ಬಳ್ಳಾರಿ: ವೇತನ ಪಾವತಿಯಲ್ಲಿ ಅಕ್ರಮ ನಡೆದಿದೆ ಎಂದು ಆರೊಪಿಸಿ ವಿಎಸ್‌ಕೆ ವಿವಿ ಹೊರಗುತ್ತಿಗೆ ಆಧಾರ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ನೌಕರರು ಬುಧವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್‌ಕುಮಾರ್ ಬಂಡಾರು ಅವರಿಗೆ ಮನವಿ ಸಲ್ಲಿಸಿದ್ದಾರೆ.
ವಿಶ್ವವಿದ್ಯಾಲಯದಲ್ಲಿ ಒಟ್ಟು 137 ಹೊರಗುತ್ತಿಗೆ ನೌಕರರಿಗೆ ಬರಬೇಕಿದ್ದ ನಿಗದಿತ ವೇತನಕ್ಕಿಂತ ಕಡಿಮೆ ಪಾವತಿ ಮಾಡಿ ಅನ್ಯಾಯ ಮಾಡಲಾಗಿದೆ. ಈ ಬಗ್ಗೆ ಸತ್ಯಶೋಧನಾ ಸಮಿತಿ ಕೂಡ ಡಿಇಒ/ಜವಾನ/ಸ್ವೀಪರ್ಸ್/ ಸ್ಕಾೃವೆಂಜರ್ಸ್‌ಗೆ 1.07 ಕೋಟಿ ರೂ. ಪಾವತಿಸಲಾಗಿದೆ ಎಂದು ವರದಿ ನೀಡಿತ್ತು.
ಆದರೆ ವಿಶ್ವವಿದ್ಯಾಲಯದ ಕುಲಪತಿ ಸೇರಿದಂತೆ ಯಾವೊಬ್ಬ ಅಧಿಕಾರಿಯೂ ಗಮನ ಹರಿಸುತ್ತಿಲ್ಲ. ಶೀಘ್ರವೇ ವಂಚಿಸಿರುವ ವೇತನವನ್ನು ನೌಕರರಿಗೆ ನೀಡಬೇಕು ಎಂದು ಒತ್ತಾಯಿಸಿದರು.
ಎಚ್.ಜಯಪ್ರಕಾಶ್ ಗೌಡ ನೇತೃತ್ವದ ಸತ್ಯ ಶೋಧನಾ ಸಮಿತಿ ವರದಿ ನೀಡಿ ಒಂಬತ್ತು ತಿಂಗಳು ಕಳೆದರೂ ವಿಶ್ವವಿದ್ಯಾಲಯವೂ ಯಾವುದೇ ಕ್ರಮ ಕೈಗೊಂಡಿಲ್ಲ. ಗುತ್ತಿಗೆ ನೌಕರರಿಗೆ 2020ರ ಜೂನ್‌ನಿಂದ 2022ರ ಜುಲೈವರೆಗೆ ಒಟ್ಟು 28 ತಿಂಗಳಲ್ಲಿ 1.07 ಕೋಟಿ ರೂ. ನೀಡುವಲ್ಲಿ ಲೋಪ ಆಗಿದ್ದು, ನಿಯಮಾನುಸಾರ ನೌಕರರಿಗೆ ವೇತನ ಪಾವತಿಸಬೇಕು ಎಂದು ಆಗ್ರಹಿಸಿದರು. 100ಕ್ಕೂ ಹೆಚ್ಚು ಹೊರಗುತ್ತಿಗೆ ನೌಕರರಿದ್ದರು.