ಜಿಲ್ಲೆ

ಕನಕಪುರ ನಗರಸಭೆ ಪಂಕ್ಚರ್​ ಆಗಿದೆಯಾ?

ಸಮನ್ವಯ ಕೊರತೆ ಆಡಳಿತಯಂತ್ರ ಸ್ಥಗಿತ | ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಸದಸ್ಯರ ಕಿಡಿ

ಕನಕಪುರ: ನಗರಸಭೆ ಸಭಾಂಗಣದಲ್ಲಿ ಮಂಗಳವಾರ ಕರೆದಿದ್ದ ಸರ್ವಸದಸ್ಯರ ಸಾಮಾನ್ಯಸಭೆಯಲ್ಲಿ ನಗರಸಭೆ ಆಡಳಿತ ವೈಖರಿಗೆ ಕಿಡಿಕಾರಿದ ಸದಸ್ಯರು, ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ಕೆಂಡಕಾರಿದರು. ನಗರಸಭೆ ಆಡಳಿತ ಶವ ಸಾಗಣೆವಾಹನದ ಪಂಕ್ಚರ್​ ಹಾಗೂ ದುರಸ್ತಿಗೆ ಹಣವಿಲ್ಲದ ದುಸ್ಥಿತಿಗೆ ಬಂದಿದೆಯೇ ಎಂದು ಭೈರವೇಶ್ವರ ರಾಜು ಕಿಡಿಕಾರಿದರು.

ಶವಸಾಗಣೆ ವಾಹನವನ್ನು ಸರ್ಕಾರ ಖರೀದಿಸಿದೆ. ಆದರೆ, ಜನರ ಪಾಲಿಗೆ ವಾಹನ ಇದ್ದೂ ಇಲ್ಲದಂತಾಗಿದೆ. ದುರಸ್ತಿಗೆ ಹಣವಿಲ್ಲ ಎಂದು ಸಬೂಬು ಹೇಳುತ್ತಿರುವ ಅಧಿಕಾರಿಗಳ ಅಸಡ್ಡೆಯಿಂದ ಕಡುಬಡವರಿಗೆ ಶವ ಸಂಸ್ಕಾರಕ್ಕೆ ತೊಂದರೆಯಾಗುತ್ತಿದೆ ಎಂದರು.

ಕಳೆದ ಮೂರು ತಿಂಗಳಿಂದ ಪೌರಾಯುಕ್ತರ ಗೈರಿನಿಂದ ನಗರಸಭೆಯಲ್ಲಿ ಸಾರ್ವಜನಿಕರ ಎಲ್ಲ ಕೆಲಸ ಕಾರ್ಯಗಳು ಸ್ಥಗಿತಗೊಂಡಿವೆ ಎಂದು ಕುರುಪೇಟೆ ಲೋಕೇಶ್​ ಜತೆಗೆ ಕಿರಣ್​, ಮಳಗಾಳು ಕಾಂತರಾಜು, ವಿಜಯಕುಮಾರ್​, ಮುಕುಂದರಾವ್​, ವೀರೇಶ್​ ಧ್ವನಿಗೂಡಿಸಿದರು.

ನಗರದ ಸ್ವಚ್ಛತೆ ಬಗ್ಗೆ ಗಮನ ಹರಿಸಬೇಕಾದ ಆರೋಗ್ಯ ಹಾಗೂ ಪರಿಸರ ಇಲಾಖೆಯ ಅಧಿಕಾರಿಗಳ ಸಮನ್ವಯ ಕೊರತೆಯಿಂದಾಗಿ ನಗರದಲ್ಲಿ ನಾನಾ ಸಮಸ್ಯೆ ತಲೆದೋರಿವೆ. ಕಂದಾಯ ಇಲಾಖೆಯಲ್ಲಿ ಇ&ಖಾತೆಸೇರಿ ಸಾರ್ವಜನಿಕರ ಕೆಲಸಗಳಾಗದ ಕಾರಣ ಜನಪ್ರತಿನಿಧಿಗಳು ಹಾಗೂ ನಗರಸಭೆ ಆಡಳಿತಕ್ಕೆ ನಿತ್ಯ ಜನ ಶಾಪ ಹಾಕುತ್ತಿದ್ದಾರೆ ಎಂದರು.

ನಗರದ ಎಂಜಿ ರಸ್ತೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಅವೈಜ್ಞಾನಿಕವಾಗಿ ಸಿಮೆಂಟ್​ ರಸ್ತೆ ಮಾಡುತ್ತಿದ್ದು, ಈ ರಸ್ತೆಗೆ ಹೊಂದಿಕೊಂಡಂತೆ ಸೇರುವ ಅಡ್ಡರಸ್ತೆಗಳಿಗೆ ಸಂಪರ್ಕ ನೀಡುತ್ತಿಲ್ಲ. ಜತೆಗೆ ಎಂಜಿ ರಸ್ತೆಯ ಬದಿಗಳಲ್ಲಿ ಅಳವಡಿಸಿದ್ದ ವಿದ್ಯುತ್​ ದೀಪಗಳನ್ನು ಕಡಿತಗೊಳಿಸಿ ನಗರವನ್ನು ಕತ್ತಲಲ್ಲಿಟ್ಟಿದ್ದಾರೆ. ಕಾಮಗಾರಿ ಸ್ಥಳದಲ್ಲಿ ಸೂಚನಾ ಫಲಕ ಹಾಕದೆ ನಿತ್ಯ ಅಪಘಾತಗಳು ಸಂಭವಿಸುತ್ತಿವೆ. ಇದಕ್ಕೆಲ್ಲ ಹೊಣೆ ಯಾರು? ಗುತ್ತಿಗೆ ಪಡೆದಿರುವವರು ಯಾರು? ಇದು ಯಾವ ಯೋಜನೆಯ ಖರ್ಚು ವೆಚ್ಚ, ದಿನಾಂಕ ಸೇರಿ ಯಾವುದೇ ತಿಳಿವಳಿಕೆಯ ಫಲಕ ಪ್ರದರ್ಶಿಸಿಲ್ಲವೆಂದು ಸದಸ್ಯರು ದೂರಿದರು.

ನಾಯಿಗಳಿಗೆ ಆಶ್ರಯ ತಾಣ ತೆರೆಯಲಿ

ನಗರದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚುತ್ತಿರುವ ಬಗ್ಗೆ ಸಾರ್ವಜನಿಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಶ್ವಾನಗಳ ಉಪಟಳದಿಂದ ಜನ ಹೈರಾಣಾಗಿದ್ದಾರೆ. ಆದರೆ, ಪ್ರಾಣಿದಯಾ ಸಂದವರು ನಾಯಿಗಳನ್ನು ಹಿಡಿದು ಸ್ಥಳಾಂತರಿಸುವುದಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಅಂತಹ ಸಂದವರಿಗೆ ವರ್ಷಕ್ಕೆ 10 ಲಕ್ಷ ರೂ. ನಗರಸಭಾ ನಿಧಿಯಿಂದ ಹಣ ನೀಡಲಾಗುವುದು. ಆ ಹಣದಲ್ಲಿ ನಗರದ ನಾಯಿಗಳಿಗೆ ಗೋಶಾಲೆ ಮಾದರಿಯಲ್ಲಿ ಆಶ್ರಯ ತಾಣ ತೆರೆದು ಅವುಗಳನ್ನು ಸಂರಸಿ ನಾಗರಿಕರಿಗೆ ಅನುಕೂಲ ಮಾಡಬೇಕು ಎಂದು ವಿಜಿಕುಮಾರ್​ ಒತ್ತಾಯಿಸಿದರು.

ಸದಸ್ಯರಾದ ಭೈರವೇಶ್ವರ ರಾಜು, ಕುರುಪೇಟೆ ಲೋಕೇಶ್​, ಕಿರಣ್​, ಮಳಗಾಳು ಕಾಂತರಾಜು, ವಿಜಯಕುಮಾರ್​, ಮುಕುಂದರಾವ್​, ವೀರೇಶ್​, ಲಕ್ಷಿ$್ಮ ದೇವಮ್ಮ, ಸ್ಟ್ಟುಡಿಯೋ ಚಂದ್ರು , ಮಕ್ಬುಲ್​ ಪಾಷ್​, ಸರಳಾ, ವೆಂಕಟೇಶ್​, ಪರಿಸರ ಇಂಜಿನಿಯರ್​ ಧನಂಜಯ್​, ಸಹಾಯಕ ಕಾರ್ಯಪಾಲಕ ಇಂಜಿನಿಯರ್​ ಸಾಗರ್​, ಲೆಕ್ಕಾಧಿಕಾರಿ ಶಿವಣ್ಣ, ಸಮುದಾಯ ಸಂಟನಾಧಿಕಾರಿ ನಟರಾಜು, ಹಿರಿಯ ಆರೋಗ್ಯ ನಿರೀಕ್ಷಕ ಮಲ್ಲಿಕಾರ್ಜುನ್​ ಹಾಗೂ ಇತರರಿದ್ದರು.

ಸಮಸ್ಯೆ ಪರಿಹಾರಕ್ಕೆ ಕ್ರಮ

ನಗರಸಭಾ ಆಡಳಿತ ಅಧಿಕಾರಿ ಹಾಗೂ ತಹಸೀಲ್ದಾರ್​ ಎಂ.ಸಂಜಯ್​ ಮಾತನಾಡಿ, ನಗರಸಭಾ ಸದಸ್ಯರ ಆಡಳಿತಾತ್ಮಕ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುವ ಹಾಗೂ ನಗರಸಭೆಯಲ್ಲಿ ಜಡ್ಡುಗಟ್ಟಿದ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ಭರವಸೆ ನೀಡಿದರು. ಇನ್ನು ಮುಂದೆ ಅರ್ಧ ದಿನ ನಗರಸಭಾ ಕಚೇರಿಯಲ್ಲಿ ಕುಳಿತು ಜನರ ಸಮಸ್ಯೆಗಳಿಗೆ ಪರಿಹಾರ ನೀಡುವುದಾಗಿ ಹೇಳಿದರು.

ಗುಜರಾತ್​ ಪ್ರವಾಸ ಲೆಕ್ಕ ಹೇಳಿ

ನಗರಸಭೆಯಿಂದ ಸದಸ್ಯರಿಗೆ ಸ್ವಚ್ಛತಾ ಅಭಿಯಾನದ ಬಗ್ಗೆ ಅಧ್ಯಯನ ಪ್ರವಾಸ ಕೈಗೊಳ್ಳಲಾಗಿತ್ತು. ಆದರೆ, ಈ ಅಧ್ಯಯನದಲ್ಲಿ ಭಾಗವಹಿಸಬೇಕಾದ ಪರಿಸರ ಹಾಗೂ ಆರೋಗ್ಯ ಶಾಖಾಧಿಕಾರಿಗಳು ಭಾಗವಹಿಸದೆ ಕೇವಲ ನೌಕರರನ್ನು ಕಳುಹಿಸಿಕೊಟ್ಟ ಬಗ್ಗೆ ಕುರುಪೇಟೆ ಲೋಕೇಶ್​ ವಿರೋಧ ವ್ಯಕ್ತಪಡಿಸಿದರು. ತರಬೇತಿ ಪ್ರವಾಸಕ್ಕೆ ನಗರಸಭಾ ನಿಧಿಯನ್ನು ಖರ್ಚು ಮಾಡಲಾಗಿದ್ದು, ಅದರ ಲೆಕ್ಕಪತ್ರದ ವಿವರವನ್ನು ಸಭೆಯಲ್ಲಿ ಮಂಡಿಸಬೇಕು ಎಂದು ಆಗ್ರಹಿಸಿದರು.