ವಿಜಯಪುರ : ಪಟ್ಟಣದ ಮೇಲೂರು ರಸ್ತೆಯ ಮೋರಿ ಬಳಿಯಿಂದ ನಾಗರಬಾವಿವರೆವಿಗೂ ರಸ್ತೆ ಅಧ್ವಾನವೆದ್ದಿದ್ದು, ಜನ ಹೈರಾಣಾಗಿದ್ದಾರೆ.
ಈ ರಸ್ತೆ ಪುರಸಭೆ ವ್ಯಾಪ್ತಿಗೂ ಸೇರದೆ, ಅತ್ತ ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಗೂ ಸೇರದೆ ಗೊಂದಲದ ಗೂಡಾಗಿ ತಬ್ಬಲಿಯಾಗಿದೆ. ಮೂರು ದಶಕಗಳಿಂದ ಈ ರಸ್ತೆ ಡಾಂಬರು ಕಂಡಿಲ್ಲ. ಹೀಗಾಗಿ ಪಟ್ಟಣದ ಗಾಂಧಿ ಚೌಕದಿಂದ& ಮೇಲೂರು ರಸ್ತೆಗೆ ಓಡಾಡುವವರು, ವಾಹನ ಸವಾರರ ಪಾಲಿಗೆ ನರಕವಾಗಿದೆ. ಬಹಳಷ್ಟು ಮಂದಿ ಈ ರಸ್ತೆಯಲ್ಲಿ ಸಂಚರಿಸಲು ಇಷ್ಟಪಡದೆ ಎರಡು ಕಿಲೋಮೀಟರ್ ಹೆಚ್ಚಾದರೂ ಪರವಾಗಿಲ್ಲ ಎಂದು ಶಿಡ್ಲಟ್ಟ ಬೈಪಾಸ್ ರಸ್ತೆಯಲ್ಲಿಯೇ ಸಂಚರಿಸುತ್ತಾರೆ. ಆದರೂ ಪುರ, ಚಂದೇನಳ್ಳಿ, ವೆಂಕಟೇನಹಳ್ಳಿ, ಬಸವಕಲ್ಯಾಣ ಮಠ, ಕೊಮ್ಮಸಂದ್ರ ಈ ಭಾಗಗಳಿಂದ ವಿಜಯಪುರ ಪಟ್ಟಣಕ್ಕೆ ಬರುವ ಬಹಳಷ್ಟು ಮಂದಿ ತಮ್ಮ ವ್ಯಾಪಾರ ವ್ಯವಹಾರಗಳಿಗೆ ಇದೇ ರಸ್ತೆ ಆಶ್ರಯಿಸಿದ್ದು, ಪಟ್ಟಣದ ಒಳಗಡೆಯಿಂದ ಶಿಡ್ಲಟ್ಟ ರಸ್ತೆಗೆ ಓಡಾಡುವವರು ಸಹ ಇದೇ ರಸ್ತೆಯಲ್ಲಿ ಸಂಚರಿಸಬೇಕಾಗಿದೆ.
ಪಟ್ಟಣದ ಗಾಂಧಿ ಚೌಕ ಮುಖ್ಯ ರಸ್ತೆ, ಮೇಲೂರು ರಸ್ತೆ, ಎಲ್ಲದಕ್ಕೂ ಇದೇ ರಸ್ತೆ ಆಧಾರವಾಗಿದ್ದು, ರಸ್ತೆ ಸರಿಪಡಿಸಿ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ. ಹತ್ತಾರು ಕೋಟಿ ರೂಪಾಯಿ ವೆಚ್ಚದಲ್ಲಿ ಚಿಕ್ಕಬಳ್ಳಾಪುರ&ಕೋಲಾರ ರಸ್ತೆಯಲ್ಲಿ ಕಾಂಕ್ರೀಟಿಕರಣ ನಡೆಯುತ್ತಿದ್ದು, ಕೇವಲ ಮೂರು ನಾಲ್ಕು ಲಕ್ಷ ರೂಗಳ ವೆಚ್ಚದಲ್ಲಿ ಸಾವಿರಾರು ಮಂದಿ ಸಾರ್ವಜನಿಕರಿಗೆ ಅನುಕೂಲವಾಗುವ ಈ ರಸ್ತೆ ಡಾಂಬರೀಕರಣಕ್ಕೆ ಶಾಸಕರೂ ಆದ ಉಸ್ತುವಾರಿ ಸಚಿವರು ಆದ ಕೆ.ಎಚ್.ಮುನಿಯಪ್ಪ ಮನಸು ಮಾಡಬೇಕಿದೆ.