ಆನೇಕಲ್: ಅಂಗನವಾಡಿಗಳಿಗೆ ಕೊಡಬೇಕಾದ ಸಕ್ಕರೆ ಹಾಗೂ ಇತರ ಆಹಾರ ಸಾಮಗ್ರಿ ಪೊಟ್ಟಣದ ಮೇಲೆ ಬಿಜೆಪಿ ಚಿಹ್ನೆ ಹಾಕಲಾಗಿದೆ ಎಂದು ಆರೋಪಿಸಿ ಸಂಸದ ಡಿ.ಕೆ.ಸುರೇಶ್, ಕಾಂಗ್ರೆಸ್ ಮುಖಂಡ ಉಗ್ರಪ್ಪ ಹಾಗೂ ಶಾಸಕ ಬಿ.ಶಿವಣ್ಣ ಸರ್ಜಾಪುರದಲ್ಲಿರುವ ಆನೇಕಲ್ ಹಾಗೂ ದಕ್ಷಿಣ ತಾಲೂಕು ಎಂಎಸ್‌ಪಿಸಿ ಕೇಂದ್ರದ ಮೇಲೆ ಶುಕ್ರವಾರ ದಾಳಿ ಮಾಡಿ ಪರಿಶೀಲಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪಡಿತರ ವಿತರಣೆಯಲ್ಲಿ ಬಿಜೆಪಿ ಮುಖಂಡರಿಂದ ಅಕ್ರಮ ನಡೆದಿದೆ. ಮಕ್ಕಳಿಗೆ ಕೊಡುತ್ತಿದ್ದ ಪೌಷ್ಟಿಕ ಆಹಾರವನ್ನು ಬಿಜೆಪಿ ಹೆಸರಿನಲ್ಲಿ ರಾಜ್ಯಾದ್ಯಂತ ಹಂಚಲಾಗುತ್ತಿದ್ದು, ಹಾಗೆಯೇ ಸಾಕಷ್ಟು ಸಾಮಗ್ರಿ ಲೂಟಿ ಮಾಡಲಾಗಿದೆ. ಈ ಬಗ್ಗೆ ಸರಿಯಾದ ತನಿಖೆ ಆಗದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಕಾಂಗ್ರೆಸ್ ಮುಖಂಡ ಉಗ್ರಪ್ಪ ಮಾತನಾಡಿ, ಈ ಹಿಂದೆ ಸರ್ಜಾಪುರದಲ್ಲಿ ಸರ್ಕಾರ ಬಡವರಿಗೆ ನೀಡುವ ಅಕ್ಕಿಯನ್ನು ಅಕ್ರಮವಾಗಿ ಮಾರಾಟ ಮಾಡಲು ಮುಂದಾಗಿರುವ ವಿಚಾರದಲ್ಲಿ ಯಾವುದೇ ಕ್ರಮಕೈಗೊಂಡಿಲ್ಲ. ಈ ಬಾರಿ ತನಿಖೆ ಮಾಡದಿದ್ದರೆ ಹೋರಾಟ ನಡೆಸಲಾಗುವುದು ಎಂದರು.
ಶಾಸಕ ಬಿ.ಶಿವಣ್ಣ ಮಾತನಾಡಿ, ಸಹಾಯ ಮಾಡುವ ಆಸೆ ಇದ್ದರೆ ಸ್ವಂತ ಖರ್ಚಿನಿಂದ ಮಾಡಲಿ. ಮಕ್ಕಳಿಗೆ ನೀಡುವಂತಹ ಸರ್ಕಾರಿ ಆಹಾರದ ದುರ್ಬಳಕೆ ಮಾಡಿ, ಹಣ ಮಾಡಲು ಬಿಜೆಪಿ ಮುಖಂಡರು ಮುಂದಾಗಿದ್ದಾರೆ ಎಂದು ಆರೋಪಿಸಿದರು.
ಮಾತಿನ ಚಕಮಕಿ: ಸಂಜೆ 6 ಗಂಟೆಗೆ ಗೋದಾಮಿಗೆ ದಾಳಿ ಮಾಡಿದ ತಂಡ ರಾತ್ರಿ 10 ಗಂಟೆಯಾದರೂ ಸ್ಥಳದಲ್ಲೇ ಮೊಕ್ಕಾಂ ಹೂಡಿತ್ತು. ತಪ್ಪು ಮಾಡಿದವರನ್ನು ಬಂಧಿಸಬೇಕು. ಇಲ್ಲವಾದರೆ ಇಲ್ಲಿಂದ ತೆರಳುವುದಿಲ್ಲ ಎಂದು ಪಟ್ಟು ಹಿಡಿದಿತ್ತು. ಈ ವೇಳೆ ನೂರಾರು ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಕಾರ್ಯಕರ್ತರನ್ನು ಚದುರಿಸಲು ಪೊಲೀಸರು ಹರಸಾಹಸಪಟ್ಟರು. ಬಳಿಕ ಗೋದಾಮನ್ನು ಪೊಲೀಸರು ಸೀಲ್ ಮಾಡಿದರು. ಪ್ರತಿಭಟನೆ ವೇಳೆ ಯಾರೊಬ್ಬರೂ ಸಾಮಾಜಿಕ ಅಂತರ ಕಾಯ್ದುಕೊಂಡಿರಲಿಲ್ಲ.
ಬಿಗುವಿನ ವಾತಾವರಣ ಸೃಷ್ಟಿಯಾದ ಹಿನ್ನೆಲೆಯಲ್ಲಿ ಡಿವೈಎಸ್ಪಿ ನಂಜುಂಡೇಗೌಡ ಹಾಗೂ ಆನೇಕಲ್ ತಾಲೂಕಿನ ಎಲ್ಲ ಠಾಣೆ ಇನ್‌ಸ್ಪೆಕ್ಟರ್‌ಗಳನ್ನು ಸ್ಥಳಕ್ಕೆ ಕರೆಸಿಕೊಂಡು ಹೆಚ್ಚುವರಿ ಭದ್ರತೆ ಕಲ್ಪಿಸಲಾಯಿತು.
ಸರ್ಕಾರ ಬೀಳಿಸಲು ಯತ್ನ: ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಕೆಳಗಿಳಿಸಲು ಸ್ವಪಕ್ಷೀಯರೇ ಷಡ್ಯಂತ್ರ ರೂಪಿಸಿದಂತೆ ಕಾಣುತ್ತಿದೆ. ಬಿಜೆಪಿ ಹೆಸರಿನಲ್ಲಿ ರಾಜ್ಯದ ನಾಯಕರು ಲೂಟಿಗೆ ಇಳಿದಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಎಚ್ಚರವಹಿಸಬೇಕು ಎಂದು ಸಂಸದ ಡಿ.ಕೆ.ಸುರೇಶ್ ಹೇಳಿದರು. ಮಕ್ಕಳಿಗೆ ನೀಡುವ ಆಹಾರವನ್ನು ಲೂಟಿ ಮಾಡಿ ಸಹಾಯಕ್ಕೆ ಮುಂದಾಗಿದ್ದಾರೆ. ಕೂಲಿ ಕಾರ್ಮಿಕರ ಮಕ್ಕಳು ತಿನ್ನುವ ಪದಾರ್ಥಕ್ಕೆ ಕನ್ನ ಹಾಕಿರುವುದು ಸರಿಯಲ್ಲ ಎಂದು ಬೇಸರಿಸಿದರು.