ಹುಲ್ಲೋಳಿ ಬಳಿಯ ನೀರು ಸರಬರಾಜು ಕೇಂದ್ರದಿಂದ ಮುಖ್ಯ ಕಾಲುವೆಗೆ ನೀರು ಹರಿಯುತ್ತಿರುವುದು. 
ಜಿಲ್ಲೆ

ಸ್ಥಳಾಂತರವಾಗದ ನೀರಾವರಿ ಕಚೇರಿ

ಹುಕ್ಕೇರಿ: ತಾಲೂಕಿನ ಪೂರ್ವಭಾಗದ ರೈತರು ನೀರಾವರಿ ಸೌಲಭ್ಯದಿಂದ ವಂಚಿತ ಆಗ ಬಾರದೆಂದು ಶಾಸಕ ಉಮೇಶ ಕತ್ತಿ ಮತ್ತು ಆಗಿನ ನೀರಾವರಿ ಸಚಿವ ದಿ.ಮಲ್ಲಾರಿಗೌಡ ಪಾಟೀಲ ಅವರು ಸುಮಾರು 16 ವರ್ಷಗಳ ಹಿಂದೆ ಕೊಟಬಾಗಿ ಏತ ನೀರಾವರಿ ಯೋಜನೆಯ ಕನಸು ಬಿತ್ತಿದರು. ಆ ಯೋಜನೆಯಿಂದ ಹುಕ್ಕೇರಿ ಹಾಗೂ ಚಿಕ್ಕೋಡಿ ತಾಲೂಕಿನ ಅಂದಾಜು 8 ಸಾವಿರ ಹೆಕ್ಟೇರ್ ಜಮೀನುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ಆದರೆ, ಏತ ನೀರಾವರಿ ಮುಖ್ಯ ಕಾರ್ಯಾಲಯ ಎಲ್ಲಿದೆ? ಅದರ ಅಧಿಕಾರಿಗಳು ಯಾರು ಎಂಬುವುದೇ ರೈತರಿಗೆ ಈವರೆಗೆ ಸರಿಯಾಗಿ ಗೊತ್ತಿಲ್ಲ.

ನೀರಾವರಿ ಯೋಜನೆಗಾಗಿ ಭೂಮಿ ಕಳೆದುಕೊಂಡ ರೈತರಿಗೆ ಸರಿಯಾಗಿ ಪರಿಹಾರ ಧನವೂ ದೊರಕಿಲ್ಲ. ಈ ಕುರಿತು ವಿಚಾರಿಸಬೇಕೆಂದರೆ ಎಲ್ಲಿ, ಯಾರ ಬಳಿ ಕೇಳಬೇಕೆಂಬ ಅರಿವೂ ರೈತರಿಗಿಲ್ಲ. ಕರ್ನಾಟಕ ನೀರಾವರಿ ನಿಗಮದ ಆಶ್ರಯದಡಿ ಕೈಗೂಡಿದ ಏತ ನೀರಾವರಿ ಯೋಜನೆ 13 ವರ್ಷಗಳ ಹಿಂದೆ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಂಡಿತು. ಯೋಜನಾ ಕ್ಷೇತ್ರ ಹುಕ್ಕೇರಿ ಮತ್ತು ಚಿಕ್ಕೋಡಿ ತಾಲೂಕಿಗೆ ಸೀಮಿತವಾಗಿದ್ದರೆ, ಅದರ ಕಾರ್ಯಾಲಯ ಗೋಕಾಕ ತಾಲೂಕಿನ ಘಟಪ್ರಭಾ ಗ್ರಾಮದಲ್ಲಿದೆ.

ರೈತರು ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬೇಕಾದರೆ ಗೋಕಾಕ ತಾಲೂಕಿಗೆ ತೆರಳಬೇಕು. ಯೋಜನಾ ಕ್ಷೇತ್ರದ ಅಧಿಕಾರಿಗಳ ಕಾರ್ಯ ವ್ಯಾಪ್ತಿ ಹುಕ್ಕೇರಿ ಮತ್ತು ಚಿಕ್ಕೋಡಿ ತಾಲೂಕಿಗೆ ಸೀಮಿತವಾಗಿದೆ. ಆದರೆ, ಈ ಎರಡೂ ತಾಲೂಕಾಡಳಿತಕ್ಕೆ ಈ ಕಾರ್ಯಾಲಯದ ಸಿಬ್ಬಂದಿ ವಿವರ ಮತ್ತು ಸಂಪರ್ಕವಿಲ್ಲ. ಇದರಿಂದ ಅಧಿಕಾರಿಗಳು ಯೋಜನಾ ಕ್ಷೇತ್ರಕ್ಕೆ ಸರಿಯಾಗಿ ಬರುವುದಿಲ್ಲ. ಹಾಗಾಗಿ ಕಾರ್ಯಾಲಯದಲ್ಲಿ ಹಾಜರಿಗೆ ಮಾತ್ರ ಸೀಮಿತವಾಗಿದೆ. ವಿಶೇಷವಾಗಿ ಈ ಯೋಜನೆ ಸೆಕ್ಷನ್ ಆಫೀಸರ್ ಮಾತ್ರ ರೈತರಿಗೆ ಪರಿಚಿತರು. ಇವರ ಹೊರತಾಗಿ ಇನ್ನಾರು ಇರುವರು ಎಂಬುವುದು ಯಾರಿಗೂ ಗೊತ್ತಿಲ್ಲ.

ರಚನೆಯಾಗಿಲ್ಲ ರೈತರ ಸಂಘ: ಯೋಜನೆ ಪ್ರದೇಶ ವ್ಯಾಪ್ತಿಯಲ್ಲಿ ನಿಯಮಾನುಸಾರ ನೀರು ಬಳಕೆದಾರರ 14 ಸಂಘ ರಚನೆಯಾಗಬೇಕಿತ್ತು. ಆದರೆ, ಹುಲ್ಲೋಳಿ ಗ್ರಾಮದಲ್ಲಿ ಮಾತ್ರ ಒಂದು ಸೊಸೈಟಿ ರಚನೆಯಾಗಿದೆ. ನೀರು ಬಳಕೆದಾರರ ಸಂಘ ರಚಿಸಿಕೊಂಡು ಅದರ ಪದಾಧಿಕಾರಿಗಳು ಎಲ್ಲ ರೈತರಿಗೂ ನೀರು ದೊರಕುವಂತೆ ನೋಡಿಕೊಳ್ಳಬೇಕು. ಆದರೆ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆ ಮತ್ತು ರೈತರ ಅಸಹಕಾರದಿಂದ ಸಂಘಗಳ ರಚನೆಯಾಗಿಲ್ಲ. 4ರಿಂದ 5 ಎಕರೆ ಪ್ರದೇಶದಲ್ಲಿ ಹುಕ್ಕೇರಿ ತಾಲೂಕಿನ ಹುಲ್ಲೋಳಿ ಗ್ರಾಮದಿಂದ 1 ಕಿ.ಮೀ.ಅಂತರದಲ್ಲಿ ನೀರಾವರಿ ಸೊಸೈಟಿ ಇದೆ. ಇಲ್ಲಿ 20 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಿದ ಸುಸಜ್ಜಿತ ಕಟ್ಟಡವೂ ಇದೆ. ಆದರೆ, ಅದು ಸದಾ ಬೀಗ ಹಾಕಿರುತ್ತದೆ. ಇನ್ನು 28 ವರ್ಷಗಳಿಂದ ಘಟಪ್ರಭಾ ಸಮೀಪದ ಧೂಪದಾಳ ಗ್ರಾಮದಲ್ಲಿರುವ ಸಿಬಿಸಿ-3 ಕಾರ್ಯಾಲಯವೇ ಇದರ ನಿಯಂತ್ರಣಾ ಕಚೇರಿಯಾಗಿದೆ. ಎಇಇ ಸೇರಿ 5 ಸಿಬ್ಬಂದಿ ಇಲ್ಲಿ ಕಾರ್ಯನಿರ್ವಹಿಸುತ್ತಾರೆ. ಸದ್ಯ ಬೆಳಗಾವಿ ಜಿಲ್ಲೆಯವರೇ ಆದ ರಮೇಶ ಜಾರಕಿಹೊಳಿ ಅವರು ನೀರಾವರಿ ಸಚಿವರಾಗಿದ್ದಾರೆ. ಧುಪದಾಳದಲ್ಲಿರುವ ಕಾರ್ಯಾಲಯವನ್ನು ಏತ ನೀರಾವರಿ ಪ್ರದೇಶದಲ್ಲಿರುವ ಸುಸಜ್ಜಿತ ಕಟ್ಟಡಕ್ಕೆ ಸ್ಥಳಾಂತರಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ಸೌಲಭ್ಯ ಯಶಸ್ವಿಗೆ ರೈತರೂ ಜವಾಬ್ದಾರಿ ವಹಿಸಿಕೊಳ್ಳಲಿ

ಕೊಟಬಾಗಿ ಏತ ನೀರಾವರಿ ಯೋಜನೆ ಮಾತ್ರವಲ್ಲದೆ ಜಲಾಶಯಗಳಿಂದ ನೀರಿನ ಸೌಲಭ್ಯ ಪಡೆಯುವ ಪ್ರದೇಶದ ಎಲ್ಲ ರೈತರು ತಮ್ಮ ಭಾಗದಲ್ಲಿ ಸಂಘ ರಚಿಸಿಕೊಳ್ಳಬೇಕು. ಅಲ್ಲದೆ, ಜಮೀನುಗಳಿಗೆ ನೀರು ಸರಿಯಾಗಿ ತಲುಪುವಂತೆ ನೋಡಿಕೊಂಡಾಗ ಮಾತ್ರ ನೀರಾವರಿ ಸೌಲಭ್ಯ ಯಶಸ್ವಿಯಾಗಲು ಸಾಧ್ಯ ಎಂದು ಹುಕ್ಕೇರಿ ಶಾಸಕ ಉಮೇಶ ಕತ್ತಿ ಸಲಹೆ ನೀಡಿದ್ದಾರೆ.

ಕಾಲುವೆ ದುರಸ್ತಿ, ಹಂಚು ಕಾಲುವೆಗಳನ್ನು ಸಮರ್ಪಕವಾಗಿ ನಿರ್ಮಿಸುವುದು, ಅಕ್ರಮವಾಗಿ ನೀರನ್ನು ಬಳಸಿಕೊಳ್ಳುವ ರೈತರ ಮೇಲೆ ಕಾನೂನು ಕ್ರಮ ಕೈಗೊಳ್ಳುವ ದಿಟ್ಟ ನಿರ್ಣಯ ಕೈಗೊಳ್ಳಬೇಕಾದರೆ ಅಧಿಕಾರಿಗಳು ಯೋಜನಾ ಪ್ರದೇಶದಲ್ಲಿರಬೇಕು. ಆಗ ಮಾತ್ರ ಯೋಜನೆ ಕೈಗೂಡಲು ಸಾಧ್ಯ. | ಬಾಳಾಸಾಹೇಬ ನಾಯಿಕ ತಾಪಂ ಸದಸ್ಯ, ಬೆಳವಿಕೊಟಬಾಗಿ ಏತ ನೀರಾವರಿ ಯೋಜನಾ ಕ್ಷೇತ್ರದಲ್ಲಿ ನಾನು ಕಾರ್ಯನಿರ್ವಹಿಸುತ್ತಿದ್ದೇನೆ. ರೈತರಿಗೆ ಸಂಘ ರಚಿಸಿಕೊಳ್ಳಲು ಸಾಕಷ್ಟು ಬಾರಿ ತಿಳಿಸಿದರೂ ಸಹಕರಿಸುತ್ತಿಲ್ಲ. ಇದರಿಂದ ಯೋಜನೆ ಸಮರ್ಪಕ ಜಾರಿಗೆ ಸಮಸ್ಯೆಯಾಗಿದೆ.| ಸಾಧಿಕ ಮುಲ್ಲಾ ಸೆಕ್ಷನ್ ಆಫೀಸರ್ ಸಿಬಿಸಿ-3, ಘಟಪ್ರಭಾ

| ಬಾಬು ಸುಂಕದ ಹುಕ್ಕೇರಿ