷಯಗಳಲ್ಲಿ ಅರಣ್ಯ ಇಲಾಖೆ ಸ್ಥಳೀಯ ಜನರಲ್ಲಿ ಭೀತಿ ಮೂಡಿಸುತ್ತಿದ್ದಾರೆ. ಇತ್ತೀಚೆಗೆ ಅರಣ್ಯ ಒತ್ತುವರಿ ತೆರವಿನ ಹೆಸರಿನಲ್ಲಿ ಮನೆಗಳ ತೆರವುಗೊಳಿಸುವ ಕುರಿತು ಜನರಲಿ ಮತ್ತೊಂದು ಆತಂತ ಶುರವಾಗಿದೆ. ಕರ್ನಾಟಕದಲ್ಲಿ ಕಸ್ತೂರಿರಂಗನ್ ವರದಿ ಅನುಷ್ಠಾನ ಮಾಡುವುದಿಲ್ಲ ಎಂದು ಅನೇಕ ಬಾರಿ ರಾಜ್ಯ ಸರ್ಕಾರ ಹೇಳಿದ್ದರೂ ಕೇಂದ್ರ ಸರ್ಕಾರ ರಾಜ್ಯ ಸರ್ಕಾರದಿಂದ ಕಸ್ತೂರಿರಂಗನ್ ವರದಿ ಬಗ್ಗೆ ಅಭಿಪ್ರಾಯ ಕೇಳುತ್ತಲೆ ಇದೆ. ವರದಿಯ ವಿರುದ್ಧ ಹಲವು ಹೋರಾಟಗಳು ನಡೆಯುತ್ತಲೇ ಇವೆ. ಇದನ್ನೇ ಅಸ್ತ್ರವಾಗಿ ಬಳಸಿಕೊಂಡ ನಕ್ಸಲರು ಮತ್ತೆ ಸಕ್ರಿಯರಾಗಿದ್ದಾರೆ. ಸರ್ಕಾರಗಳು, ಅರಣ್ಯ ಇಲಾಖೆ ಕಸ್ತೂರಿ ರಂಗನ್ ವರದಿ ಕುರಿತು ಶೀಘ್ರವೇ ಜನರಿಗೆ ಸತ್ಯ ಹಾಗೂ ಸ್ಪಷ್ಟ ವಿಚಾರವನ್ನು ಮನವರಿಕೆ ಮಾಡಿ ಆತಂಕ ದೂರ ಮಾಡಬೇಕು ಎಂದು ಹೆಬ್ರಿಯ ಸಾಮಾಜಿಕ ಹೋರಾಟಗಾರ ಶ್ರೀಕಾಂತ್ ಕುಚ್ಚೂರು ಒತ್ತಾಯಿಸಿದ್ದಾರೆ.
ಇಂತಹ ಹಲವು ಜನರ ಸಮಸ್ಯೆ, ಆತಂಕವನ್ನು ಗಮನಿಸಿಯೇ ಅಂದು ನಕ್ಸಲರು ಜನರ ಜತೆಗೆ ನಿಂತರು. ವಿವಿಧ ಹೋರಾಟ, ಎಚ್ಚರಿಕೆಯ ಕಾರಣಗಳಿಂದ ಕೆಲವೊಂದು ಅಭಿವೃದ್ಧಿಗಳು ಆಗಿವೆ. ನಕ್ಸಲರು ಬಂದಿದ್ದರಿಂದಲೇ ನಾಡ್ಪಾಲು ಕಬ್ಬಿನಾಲೆಗೆ ಕೆಲವು ರಸ್ತೆ, ಕಾಲುಸಂಕ, ಹ್ಯಾಮ್ಲೇಟ್ ಯೋಜನೆ ಮೂಲಕ ವಿದ್ಯುತ್ ಸಂಪರ್ಕ ದೊರೆಯಿತು. ಮಹೇಶ್ ನಾಡ್ಪಾಲು ಸ್ಥಳೀಯರು.