ತುಮಕೂರು : ಜಿಲ್ಲೆಯಲ್ಲಿ 1047 ಮಂದಿ ಕರೊನಾ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ಮರಳಿರುವುದು ನೆಮ್ಮದಿ ಮೂಡಿಸಿದೆ. ಸೋಮವಾರ ಒಂದೇ ದಿನ 76 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಹೊಸದಾಗಿ 72 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು ಈವರೆಗೆ ಒಟ್ಟು 1988 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಂತಾಗಿದೆ. ತುಮಕೂರು ತಾಲೂಕಿನಲ್ಲಿ 28, ಕುಣಿಗಲ್ 12, ಕೊರಟಗೆರೆ 7, ತುರುವೇಕೆರೆ 5 , ಮಧುಗಿರಿ 5, ಚಿಕ್ಕನಾಯಕನಹಳ್ಳಿ 4, ಗುಬ್ಬಿ 4, ತಿಪಟೂರು 3, ಶಿರಾ ಹಾಗೂ ಪಾವಗಡದಲ್ಲಿ ತಲಾ ಇಬ್ಬರಲ್ಲಿ ಸೋಂಕು ಪತ್ತೆಯಾಗಿದೆ.
ವೃದ್ಧೆ ಬಲಿ: ಕರೊನಾ ಮತ್ತೊಂದು ಬಲಿ ಪಡೆದಿದೆ. ಕ್ಯಾತಸಂದ್ರದ 76 ವರ್ಷದ ವೃದ್ಧೆಗೆ ತೀವ್ರ ಜ್ವರ, ಉಸಿರಾಟ ತೊಂದರೆ, ಕೆಮ್ಮು ಕಾಣಿಸಿಕೊಂಡಿದ್ದು ಜು.30ರಂದು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮರಣ ಹೊಂದಿದ್ದು ಕೋವಿಡ್ ಮಾರ್ಗಸೂಚಿಯನ್ವಯ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ. ಈವರೆಗೆ ಸತ್ತವರ ಸಂಖ್ಯೆ 58ಕ್ಕೇರಿದೆ.
76 ಮಂದಿ ಗುಣಮುಖ: ಸೋಮವಾರ ಒಂದೇ ದಿನ 76 ಮಂದಿ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ತುಮಕೂರು 21, ತುರುವೇಕೆರೆ 14, ಮಧುಗಿರಿ 12, ಪಾವಗಡ 9, ಗುಬ್ಬಿ 7, ಕುಣಿಗಲ್ 3, ಶಿರಾ ಹಾಗೂ ತಿಪಟೂರಿನ ಐವರು ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ. ಈವರೆಗೆ 1047 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು ಜಿಲ್ಲೆಯಲ್ಲಿ ಒಟ್ಟು 883 ಸಕ್ರಿಯ ಪ್ರಕರಣಗಳಿದ್ದು ಐಸಿಯುನಲ್ಲಿ 8 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮುಖ್ಯಮಂತ್ರಿ ಬಿಎಸ್‌ವೈ ಗುಣಮುಖಕ್ಕೆ ಪ್ರಾರ್ಥನೆ: ಕರೊನಾ ಪಾಸಿಟಿವ್ ದೃಢಪಟ್ಟಿರುವ ಸಿಎಂ ಬಿ.ಎಸ್.ಯಡಿಯೂರಪ್ಪ ಶೀಘ್ರ ಗುಣಮುಖರಾಗುವಂತೆ ಪ್ರಾರ್ಥಿಸಿ ಜಿಲ್ಲೆಯಾದ್ಯಂತ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಲಾಗಿದೆ. ಅರಕೆರೆ ವೈದ್ಯನಾಥೇಶ್ವರ, ಎಡೆಯೂರು ಸಿದ್ದಲಿಂಗೇಶ್ವರ ಸ್ವಾಮಿ ದೇವಸ್ಥಾನದಲ್ಲೂ ವಿಶೇಷ ಪೂಜೆ ಮಾಡಲಾಗಿದೆ.
ಎಸ್‌ಬಿಐ ಸಿಬ್ಬಂದಿಗೆ ಸೋಂಕು: ಮಧುಗಿರಿ ತಾಲೂಕಿನ ಹೊಸಕೆರೆ ಎಸ್‌ಬಿಐ ಬ್ಯಾಂಕ್‌ನ ಮೂವರು ಸಿಬ್ಬಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಸೋಂಕಿತರ ಪ್ರಾಥಮಿಕ ಸಂಪರ್ಕಿತ ನೌಕರರನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದೆ. ಬ್ಯಾಂಕ್ ಅನ್ನು ಸಂಪೂರ್ಣ ಸ್ಯಾನಿಟೈಸ್ ಮಾಡಿ, ಸೀಲ್‌ಡೌನ್ ಮಾಡಲಾಗಿದೆ.
ಸಿಎಂ ಯಡಿಯೂರಪ್ಪ 4-5 ತಿಂಗಳುಗಳಿಂದ ಕರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಎಚ್ಚರಿಕೆಯಿಂದ ಇದ್ದರೂ ಸೋಂಕು ತಗುಲಿರುವುದು ಆಶ್ಚರ್ಯ. ಪ್ರತಿನಿತ್ಯ ನೂರಾರು ಜನರನ್ನು ಭೇಟಿಯಾಗುವ ಸಂದರ್ಭದಲ್ಲಿ ತಗುಲಿರಬಹುದು. ಶೀಘ್ರ ಗುಣಮುಖರಾಗಲಿ ಎಂಬುದು ನಮ್ಮ ಆಶಯ. ಸಿದ್ದಲಿಂಗ ಶ್ರೀಗಳು ಸಿದ್ಧಗಂಗಾ ಮಠಾಧ್ಯಕ್ಷರು