ಜಿಲ್ಲೆ

ಸೀಗೆಕುಪ್ಪೆ ಗ್ರಾಪಂನಲ್ಲಿ ನರೇಗಾ ಅವ್ಯವಹಾರ?

ತಾಪಂ ಮಾಜಿ ಅಧ್ಯಕ್ಷ ವೆಂಕಟೇಶ್ ಆರೋಪ | ಸಮಗ್ರ ತನಿಖೆಗೆ ಆಗ್ರಹ

ಮಾಗಡಿ: ಸೀಗೆಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಭಾರಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿರುವ ತಾಪಂ ಮಾಜಿ ಅಧ್ಯಕ್ಷ ಬಿ.ಟಿ.ವೆಂಕಟೇಶ್ ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿದರು.

ತಾಪಂ ಕಚೇರಿ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸೀಗೆಕುಪ್ಪೆ ಅಂಗನವಾಡಿಯಲ್ಲಿ ಮಕ್ಕಳ ಆಟಿಕೆ ನಿರ್ಮಿಸಲು ಸುವರ್ಣ ಗ್ರಾಮಯೋಜನೆಯಡಿ 2.80 ಲಕ್ಷ ರೂ. ಬಿಲ್ ಪಡೆಯಲಾಗಿದೆ. ಆದರೆ ಆಟಿಕೆ ಅಳವಡಿಸಿಲ್ಲ, ಬೆಳಗವಾಡಿ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಪಶು ಆಸ್ಪತ್ರೆಯಲ್ಲಿ ಸಂಪ್ ಅಳವಡಿಸದೆ ಬಿಲ್ ನೀಡಲಾಗಿದೆ. ಕಾಳಮ್ಮ ಎಂಬುವರು ಮೃತಪಟ್ಟು ನಾಲ್ಕು ವರ್ಷ ಕಳೆದಿದೆ. ಆದರೆ, ಅವರ ಹೆಸರಲ್ಲಿ ನರೇಗಾ ಯೋಜನೆಯಡಿ ದನಗಳ ಕೊಟ್ಟಿಗೆ ನಿರ್ಮಾಣ ಮಾಡಲಾಗಿದೆ ಎಂದು 43 ಸಾವಿರ ರೂ. ಬಿಲ್ ನೀಡಲಾಗಿದೆ ಎಂದು ಆರೋಪಿಸಿದರು.

ಸೀಗೆಕುಪ್ಪೆ ಗ್ರಾಪಂ ಬಿಲ್‌ಕಲೆಕ್ಟರ್ ಕರ ವಸೂಲಿ ಮಾಡಿರುವ ಹಣ ಬ್ಯಾಂಕ್‌ಗೆ ಕಟ್ಟಿಲ್ಲ. ಈ ಬಗ್ಗೆ ತಾಪಂ ಕಾರ್ಯನಿರ್ವಾಹಣಾಧಿಕಾರಿಗಳ ಗಮನಕ್ಕೆ ತಂದ ವೇಳೆ ಅವರು ಗ್ರಾಪಂ ಆಡಳಿತದ ಮೇಲೆ ತೋರಿಸುತ್ತಾರೆ. ರೆಜಿಲೇಷನ್ ತಿದ್ದಿರುವ ಬಗ್ಗೆ ಪಿಡಿಒ ತನಿಖೆ ನಡೆಸಿದ್ದಾರೆ. ಈ ವೇಳೆ ಬಿಲ್‌ಕಲೆಕ್ಟರ್ ತಪ್ಪು ಒಪ್ಪಿಗೆ ಬಗ್ಗೆ ಬರೆದುಕೊಟ್ಟಿದ್ದಾರೆ. ಈ ಬಗ್ಗೆ ಒಂದೂವರೆ ವರ್ಷ ಕಳೆದರೂ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿದರು.

35 ಮಂದಿ ದನಗಳ ಕೊಟ್ಟಿಗೆ ನಿರ್ಮಿಸಿಕೊಂಡಿದ್ದಾರೆ. ಅವರಿಗೆ ಹಣ ನೀಡದೆ ಮೃತಪಟ್ಟವರಿಗೆ ಹಣ ನೀಡಿದ್ದಾರೆ. ಅರ್ಹ ಫಲಾನುಭವಿಗಳನ್ನು ಒಗ್ಗೂಡಿಸಿ ಜಿಪಂ ಕಚೇರಿ ಮುಂದೆ ಬೃಹತ್ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.