ಜಿಲ್ಲೆ

ಬಸ್ ನಿಲ್ದಾಣವೋ.. ಅನೈತಿಕ ತಾಣವೋ?

ಸೋಮನಾಥ ರೆಡ್ಡಿ

ಉದಯಕುಮಾರ ಹಣಗಿ ಶಿರಹಟ್ಟಿ

ಪಟ್ಟಣ ಸೇರಿದಂತೆ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಲಕ್ಷಾಂತರ ರೂ. ಖರ್ಚು ಮಾಡಿ ತಂಗುದಾಣಗಳನ್ನು ನಿರ್ಮಿಸಲಾಗಿದೆ. ಆದರೆ, ಅವೈಜ್ಞಾನಿಕ ಕಟ್ಟಡ, ಮೂಲ ಸೌಲಭ್ಯ ಇಲ್ಲದಿರುವುದು, ನಿರ್ವಹಣೆ ಕೊರತೆಯಿಂದ ಬಹುತೇಕ ನಿರುಪಯುಕ್ತವಾಗಿವೆ. ಹೆದ್ದಾರಿಯಲ್ಲಿ ಬಸ್‌ಗಾಗಿ ಕಾಯುವವರ ಗೋಳಂತೂ ಹೇಳತೀರದು.

ಪಟ್ಟಣದ ಒಂದನೇ ವಾರ್ಡ್‌ಗೆ ಸೇರುವ ಖಾನಾಪುರ, ಖಾನಾಪುರ ಕ್ರಾಸ್ ಮತ್ತು ಡಿಗ್ರೀ ಕಾಲೇಜ್‌ನ ಬಸ್ ತಂಗುದಾಣಗಳು ಕುಡುಕರ ಅಡ್ಡೆಯಾಗಿವೆ. ರಾತ್ರಿ ವೇಳೆ ವಿದ್ಯುತ್ ಪೂರೈಕೆ ಇಲ್ಲದ ಕಾರಣ ಅನೈತಿಕ ಚಟುವಟಿಕೆಗೆ ಮತ್ತಷ್ಟು ಇಂಬು ನೀಡಿದಂತಾಗಿದೆ. ಸುಣ್ಣ-ಬಣ್ಣವಿಲ್ಲದ ಕಟ್ಟಡ ಸದಾ ಕಸದಿಂದ ತುಂಬಿಕೊಂಡಿರುತ್ತದೆ. ಸಿಮೆಂಟಿನ ಕಿಟಕಿಗಳನ್ನು ಪುಂಡ ಪೋಕರಿಗಳು ಕಿತ್ತು ಹಾಕಿದ್ದಾರೆ. ಮಳೆ ಬಂದಾಗ ನೀರು ನಿಲ್ದಾಣದ ಒಳಗೆ ಬರುತ್ತದೆ.

ರಾಣೆಬೆನ್ನೂರು, ಹಾವೇರಿ, ಮುಂಡರಗಿ ಸೇರಿದಂತೆ ಅನೇಕ ನಗರಗಳಿಗೆ ಹೋಗುವ ಬಸ್‌ಗಳು ಬೆಳ್ಳಟ್ಟಿ ಮಾರ್ಗವಾಗಿ ಸಂಚರಿಸುವುದರಿಂದ ಸಾಮಾನ್ಯವಾಗಿ ಬೆಳ್ಳಟ್ಟಿಯಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಆದರೆ, ಬಸ್ ನಿಲ್ದಾಣ ಮಾತ್ರ ಸಂಪೂರ್ಣ ಅವ್ಯವಸ್ಥೆಯಿಂದ ಕೂಡಿದ್ದು ವಾಕರಿಕೆ ಬರುವಂತಿದೆ. ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ ಸರಿಯಿಲ್ಲ. ಸ್ವಚ್ಛತೆ ಸಂಪೂರ್ಣ ಮರೀಚಿಕೆಯಾಗಿದೆ. ಧೂಳು-ತ್ಯಾಜ್ಯದಿಂದ ತುಂಬಿದ್ದು ಸಂಪೂರ್ಣ ನಿರುಪಯುಕ್ತವಾಗಿದೆ. ಬಸ್ ನಿಲ್ದಾಣದ ಕಂಟ್ರೋಲ್ ರೂಮಿನ ಕಿಟಕಿ, ಬಾಗಿಲು ಸರಿಯಾಗಿಲ್ಲದ ಕಾರಣ ಕೊಠಡಿ ಸದಾ ಕಸದಿಂದ ತುಂಬಿರುತ್ತದೆ. ಶೌಚಗೃಹದ ಪಾಡಂತೂ ಛೀ.... ಹೇಳಲಾಗದು...

ಬಾಗಲಕೋಟೆಯಿಂದ ಹೊನ್ನಾವಳಿ ರಾಜ್ಯ ಹೆದ್ದಾರಿ ನಿರ್ಮಾಣವಾಗುತ್ತಿದೆ. ಹೆದ್ದಾರಿಗೆ ಹೊಂದಿಕೊಂಡಿರುವ ವಿವಿಧ ಗ್ರಾಮಗಳ ಬಸ್ ನಿಲ್ದಾಣಗಳನ್ನು ರಸ್ತೆ ವಿಸ್ತರಣೆ ನೆಪದಲ್ಲಿ ತೆರವು ಮಾಡಲಾಗಿದೆ. ಕೆಲ ಗ್ರಾಮದಲ್ಲಿ ಸಣ್ಣ ಬಸ್ ತಂಗುದಾಣ ನಿರ್ಮಿಸಲಾಗಿದೆ. ಆದರೆ, ಇವು ನಾಮ್ ಕೇ ವಾಸ್ತೆ ನಿಲ್ದಾಣಗಳಾಗಿದ್ದು ಮಳೆ, ಗಾಳಿ, ಬಿಸಿಲು-ಚಳಿಗೆ ಉಪಯೋಗವಾಗುತ್ತಿಲ್ಲ. ಹೆದ್ದಾರಿಗೆ ಹೊಂದಿಕೊಂಡ ಛಬ್ಬಿ ಗ್ರಾಮದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಿರುತ್ತದೆ. ಹೊಸದಾಗಿ ನಿರ್ಮಾಣ ಮಾಡಲಾದ ಬಸ್ ತಂಗುದಾಣದಲ್ಲಿ ನಿಲ್ಲಲೂ ಆಗುವುದಿಲ್ಲ. ಮಳೆ, ಬಿಸಿಲು, ಗಾಳಿಯಿಂದಾಗಿ ಪ್ರಯಾಣಿಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಅವೈಜ್ಞಾನಿಕ ಕಟ್ಟಡ ಮಾಗಡಿ ಮುಖ್ಯ ರಸ್ತೆ ಪಕ್ಕದ ಹೊಳಲಾಪೂರ ಗ್ರಾಮದಲ್ಲಿ ಬಸ್ ನಿಲ್ದಾಣ ನಿರ್ಮಿಸಲಾಗಿದೆ. ಆದರೆ, ಈ ತಂಗುದಾಣವು ರಸ್ತೆಗೆ ಮುಖಮಾಡಿ ನಿರ್ಮಿಸದ ಕಾರಣ ಒಳಗೆ ಕುಳಿತರೆ ಬಸ್ ಬಂದು ಹೋಗುವುದು ಕಾಣುವುದೇ ಇಲ್ಲ. ಹೀಗಾಗಿ ಪ್ರಯಾಣಿಕರು ಅನಿವಾರ್ಯವಾಗಿ ಮುಖ್ಯ ರಸ್ತೆಯ ಬದಿಯಲ್ಲೇ ನಿಲ್ಲುವಂತಾಗಿದೆ. ಈ ತಂಗುದಾಣ ಇದ್ದೂ ಇಲ್ಲದಂತಾಗಿದೆ. ಕೇಳೋರಿಲ್ಲ ಮಹಿಳೆಯರ ಗೋಳು: ಪಟ್ಟಣ ಸೇರಿದಂತೆ ತಾಲೂಕಿನ ಕೆಲ ಗ್ರಾಮಗಳಲ್ಲಿ, ಹೆದ್ದಾರಿ ಪಕ್ಕದಲ್ಲಿ ಮಿನಿ ಬಸ್ ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ಹತ್ತಾರು ಸಮಸ್ಯೆಗಳ ಮಧ್ಯೆ ಪ್ರಯಾಣಿಕರಿಗೆ ತುಸು ಅನುಕೂಲವೂ ಆಗಿದೆ. ಆದರೆ, ಹಲವಾರು ಗ್ರಾಮಗಳಲ್ಲಿ ಜನದಟ್ಟಣೆ ಇರುವ ಸ್ಥಳಗಳಲ್ಲಿ ಇನ್ನೂ ಬಸ್ ತಂಗುದಾಣಗಳೇ ಇಲ್ಲ. ಹೀಗಾಗಿ ಪ್ರಯಾಣಿಕರು ನಿತ್ಯವೂ ತೊಂದರೆ ಅನುಭವಿಸುತ್ತಿದ್ದಾರೆ. ಅಧಿಕಾರಿಗಳು, ಜನಪ್ರತಿನಿಧಿಗಳು ಪ್ರಯಾಣಿಕರ ಈ ಯಾತನೆಯನ್ನು ನಿತ್ಯವೂ ನೋಡುತ್ತಲೇ ಇದ್ದರೂ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಅಲ್ಲದೆ, ಸರ್ಕಾರ ಶಕ್ತಿ ಯೋಜನೆ ಮೂಲಕ ಮಹಿಳೆಯರಿಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ ಮಾಡಿಕೊಟ್ಟಿದ್ದರಿಂದ ಪ್ರಯಾಣಿಕರ ಸಂಖ್ಯೆಯೂ ಹೆಚ್ಚಾಗಿದೆ. ಆದರೆ, ಮಹಿಳೆಯರ ರಕ್ಷಣೆಗೆ, ಹಸುಗೂಸುಗಳ ಆರೈಕೆಗೆ, ವಿಶ್ರಾಂತಿಗೆ ಬಸ್ ನಿಲ್ದಾಣಗಳಲ್ಲಿ ಸೌಲಭ್ಯ ಕಲ್ಪಿಸಿಲ್ಲ. ಕನಿಷ್ಠ ಸ್ವಚ್ಛವಾದ ಶೌಚಗೃಹದಂಥ ವ್ಯವಸ್ಥೆಯೂ ಮಾಡದಿರುವುದು ಸಾರ್ವಜನಿಕರಲ್ಲಿ ತೀವ್ರ ಬೇಸರ ಮೂಡಿಸಿದೆ.

ಮಾಗಡಿ ಮಾರ್ಗವಾಗಿ ಯಳವತ್ತಿಯಿಂದ ಶಿರಹಟ್ಟಿಗೆ ಪ್ರಯಾಣಿಸುತ್ತೇನೆ. ಮಾಗಡಿಯಲ್ಲಿರುವ ಬಸ್ ತಂಗುದಾಣ ಸಂಪೂರ್ಣ ಅವ್ಯವಸ್ಥೆಯಿಂದ ಕೂಡಿದ್ದು ನಿಲ್ಲಲೂ ಆಗುವುದಿಲ್ಲ. ಧೂಳಿನ ಮಜ್ಜನವಾಗುತ್ತಿದ್ದು ಅನಾರೋಗ್ಯ ಕಾಡುತ್ತಿದೆ. ಈ ರಸ್ತೆಯಲ್ಲಿ ಯಾವಗಾಲೂ ಭಾರವಾದ ವಾಹನಗಳು ಸಂಚರಿಸುವುದರಿಂದ ಸದಾಕಾಲ ಧೂಳುಮಯವಾಗಿರುತ್ತದೆ. ಬಸ್‌ಗಳು ಕೂಡ ಕೆಲವೊಮ್ಮೆ ನಿಲ್ದಾಣದಿಂದ ದೂರ ನಿಲ್ಲಿಸುವುದರಿಂದ ಓಡೋಡಿ ಬಸ್ ಹತ್ತಬೇಕಾಗುತ್ತದೆ. ಹೀಗಾಗಿ ಅನೇಕರು ಬಿದ್ದು ಗಾಯಗೊಂಡಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕು. ಗೌರೀಶ ನಾಗಶೆಟ್ಟಿ, ಪ್ರಯಾಣಿಕ ಶಿರಹಟ್ಟಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಒಟ್ಟು 12 ಬಸ್ ನಿಲ್ದಾಣಗಳು ಇಲ್ಲ. ಸರ್ಕಾರ ಅನುದಾನ ನೀಡಿದರೆ ಆದಷ್ಟು ಬೇಗ ಬಸ್ ನಿಲ್ದಾಣಗಳನ್ನು ನಿರ್ಮಿಸಲು ಕ್ರಮಕೈಗೊಳ್ಳಲಾಗುತ್ತದೆ. ಶಿವಾನಂದ ಹತಪಕ್ಕಿ, ಡಿಪೋ ವ್ಯವಸ್ಥಾಪಕರು, ಶಿರಹಟ್ಟಿ