ಮಂಡ್ಯ: ತಮಿಳುನಾಡಿಗೆ ಕಾವೇರಿ ಬಿಡುವಂತೆ ಕಾವೇರಿ ನ್ಯಾಯ ಮಂಡಳಿ ಹಾಗೂ ಸುಪ್ರೀಂ ಕೋರ್ಟ್‌ನಿಂದ ಹಿಂದಿನಿಂದಲೂ ಕಠೋರವಾದ ತೀರ್ಪುಗಳು ಬಂದಿದೆ. ಅದರ ವಿರುದ್ಧ ಮೇಲ್ಮನವಿ ಸಲ್ಲಿಸುವಂತೆ ಸರ್ಕಾರಗಳಿಗೆ ತಿಳಿಸಿದರೂ ನಿರ್ಲಕ್ಷ್ಯವಹಿಸಿದ ಪರಿಣಾಮ ಇಂದು ನೀರು ಬಿಡಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ನೀರಾವರಿ ತಜ್ಞ ಅರ್ಜುನಹಳ್ಳಿ ಪ್ರಸನ್ನಕುಮಾರ್ ಬೇಸರ ವ್ಯಕ್ತಪಡಿಸಿದರು.
ಕಾವೇರಿ ನ್ಯಾಯ ಮಂಡಳಿಯ ಐ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು 90 ದಿನ ಕಾಲಾವಕಾಶವಿತ್ತು. ಈ ಸಂಬಂಧ ಪುನರ್ ಪರಿಶೀಲಿಸುವಂತೆ ಮನವಿ ಮಾಡಿ ಎಂದು ಆಗಲೂ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದೆ. ಆದರೆ ಅವರು ನಿರ್ಲಕ್ಷ್ಯ ವಹಿಸಿದರು. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಹಾಗೂ ಕಾವೇರಿ ನದಿ ನೀರು ನಿಯಂತ್ರಣ ಸಮಿತಿಗಳೆರಡು ಅಸಿಂಧು. ಇವುಗಳ ರಚನೆಗೆ ವಿರೋಧ ವ್ಯಕ್ತಪಡಿಸಿ, ನಾಮನಿರ್ದೇಶನ ಮಾಡದಂತೆಯೂ ಮನವಿ ಮಾಡಿದ್ದೆ. ಆದರೆ ಇದರ ಬಗ್ಗೆ ಸರ್ಕಾರ ತಲೆಕೆಡಿಸಿಕೊಳ್ಳಲಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಆಕ್ಷೇಪ ವ್ಯಕ್ತಪಡಿಸಿದರು.
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಹಾಗೂ ಕಾವೇರಿ ನದಿ ನೀರು ನಿಯಂತ್ರಣ ಸಮಿತಿಗಳಿಗೆ ರಾಜ್ಯದ ನಾಮನಿರ್ದೇಶನ ಮಾಡಿದ್ದರಿಂದ ಕಾವೇರಿ ನ್ಯಾಯ ಮಂಡಳಿಯ ತೀರ್ಪನ್ನು ಒಪ್ಪಿಕೊಂಡಂತಾಯಿತು. ಈಗ ಪ್ರಾಧಿಕಾರ ನೀಡುವ ಆದೇಶವನ್ನೇ ಸುಪ್ರೀಂ ಕೋರ್ಟ್ ಮಾನ್ಯ ಮಾಡುತ್ತಿದೆ. ಪ್ರಾಧಿಕಾರದ ಕಚೇರಿ ಬೆಂಗಳೂರಿನಲ್ಲಿದ್ದು, ರಾಜ್ಯದ ಜಲಾಶಯಗಳ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ. ಅದರ ಆಧಾರದ ಮೇಲೆಯೇ ಪ್ರಾಧಿಕಾರ, ಸಮಿತಿಗಳು ನೀರು ಹರಿಸುವಂತೆ ಆದೇಶ ನೀಡುತ್ತಿವೆ. ಇದೇ ರೀತಿ ಪಂಜಾಬ್ ಹಾಗೂ ಹರಿಯಾಣ ನಡುವೆ ಜಲವಿವಾದವಿದೆ. ಆದರೆ ಪಂಜಾಬ್ ಇದುವರೆಗೂ ಪ್ರಾಧಿಕಾರ ಹಾಗೂ ಸಮಿತಿ ರಚನೆಗೆ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದೆ. ಯಾವ ತೀರ್ಪು ಬಂದರೂ ಅವರು ನೀರು ಬಿಡಲ್ಲ. ಅವರ ವಾದವೇ ರಾಷ್ಟ್ರೀಯ ಜಲ ನೀತಿ ರೂಪಿಸುವಂತೆ ಆಗ್ರಹಿಸುತ್ತಿದ್ದಾರೆ. ಆ ಒಂದು ದಿಟ್ಟತನವನ್ನು ಆಗಿನ ನಮ್ಮ ರಾಜ್ಯ ಸರ್ಕಾರ ತೋರಬೇಕಿತ್ತು ಎಂದು ತಿಳಿಸಿದರು.
ರಾಜ್ಯದ ಪರ ವಾದ ಮಾಡುತ್ತಿದ್ದ ವಕೀಲ ಫಾಲಿ ನಾರಿಮನ್ ರಾಜ್ಯಕ್ಕೆ ಅನ್ಯಾಯ ಮಾಡುತ್ತಲೇ ಬಂದಿದ್ದರು. ತಮಿಳುನಾಡಿಗೆ ಅನುಕೂಲವಾಗುವಂತೆಯೇ ವಾದ ಮಂಡಿಸುತ್ತಿದ್ದರು. ಇದರ ಬಗ್ಗೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ, ಎಚ್.ಡಿ.ಕುಮಾರಸ್ವಾಮಿ ಹಾಗೂ ದೇವೇಗೌಡರ ಗಮನಕ್ಕೂ ತಂದಿದ್ದೆ. ಆದರೆ ಯಾರೂ ಸಹ ವಕೀಲರನ್ನು ಬದಲಾಯಿಸುವ ದಿಟ್ಟತನ ತೋರಲಿಲ್ಲ. ನಂತರ ಬಂದ ಬಿ.ಎಸ್.ಯಡಿಯೂರಪ್ಪ ಸಹ ಮೌನ ವಹಿಸಿದರು. ನಾರಿಮನ್‌ಗೆ ಎಲ್ಲ ಮಾಹಿತಿ ಗೊತ್ತಿದೆ ಎಂದು ಹೇಳುತ್ತಿದ್ದರು. ಆತ ಮಾಡುತ್ತಿದ್ದ ಅನ್ಯಾಯ ಮಾತ್ರ ಕಾಣಿಸಲಿಲ್ಲ. ಆತ ಯಾವ ರೀತಿ ಅನ್ಯಾಯ ಮಾಡಿದ್ದಾನೆ ಎಂಬುದನ್ನು ಒಂದು ಪುಸ್ತಕವನ್ನೇ ಬರೆದಿದ್ದೇನೆ ಎಂದರು.
ಕಾವೇರಿ ನ್ಯಾಯ ಮಂಡಳಿ ನೀಡಿದ ಐತೀರ್ಪಿನ ವಿರುದ್ಧ ವಕೀಲ ಫಾಲಿ ನಾರಿಮನ್ ಮೇಲ್ಮನವಿ ಸಲ್ಲಿಸಲಿಲ್ಲ. ಇದೇ ತಮಿಳುನಾಡಿಗೆ ಸಹಾಯವಾಗಿದೆ. ಆತ ರಾಜ್ಯದ ಪರ ಇರದೆ ತಮಿಳುನಾಡಿಗೆ ಅನುಕೂಲ ಮಾಡಿಕೊಟ್ಟರು. ಈ ಅನ್ಯಾಯದ ಬಗ್ಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ತಿಳಿಸಿದ್ದೆ. ಆದರೆ, ಇವರು ಕೇಳಲಿಲ್ಲ. ತೀರ್ಪಿನಲ್ಲಿ ನೀರು ಹಂಚಿಕೆ ಮಾಡಲಾಗಿದೆ. ಅದರಂತೆ ರಾಜ್ಯದ ಪಾಲಿನ ನೀರನ್ನು ಬಳಸುವಂತೆ ಎಲ್ಲಿಯೂ ಹೇಳಿಲ್ಲ. ಕೇವಲ ತಮಿಳುನಾಡಿಗೆ ಹರಿಸುವಂತೆ ತಿಳಿಸಿದೆ. ಸಂಕಷ್ಟ ಬಂದಾಗ ಸಮಾನವಾಗಿ ಹಂಚಿಕೆ ಮಾಡಿಕೊಳ್ಳುವಂತೆ ತಿಳಿಸಿದೆ. ಆದರೆ ಯಾವ ಮಾನದಂಡದ ಮೇಲೆ ಹಂಚಿಕೆ ಮಾಡಬೇಕು ಎಂಬುದೂ ಇಲ್ಲ. ಈ ಐ-ತೀರ್ಪನ್ನೇ ಸುಪ್ರೀಂ ಕೋರ್ಟ್ ಸಹ ಅನುಮೋದನೆ ನೀಡಿದೆ. ಇದರಿಂದ ನಮ್ಮ ಪಾಲಿನ ನೀರನ್ನು ಬಳಸಲು ಸಾಧ್ಯವಾಗುತ್ತಿಲ್ಲ ಎಂದು ವಿವರಿಸಿದರು.
ಮುಖಂಡ ಎಂ.ಎಸ್.ರಮೇಶ್, ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷ ಲಿಂಗೇಗೌಡ, ನಿರ್ದೇಶಕ ಎಂ.ಶಿವಕುಮಾರ್, ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಸುಬ್ರಹ್ಮಣ್ಯ, ಗಿರೀಶ್, ಶಿವಕುಮಾರ್ ಹಾಜರಿದ್ದರು.