ವಿಜಯಪುರ ಅಯ್ಯಪ್ಪ ನಗರದ ಶ್ರೀ ಪಂಪಾ ಮಹಾಗಣಪತಿ ದೇವಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ಇರುಮುಡಿ ಮಹೋತ್ಸವದಲ್ಲಿ ಶ್ರೀಧರ್ಮಶಾಸ್ತಾ ಅಯ್ಯಪ್ಪ ಸ್ವಾಮಿ ದೇವಾಲಯದ ಪ್ರಧಾನ ಅರ್ಚಕ ಮತ್ತು ಗುರುಸ್ವಾಮಿ ಜೆ.ವಿ.ಮುನಿರಾಜು, ಅಯ್ಯಪ್ಪ ಮಾಲಾಧಾರಿಗಳಾದ ನಂದೀಶ್, ವಸಂತ್, ಮಧು, ಮುರಳಿ, ಶಿವಕುಮಾರ್, ಕಿಶೋರ್ ಕುಮಾರ್, ಭಕ್ತರಾದ ಸುಶೀಲಮ್ಮ, ಸುಧಾರಾಣಿ, ಮಂಜುನಾಥ್, ಯೋಗೀಶ್, ಪ್ರಮೋದ್, ಶಶಿ ಇದ್ದರು. 
ಜಿಲ್ಲೆ

ಮಾಲಾಧಾರಿಗಳ ಇರುಮುಡಿ ಉತ್ಸವ

ಶ್ರೀ ಪಂಪಾ ಮಹಾಗಣಪತಿ ದೇವಾಲಯದ ಆವರಣದಲ್ಲಿ ಪೂಜಾ ಕಾರ್ಯ

ವಿಜಯಪುರ: 41 ದಿನ ತುಳಸಿ ಮಾಲೆ ಹಾಕಿ, ಕಪ್ಪುವಸ ಧರಿಸಿ, ಅಯ್ಯಪ್ಪ ಸ್ವಾಮಿಯ ವ್ರತಾಚರಣೆ ಪೂರ್ಣಗೊಳಿಸಿ, ಶಬರಿಮಲೆಯ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಹೊರಟವರಿಗೆ ಪಟ್ಟಣದ ಅಯ್ಯಪ್ಪ ನಗರದ ಶ್ರೀ ಪಂಪಾ ಮಹಾಗಣಪತಿ ದೇವಾಲಯದ ಆವರಣದಲ್ಲಿ ಸೋಮವಾರ ಇರುಮುಡಿ ಉತ್ಸವ ನಡೆಯಿತು.

ಶ್ರೀಧರ್ಮಶಾಸ್ತಾ ಅಯ್ಯಪ್ಪ ಸ್ವಾಮಿ ದೇವಾಲಯದ ಪ್ರಧಾನ ಅರ್ಚಕ ಮತ್ತು ಗುರುಸ್ವಾಮಿ ಜೆ.ವಿ.ಮುನಿರಾಜು ಮಾತನಾಡಿ, ಶಬರಿಮಲೆ ಕೇರಳದಲ್ಲಿರುವ ಒಂದು ಪುಣ್ಯಕ್ಷೇತ್ರ. ಇದು ದೇಶದ ಅತ್ಯಂತ ಪ್ರಾಚೀನ ಮತ್ತು ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿದೆ. ಆದ್ದರಿಂದ ಪ್ರತಿವರ್ಷ ಲಕ್ಷಾಂತರ ಜನರು ಶ್ರೀಅಯ್ಯಪ್ಪ ಸ್ವಾಮಿಯ ಮಾಲೆ ಧರಿಸಿ, ಸ್ವಾಮಿಯ ದರ್ಶನ ಪಡೆದು, ತಮ್ಮ ಇಷ್ಟಾರ್ಥಗಳನ್ನು ಪೂರೈಸಿಕೊಳ್ಳುತ್ತಾರೆ ಎಂದು ತಿಳಿಸಿದರು.

ಜಿಲ್ಲಾ ಸರ್ವೋದಯ ಮಂಡಳಿಯ ಅಧ್ಯಕ್ಷ ಡಾ.ಪ್ರಶಾಂತ ಮಾತನಾಡಿ, ಶಬರಿಮಲೆ ಯಾತ್ರೆಯ ಅವಧಿಯನ್ನು ದೇವಾಲಯದ ಆಡಳಿತ ಮಂಡಳಿ ಧರ್ಮಶಾಸದ ಅನುಸಾರ ಮೊದಲೇ ನಿರ್ಧರಿಸಲಾಗಿದ್ದು, ಯಾತ್ರಿಕರು ತಮ್ಮ ಅನುಕೂಲದ ವಿವಿಧ ಹಂತಗಳಲ್ಲಿ ಕ್ರಮಬದ್ಧವಾಗಿ ಯಾತ್ರೆ ಕೈಗೊಳ್ಳಬೇಕು. ಈ ಯಾತ್ರೆಯು ಮಲಯಾಳಂ ವರ್ಷದ ವೃಶ್ಚಿಕ ಮಾಸದ ಮೊದಲ ದಿನದಂದು ಪ್ರಾರಂಭವಾಗಿ ಧನುರ್ ಮಾಸದ ಕೊನೆಯ ದಿನದಂದು ಕೊನೆಗೊಳ್ಳುತ್ತದೆ. ಆದ್ದರಿಂದ ಈ ದಿನಗಳಲ್ಲಿ ಮಾಲೆ ಧರಿಸುವ ಸ್ವಾಮಿಗಳು ತಮ್ಮ ಕಾಲಾನುಕೂಲದ ಅನುಸಾರವಾಗಿ 41 ದಿನಗಳು ಮಾಲೆ ಧರಿಸಿ, ಸ್ವಾಮಿಯ ವ್ರತಾಚರಣೆಯನ್ನು ಪೂರ್ಣಗೊಳಿಸಿದ ನಂತರ, ಸ್ವಾಮಿಯ ದರ್ಶನಕ್ಕೆ ಯಾತ್ರೆಯನ್ನು ಕೈಗೊಳ್ಳಬೇಕು. ಈ ಯಾತ್ರೆಯ ಅವಧಿಯನ್ನು ನಾವು ಋತು ಮಂಡಲ ಎಂದು ಕರೆಯಲಾಗುತ್ತದೆ ಎಂದು ತಿಳಿಸಿದರು. ಇರುಮುಡಿ ಮಹೋತ್ಸವದ ಅಂಗವಾಗಿ ಪ್ರತಿದಿನ ದೇವಾಲಯದ ಆವರಣದಲ್ಲಿ ಮಾಲೆ ಧರಿಸಿದ ಸ್ವಾಮಿಗಳಿಗೆ ಪ್ರಾರ್ಥನೆ, ಭಜನೆ, ಧಾರ್ಮಿಕ ವಿಚಾರಗಳ ಚಿಂತನೆ, ಅವನ, ಹೋಮ, ಸ್ವಾಮಿಯ ಶರಣ ಘೋಷಣೆಗಳು ಮತ್ತು ಅನ್ನಸಂತರ್ಪಣೆ ನಡೆಯಿತು.