ಜಿಲ್ಲೆ

ರೈತರಿಗೆ ನೀಡಬೇಕಾದ ಎಕ್ಸ್‌ಗ್ರೇಷಿಯಾ ಪಾವತಿಯಲ್ಲಿ ಅಕ್ರಮ

ಮೈಸೂರು: ಕೈಗಾರಿಕಾ ಪ್ರದೇಶಾಭಿವೃದ್ಧಿಗಾಗಿ ಚಿಕ್ಕಯ್ಯನಛತ್ರ ಹೋಬಳಿ ಇಮ್ಮಾವು, ಅಡಕನಹಳ್ಳಿಹುಂಡಿ, ತಾಂಡವಪುರ ಗ್ರಾಮಗಳಲ್ಲಿ ರೈತರಿಗೆ ನೀಡಬೇಕಾದ ಎಕ್ಸ್‌ಗ್ರೇಷಿಯಾ ಹಣ ಪಾವತಿ ವೇಳೆ ಅಕ್ರಮ ನಡೆದಿದೆ ಎಂದು ರಾಜ್ಯ ರೈತ ಸಂಘದ ವಿಭಾಗೀಯ ಸಂಘಟನಾ ಕಾರ್ಯದರ್ಶಿ ಹೊಸಕೋಟೆ ಬಸವರಾಜು ಆರೋಪಿಸಿದರು.

ಅರ್ಹರಲ್ಲದವರಿಗೆ ಪರಿಹಾರ ನೀಡಿ, ನೈಜ ರೈತರನ್ನು ವಂಚಿಸಲಾಗಿದೆ. ಹೀಗಾಗಿ ಸ್ಥಳೀಯ ತಹಸೀಲ್ದಾರರನ್ನು ಅಮಾನತುಗೊಳಿಸಿ, ತನಿಖೆ ನಡೆಸಿ ನಿಜವಾದ ರೈತರಿಗೆ ಪರಿಹಾರದ ಹಣ ದೊರಕುವಂತೆ ಮಾಡಬೇಕು ಸುದ್ದಿಗೋಷ್ಠಿಯಲ್ಲಿ ಸೋಮವಾರ ಸರ್ಕಾರವನ್ನು ಆಗ್ರಹಿಸಿದರು.

ಅನರ್ಹರಿಗೆ ಬಿಡುಗಡೆ ಮಾಡಿದ ಹಣದಲ್ಲಿ ಸುಮಾರು 18 ಕೋಟಿ ರೂ. ಭ್ರಷ್ಟಾಚಾರ ನಡೆದಿದ್ದು, ಮಧ್ಯವರ್ತಿಗಳು, ರಾಜಕೀಯ ಹಿಂಬಾಲಕರು, ಅಧಿಕಾರಿಗಳು ಪಾಲು ಪಡೆದಿದ್ದಾರೆ. ಹೀಗಾಗಿ ಇನ್ನು ಒಂದು ವಾರದೊಳಗೆ ಅಕ್ರಮ ಎಸಗಿರುವವರ ವಿರುದ್ಧ ಕ್ರಮ ಕೈಗೊಂಡು, ನಿಜವಾದ ರೈತರಿಗೆ ಎಕ್ಸ್‌ಗ್ರೇಷಿಯಾ ಹಣ ಬಿಡುಗಡೆಗೊಳಿಸದಿದ್ದಲ್ಲಿ ತೀವ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಇಮ್ಮಾವು ಗ್ರಾಮದ ಸರ್ವೇ ನಂ. 390 ರಿಂದ 430ರವರೆಗಿನ ಜಮೀನುಗಳು, ಅಡಕನಹಳ್ಳಿಹುಂಡಿ, ತಾಂಡವಪುರ ಗ್ರಾಮಗಳ ಸರ್ವೇ ನಂಬರ್ ಸೇರಿದಂತೆ ವಿವಿಧ ನಂಬರ್‌ಗಳನ್ನು ಸೇರಿ ಒಟ್ಟಾರೆ 1,123 ಎಕರೆ ಜಮೀನು ಕೆಐಎಡಿಬಿ ಸ್ವಾಧೀನ ಪಡೆದಿದೆ. ಇವುಗಳಲ್ಲಿನ ನೂರಾರು ರೈತರು ಸುಮಾರು 70-80 ವರ್ಷಗಳಿಂದಲೂ ಸ್ವಾಧೀನ ಹೊಂದಿ ಬೇಸಾಯ ಮಾಡುತ್ತ ಗೇಣಿ ಅರ್ಜಿ ಸಲ್ಲಿಸಿದ್ದರು. ಆದರೆ ಈ ರೈತರಿಗೆ ಪರಿಹಾರ ದೊರೆಯದ ಹಿನ್ನೆಲೆಯಲ್ಲಿ ರೈತ ಸಂಘ ನಡೆಸಿದ ಹೋರಾಟದ ಕಾರಣ 4 ಲಕ್ಷ ಎಕ್ಸ್‌ಗ್ರೇಷಿಯಾ ನೀಡಲು ತಿರ್ಮಾನಿಸಿ, ಜಿಲ್ಲಾಧಿಕಾರಿ ಮೂಲಕ ರೈತರಿಗೆ ತಲಾ 4 ಲಕ್ಷ ರೂ. ಪರಿಹಾರ ನೀಡುವಂತೆ ನಿರ್ಧರಿಸಲಾಗಿತ್ತು ಎಂದರು.

ಆದರೆ ಈಗ ತಹಸೀಲ್ದಾರ್ ಕಚೇರಿಯಿಂದ ನೀಡಿರುವ ಎಕ್ಸ್‌ಗ್ರೇಷಿಯಾ ಹಣದ ಸಿಂಹಪಾಲು ಮಧ್ಯವರ್ತಿಗಳ ಮೂಲಕ ಅನರ್ಹರಿಗೆ ದೊರೆತಿದೆ. ಹೀಗಾಗಿ ನಿಜವಾದ ರೈತರು ಪರಿತಪಿಸಲು ಕ್ರಮಕೈಗೊಳ್ಳಬೇಕಿದೆ. ಆದ್ದರಿಂದ ಈ ಅಕ್ರಮದಲ್ಲಿ ಭಾಗಿಯಾಗಿರುವ ಕಾರಣ ತಹಸೀಲ್ದಾರರನ್ನು ಅಮಾನತುಗೊಳಿಸಿ, ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು. ನಿಜವಾದ ರೈತರಿಗೆ ಹಣ ದೊರಕುವಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಮರಂಕಯ್ಯ, ಮುಖಂಡರಾದ ಹೆಜ್ಜಿಗೆ ಪ್ರಕಾಶ್, ಶಿರಮಳ್ಳಿ ಸಿದ್ದಪ್ಪ, ಪ್ರೇಮ್‌ರಾಜ್, ರಾಜಣ್ಣ ಇತರರು ಇದ್ದರು.