ಪಾಂಡವಪುರ ಪಟ್ಟಣದಲ್ಲಿ ಶುಕ್ರವಾರ ಸುರಿದ ಮಳೆ ಸುರಿಯಿತು. 
ಜಿಲ್ಲೆ

ಪಾಂಡವಪುರದಲ್ಲಿ ವರುಣನ ಸಿಂಚನ

ಪಾಂಡವಪುರ: ತಾಲೂಕಿನಾದ್ಯಂತ ಶುಕ್ರವಾರ ಸಂಜೆ ಬಿರುಗಾಳಿ ಸಹಿತ ಮಳೆ ಸುರಿದಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

ಮಳೆ ಕೊರತೆ ಮತ್ತು ವಿಶ್ವೇಶ್ವರಯ್ಯ ನಾಲಾ ಆಧುನೀಕರಣ ಹಿನ್ನೆಲೆಯಲ್ಲಿ ವಿಸಿ ನಾಲೆ ಸೇರಿದಂತೆ ಕೆಆರ್‌ಎಸ್ ಅಚ್ಚುಕಟ್ಟು ವ್ಯಾಪ್ತಿಯ ಚಿಕ್ಕದೇವರಾಜ ಅರಸು, ವಿರಿಜಾ ಹಾಗೂ ಹೇಮಾವತಿ ನಾಲೆಗಳಲ್ಲಿ ನೀರು ಹರಿದಿರಲಿಲ್ಲ. ಪರಿಣಾಮ ರೈತರು ಒಂದು ಹಂಗಾಮು ಬೆಳೆ ಬೆಳೆಯಲು ಸಾಧ್ಯವಾಗಿರಲಿಲ್ಲ.

ನಾಲೆಯಲ್ಲಿ ನೀರು ಹರಿಯದ ಪರಿಣಾಮ ಬಹತೇಕ ಕೆರೆ-ಕಟ್ಟೆಗಳು ಬರಿದಾಗಿತ್ತು. ಜತೆಗೆ ಕೆರೆ ಅಚ್ಚುಕಟ್ಟು ವ್ಯಾಪ್ತಿಯ ರೈತರು ಆತಂಕಕ್ಕೆ ಒಳಗಾಗಿದ್ದರು. ಅಂತರ್ಜಲ ಮಟ್ಟ ಕುಸಿತ ಕಂಡು ಬೋರ್‌ವೆಲ್ ಆಶ್ರಿತ ಜಮೀನುಗಳಲ್ಲಿ ಬೆಳೆದಿದ್ದ ಬೆಳೆಗಳು ಒಣಗುವ ಹಂತ ತಲುಪಿತ್ತು. ಇದೀಗ ಮಳೆಯಿಂದಾಗಿ ರೈತರು ಕೊಂಚ ನಿಟ್ಟುಸಿರು ಬಿಡುವಂತಾಗಿದೆ.

ಯುಗಾದಿ ಸಂದರ್ಭದಲ್ಲಿ ವಾಡಿಕೆಯಂತೆ ಮಳೆ ಬೀಳಬೇಕಿತ್ತು. ಆದರೆ ಈ ವರ್ಷ ಮಳೆ ಆಗಿರಲಿಲ್ಲ. ವರ್ಷದ ಪ್ರಥಮ ಮಳೆ ರೈತರಿಗಷ್ಟೇ ಅಲ್ಲದೆ ಎಲ್ಲರಲ್ಲೂ ಖುಷಿ ಮೂಡಿಸಿದೆ. ಬಿಸಿಲಿನ ತಾಪಕ್ಕೆ ಮಳೆ ತಂಪೆರೆದಿದ್ದು, ಮೇನಲ್ಲಿ ನಾಲ್ಕೈದು ಹದ ಮಳೆಯಾದರೆ ಕಬ್ಬು ಉಳಿಸಿಕೊಳ್ಳುವ ಜತೆಗೆ ಅಂತರ್ಜಲ ಮಟ್ಟ ಸುಧಾರಣೆಯಾಗಲಿದೆ.