ಜಿಲ್ಲೆ

ಅಮಿತ್ ಷಾಗೆ ಕನ್ನಡಿಗರ ಮತ ಕೇಳಲು ನೈತಿಕತೆ ಇದೆಯೇ?: ಸಿಎಂ ಸಿದ್ದರಾಮಯ್ಯ

ಮೈಸೂರು: ರಾಜ್ಯದ ಜನರಿಗೆ ಬರ ಸಂಕಷ್ಟದಲ್ಲಿ ಸಹಾಯಕ್ಕೆ ಬಾರದ ಗೃಹ ಸಚಿವ ಅಮಿತ್ ಷಾಗೆ ಕನ್ನಡಿಗರ ಮತ ಕೇಳಲು ಯಾವ ನೈತಿಕತೆ ಇದೆ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.


ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಮಿತ್ ಷಾ ರಾಜ್ಯ ಭೇಟಿ ವಿಚಾರದ ಕುರಿತು ಪ್ರತಿಕ್ರಿಯಿಸಿ, ನಮಗೆ ಬರಗಾಲದ ಪರಿಹಾರ ಐದು ಪೈಸೆಯೂ ಬಂದಿಲ್ಲ. ಪರಿಹಾರ ಕೊಡದೆ ಹೇಗೆ ಬಂದು ಇಲ್ಲಿ ಮತ ಕೇಳುತ್ತಾರೆ? ಅಮಿತ್ ಷಾ ತಮ್ಮ ಮನೆಯಿಂದ ಬರ ಪರಿಹಾರದ ಹಣ ಕೊಡುತ್ತಾರೆಯೇ? ಅದೇನು ನಮಗೆ ಭಿಕ್ಷೆಯೇ? ಎಂದು ಖಾರವಾಗಿ ಪ್ರಶ್ನಿಸಿದರು.


ಎಚ್.ಡಿ.ಕುಮಾರಸ್ವಾಮಿ ರಾಜ್ಯಕ್ಕೆ ಪರಿಹಾರ ಕೊಡಿಸಿ ನಂತರ ಅಮಿತ್ ಷಾ ಅವರನ್ನು ಕರೆದುಕೊಂಡು ಬರಬೇಕಿತ್ತು. ಕುಮಾರಸ್ವಾಮಿ ಬಿಜೆಪಿ ದೊಡ್ಡ ವಕ್ತಾರ ರೀತಿ ಇದ್ದಾರೆ. ಅವರು ಇದನ್ನೆಲ್ಲ ಕೇಳಬೇಕು. ಪರಿಹಾರ ಕೊಡದಿರುವುದನ್ನೂ ಅವರು ಸಮರ್ಥಿಸಿಕೊಳ್ಳುತ್ತಾರೆ. ಕನ್ನಡಿಗರು ಈ ಚುನಾವಣೆಯಲ್ಲಿ ಅವರಿಗೆ ಸರಿಯಾದ ಪಾಠ ಕಲಿಸುತ್ತಾರೆ ಎಂದು ಹರಿಹಾಯ್ದರು.


‘ಮಂಡ್ಯದಲ್ಲಿ ಸ್ಪರ್ಧೆ ದೇವರ ಇಚ್ಛೆ’ ಎಂದಿರುವ ಎಚ್‌ಡಿಕೆ ಹೇಳಿಕೆಗೆ ವ್ಯಂಗ್ಯ ಮಾಡಿದ ಸಿಎಂ, ಮಗನನ್ನು ನಿಲ್ಲಿಸುವಾಗ ಯಾರ ಇಚ್ಛೆ ಇತ್ತು. ಈಗ ದೇವರು ಎಂದರೆ ಆಗ ಯಾರಿದ್ದರು? ಸಿಎಂ ಆಗಿದ್ದಾಗಲೇ ಅವರ ಮಗ ಅಲ್ಲಿ ಸೋತಿದ್ದಾನೆ. ಈ ಬಾರಿ ಜೆಡಿಎಸ್‌ನವರು ಮೂರು ಕ್ಷೇತ್ರದಲ್ಲೂ ಸೋಲುತ್ತಾರೆ ಎಂದು ಕುಟುಕಿದರು.


ಸಚಿವರಾದ ಸಂತೋಷ್ ಲಾಡ್ ಹಾಗೂ ನಾಗೇಂದ್ರ ಅವರ ಮೇಲೆ ಶಾಸಕ ಜನಾರ್ದನ ರೆಡ್ಡಿಯ ಅಕ್ರಮ ಗಣಿಗಾರಿಕೆ ಆರೋಪದ ಕುರಿತು ಪ್ರತಿಕ್ರಿಯೆ ನೀಡಿದ ಸಿಎಂ, ರೆಡ್ಡಿ ಬೇಕಾದರೆ ಕೋರ್ಟ್‌ಗೆ ಹೋಗಲಿ. ನಾನು ಲೋಕಾಯಕ್ತರಾಗಿದ್ದ ಸಂತೋಷ್ ಹೆಗ್ಡೆ ವರದಿ ಆಧಾರದ ಮೇಲೆ ಹೋರಾಟ ಮಾಡಿದ್ದು. ಆದರೆ, ಈ ವರದಿಯಲ್ಲಿ ಇವರ ಹೆಸರು ಇತ್ತಾ? ಇವರ ಹೆಸರು ಇಲ್ಲದ ಮೇಲೆ ಸುಮ್ಮನೆ ಏಕೆ ಆರೋಪ? ಇವಾಗ ಏಕೆ ಆ ಕುರಿತು ಪ್ರಸ್ತಾಪ ಮಾಡ್ತಾರೆ ಎಂದು ಕಿಡಿಕಾರಿದರು.


ಅಕ್ರಮ ಗಣಿಗಾರಿಕೆ ವಿರುದ್ಧ ಬೆಂಗಳೂರಿನಿಂದ ಬಳ್ಳಾರಿವರೆಗೆ ಪಾದಯಾತ್ರೆ ಮಾಡಿದ್ದೆ. ಆವಾಗ ಮಾತನಾಡದವರು ಇವಾಗ ಏಕೆ ಮಾತನಾಡುತ್ತಿದ್ದಾರೆ? ರಿಪಬ್ಲಿಕ್ ಆಫ್ ಬಳ್ಳಾರಿ ಮಾಡಲು ಹೋಗಿದ್ದರು ಎಂದು ಸಂತೋಷ್ ಹೆಗ್ಡೆ ವರದಿಯಲ್ಲಿ ಕೊಟ್ಟಿದ್ದರು. ಈಗ ಅವರು ಬೇಕಾದರೆ ಅವರು ಕೋರ್ಟ್‌ಗೆ ಹೋಗಲಿ ಎಂದು ತಿರುಗೇಟು ನೀಡಿದರು.