ಜಿಲ್ಲೆ

ಸ್ಮಾರ್ಟ್‌ಸಿಟಿ ಕಾಮಗಾರಿ ಓಕೆನಾ?

Shivamogga - Desk - Praveena Kumar S

ಶಿವಮೊಗ್ಗ: ಸ್ಮಾರ್ಟ್‌ಸಿಟಿ ಯೋಜನೆಯಡಿ ನಿರ್ಮಾಣವಾದ ವಿವಿಧ ಕಾಮಗಾರಿಗಳನ್ನು ನಗರ ಪಾಲಿಕೆಗೆ ಹಸ್ತಾಂತರಿಸಿಕೊಳ್ಳುವ ಪ್ರಕ್ರಿಯೆಗೂ ಮುನ್ನ ಅವುಗಳನ್ನು ಪರಿಶೀಲಿಸಿ, ನ್ಯೂನತೆ ಕಂಡುಬಂದರೆ ಸರಿಪಡಿಸಿದ ಬಳಿಕ ಹಸ್ತಾಂತರ ಮಾಡಿಕೊಳ್ಳಲಾಗುತ್ತದೆ ಎಂದು ನಗರ ಪಾಲಿಕೆ ಆಯುಕ್ತ ಕೆ.ಮಾಯಣ್ಣ ಗೌಡ ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಆ.22ರಿಂದ 25ರವರೆಗೆ ನಗರ ಪಾಲಿಕೆ ಸದಸ್ಯರು ಹಾಗೂ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಲಿದೆ ಎಂದಿದ್ದಾರೆ.
ಶಿವಮೊಗ್ಗ ಸ್ಮಾರ್ಟ್‌ಸಿಟಿ ಯೋಜನೆ ಮೂಲಕ ವಿವಿಧ ಪ್ಯಾಕೇಜ್‌ಗಳಲ್ಲಿ ಆಯ್ದ ವಾರ್ಡ್‌ಗಳಲ್ಲಿ ರಸ್ತೆ, ಚರಂಡಿ, ಫುಟ್‌ಪಾತ್, ಪಾರ್ಕ್, ಬಸ್ ಶೆಲ್ಟರ್, ಕನ್ಸರ‌್ವೆನ್ಸಿ, ವೃತ್ತಗಳ ಅಭಿವೃದ್ಧಿ, ಶೌಚಗೃಹ ಮುಂತಾದವುಗಳ ನಿರ್ಮಾಣ ಮಾಡಲಾಗಿತ್ತು. ಇದೀಗ ಭೂಗತ ಕೇಬಲ್, ಬೀದಿ ದೀಪದ ಕಂಬಗಳ ಸಂಬಂಧ ಮೆಸ್ಕಾಂ, ನಗರ ಪಾಲಿಕೆ, ಕೆಯುಡಬ್ಲುೃಎಸ್ ಅಧಿಕಾರಿಗಳು, ವಾರ್ಡ್ ಸದಸ್ಯರು ಪರಿಶೀಲನೆ ನಡೆಸಲಿದ್ದಾರೆ. ಪ್ರತಿ ದಿನ ಬೆಳಗ್ಗೆ 10 ರಿಂದ ಮಧ್ಯಾಹ್ನ 12ರವರೆಗೆ ಈ ಕಾರ್ಯ ನಡೆಯಲಿದೆ.
ಆ.22ರಂದು ದುರ್ಗಿಗುಡಿ, ಸವರ್‌ಲೈನ್‌ರಸ್ತೆ ದೇವಸ್ಥಾನದ ಹತ್ತಿರ, ಗಾರ್ಡನ್‌ಏರಿಯಾ, ಗೌರವ್ ಲಾಡ್ಜ್ ಎದುರು, ಗಾರ್ಡನ್ ಏರಿಯಾ ಗುಜರಿ ಶಾಪ್ ಎದುರು, ಜ್ಯುವೆಲ್‌ರಾಕ್ ರಸ್ತೆ, ಪಂಚಮುಖಿ ಆಂಜನೇಯ ದೇವಸ್ಥಾನದ ಹತ್ತಿರ, ಮಿಷನ್ ಕಾಂಪೌಂಡ್, ಖಾಸಗಿ ಬಸ್ ನಿಲ್ದಾಣದ ಎದುರು ಪರಿಶೀಲಿಸಲಾಗುವುದು. ಆ. 23 ರಂದು ಜೈಲ್‌ರಸ್ತೆ, ಎಎನ್‌ಕೆ ರಸ್ತೆ, ವೆಂಕಟೇಶ ನಗರ, ಗಾಂಧಿನಗರ, ಚನ್ನಪ್ಪ ಲೇಔಟ್, ರವೀಂದ್ರ ನಗರ, ಅಚ್ಯುತರಾವ್ ಲೇಔಟ್, ಗಾಂಧಿನಗರ ಮುಖ್ಯರಸ್ತೆ, ಶರಾವತಿ ನಗರ, ಹೊಸಮನೆ, ಕುವೆಂಪು ರಸ್ತೆಯಲ್ಲಿ ಪರಿಶೀಲನೆ ನಡೆಯಲಿದೆ. ಆ.24ರಂದು ಜಯನಗರ, ಬಸವನಗುಡಿ, ವಿನಾಯಕನಗರ, ಹನುಮಂತನಗರ, ಎಎ ಕಾಲನಿ, ಆ.25ರಂದು ಸೋಮಯ್ಯ ಲೇಔಟ್, ಬಾಪೂಜಿ ನಗರ, ಟ್ಯಾಂಕ್ ಮೊಹಲ್ಲಾ, ಕೋಟೆರಸ್ತೆ, ಸಿಎಲ್ ರಾಮಣ್ಣ ರಸ್ತೆ, ಎಸ್‌ಪಿಎಂ ರಸ್ತೆ, ಗುಂಡಪ್ಪ ಶೆಡ್, ಶೇಷಾದ್ರಿಪುರಂನಲ್ಲಿ ಪರಿಶೀಲಿಸಲಾಗುತ್ತದೆ. ಈ ಭಾಗದ ಭೂಗತ ಕೇಬಲ್, ಬೀದಿ ದೀಪದ ಕಂಬಗಳ ಕಾಮಗಾರಿಗಳಿಗೆ ಸಂಬಂಧಿಸಿದಂತೆ ನಿರ್ಧಿಷ್ಟ ದೂರು, ಸಮಸ್ಯೆ ಇದ್ದಲ್ಲಿ ಲಿಖಿತವಾಗಿ ಇಲ್ಲವೇ ಪರಿಶೀಲನೆಯ ದಿನದಂದು ಸ್ಥಳದಲ್ಲಿ ಹಾಜರಿದ್ದು ಸಾರ್ವಜನಿಕರು ತಿಳಿಸಲು ಅವಕಾಶ ಕಲ್ಪಿಸಲಾಗಿದೆ.