ರಟ್ಟಿಹಳ್ಳಿ: ಶಿಕಾರಿಪುರ ಏತ ನೀರಾವರಿ ಯೋಜನೆಯಡಿ ಭೂ ಸ್ವಾಧೀನಕ್ಕೆ ಒಳಪಡುವ ರಟ್ಟಿಹಳ್ಳಿ, ಹಿರೇಕೆರೂರು ತಾಲೂಕಿನ 18 ಗ್ರಾಮಗಳ ರೈತರ ಸಭೆಯನ್ನು ರಟ್ಟಿಹಳ್ಳಿಯಲ್ಲಿ 2 ದಿನದೊಳಗೆ ನಡೆಸಬೇಕು ಎಂದು ಶಿಕಾರಿಪುರ ತಾಲೂಕಿನ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಹಿರಿಯ ವಕೀಲ ಬಿ.ಡಿ. ಹಿರೇಮಠ ತಿಳಿಸಿದರು.
ಯೋಜನೆಗೆ ಭೂ ಸ್ವಾಧೀನ ಪ್ರಕ್ರಿಯೆ ಕೈಬಿಡುವಂತೆ ಆಗ್ರಹಿಸಿ ಕೈಗೊಂಡಿದ್ದ ಪಾದಯಾತ್ರೆ ಮಂಗಳವಾರ ಶಿಕಾರಿಪುರ ತಲುಪಿತ್ತು. ನೀರಾವರಿ ಇಲಾಖೆ ಕಚೇರಿ ಮುಂಭಾಗದಲ್ಲಿ ಬುಧವಾರ ಪ್ರತಿಭಟನೆಗೆ ಪೊಲೀಸರು ಅನುಮತಿ ನೀಡದ ಕಾರಣ ರಟ್ಟಿಹಳ್ಳಿ ತಾಲೂಕಿನ ಗಡಿ ಭಾಗವಾದ ಕೋಡಮಗ್ಗಿ ಗ್ರಾಮಕ್ಕೆ ವಾಪಸಾಗಿ ನೀರಾವರಿ ಇಲಾಖೆ ಅಧಿಕಾರಿಗೊಂದಿಗೆ ಮಧ್ಯಾಹ್ನ ಸಭೆ ನಡೆಸಿದರು.
‘ಯೋಜನೆ ಬಗ್ಗೆ ಎರಡೂ ತಾಲೂಕಿನ ರೈತರಿಗೆ ಸಮಗ್ರ ಮಾಹಿತಿ ನೀಡಬೇಕು. ರೈತರ ಅಭಿಪ್ರಾಯ ಸಂಗ್ರಹಿಸಬೇಕು’ ಎಂದು ಸಲಹೆ ನೀಡಿದ ಹಿರೇಮಠ, ‘ನಾವು ಇಲ್ಲಿಗೆ ಪಾದಯಾತ್ರೆ ನಿಲ್ಲಿಸುತ್ತೇವೆ; ಹೋರಾಟವನ್ನಲ್ಲ. ಯೋಜನೆಗೆ ಪರ್ಯಾಯ ಮಾರ್ಗವನ್ನು ಅಧಿಕಾರಿಗಳು ಸರ್ಕಾರದ ಗಮನಕ್ಕೆ ತರಬೇಕು’ ಎಂದರು.
ನೀರಾವರಿ ಇಲಾಖೆ ಅಧಿಕಾರಿಗಳಾದ ಪ್ರಶಾಂತ, ಸಹಾಯಕ ಇಂಜಿನಿಯರ್ ಜಯಕುಮಾರ ಮಾತನಾಡಿ, 2 ದಿನದೊಳಗೆ ರೈತರೊಂದಿಗೆ ಸಭೆ ನಡೆಸಲಾಗುವುದು. ರೈತರ ಮನವಿಯನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.
ನಮ್ಮ ಭೂಮಿ ನಮ್ಮ ಹಕ್ಕು ಹೋರಾಟ ಸಮಿತಿ ಅಧ್ಯಕ್ಷ ರಂಗಪ್ಪ ಬಡಪ್ಪಳವರ, ಉಜಿನೆಪ್ಪ ಕೋಡಿಹಳ್ಳಿ, ವಿನಯ ಪಾಟೀಲ, ಹರೀಶ ಇಂಗಳಗೊಂದಿ, ರಾಜಶೇಖರ ಪಾಟೀಲ, ವಸಂತ ದ್ಯಾವಕ್ಕಳವರ, ಎಸ್.ಡಿ. ಹಿರೇಮಠ, ಪ್ರಭು ಸೊರಟೂರು, ಕರಬಸಪ್ಪ ಬನ್ನಿಕೋಡ, ಪರ್ವತಗೌಡ ಅಜಗೋಳ, ಚಾಮರಾಜ ಪಾಟೀಲ, ಮಂಜುನಾಥ ಕತ್ತಗಿ, ಸುಭಾಷ ಸುತ್ತಕೋಟಿ ಇತರರು ಇದ್ದರು.