ಜಿಲ್ಲೆ

ಫುಡ್‌ಪಾರ್ಕ್ ಯೋಜನೆಯಲ್ಲಿ ಅವ್ಯವಹಾರ: ಶಾಸಕ ಶ್ರೀನಿವಾಸ್

Tumakuru

ಗುಬ್ಬಿ: ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರ ರಾಷ್ಟ್ರೀಯ ಮಟ್ಟದ ರೈತ ಕಾರ್ಯಕ್ರಮ ನಡೆಸಿ ಅವರೇ ಸಿದ್ಧಪಡಿಸಿದ ಪ್ರಶ್ನಾವಳಿಗೆ ಉತ್ತರಿಸಿಕೊಂಡು ತಮ್ಮ ಆಡಳಿತ ವೈಭವೀಕರಿಸಿಕೊಳ್ಳುತ್ತಿದೆ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ಟೀಕಿಸಿದರು.

ಪಟ್ಟಣದ ಹೇಮಾವತಿ ನೀರಿನಿಂದ ಅಮಾನಿಕೆರೆ ಭರ್ತಿಯಾದ ಹಿನ್ನೆಲೆಯಲ್ಲಿ ಕೆರೆ ಸುತ್ತಲಿನ ಗ್ರಾಮಸ್ಥರು ಗುರುವಾರ ಹಮ್ಮಿಕೊಂಡಿದ್ದ ಗಂಗಾಪೂಜೆಯಲ್ಲಿ ಬಾಗಿನ ಅರ್ಪಿಸಿ ಮಾತನಾಡಿದರು.

ರೈತರು ಹಕ್ಕು ಪ್ರತಿಪಾದಿಸಿಕೊಳ್ಳಲು ಪ್ರತಿಭಟನೆ ಮೂಲಕ ಗಮನಸೆಳೆಯಲು ಮುಂದಾದಾಗ ಅವರನ್ನು ಬಂಧಿಸಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲೆಗೆ ಎರಡು ಬಾರಿ ಆಗಮಿಸಿದ ಪ್ರಧಾನಿ ಮೋದಿ ಅವರು ಎಚ್‌ಎಎಲ್ ಘಟಕ ಮತ್ತು ಫುಡ್‌ಪಾರ್ಕ್ ಶಂಕುಸ್ಥಾಪನೆ ಮಾಡಿ ಮೂರ‌್ನಾಲ್ಕು ವರ್ಷ ಕಳೆದರೂ ಕಾಮಗಾರಿ ಮಂದಗತಿಯಲ್ಲಿ ಸಾಗಿದೆ. ಫುಡ್‌ಪಾರ್ಕ್ ಯೋಜನೆಯಲ್ಲಿ ಅವ್ಯವಹಾರ ನಡೆದರೂ ಈ ಬಗ್ಗೆ ಪ್ರಧಾನಿ ಅವರಲ್ಲಿ ತಿಳಿಸುವವರಿಲ್ಲ. ಇಡೀ ಕಾರ್ಯಕ್ರಮವು ಅಧಿಕಾರಿಗಳನ್ನು ಕಟ್ಟಿ ಹಾಕುವ ಜತೆಗೆ ವ್ಯವಸ್ಥಿತವಾಗಿ ರೂಪಿಸಿಕೊಳ್ಳಲಾಗಿದೆ. ರೈತರ ಹೆಸರಿನಲ್ಲಿ ಹಲವು ಕಾರ್ಯಕ್ರಮ ಘೋಷಿಸಿದ್ದು, ಅನುಷ್ಠಾನ ಮಾಡುವುದಿಲ್ಲ. ಈ ನಿಟ್ಟಿನಲ್ಲಿ ರೈತರ ವಿರೋಧವಿದೆ ಎಂದರು.

ಕಡಬ ಕೆರೆ ಹೊರತುಪಡಿಸಿ ಎಲ್ಲ ಕೆರೆಗಳು ತುಂಬಿದ್ದು, ಅಮಾನಿಕೆರೆಯು ಸುಮಾರು ಗ್ರಾಮಗಳ ಜೀವಾಳವಾಗಿದೆ. ಅಂತರ್ಜಲ ವೃದ್ಧಿ ಜತೆಗೆ ಕೃಷಿ ಚಟುವಟಿಕೆಗೆ ಅನುಕೂಲವಾಗಲಿದೆ. ಪ್ರಭುವನಹಳ್ಳಿ, ಅಜಮ್ಮನಕೆರೆಗೂ ನೀರು ಹರಿಸಲು ಕ್ರಮವಹಿಸಲಾಗಿದೆ. ಜನವರಿಯಲ್ಲಿ ಪೂರ್ತಿ ಹೇಮೆ ಹರಿಸಲು ಮನವಿ ಮಾಡಲಾಗಿದೆ ಎಂದರು. ಶಾಸಕ ಶ್ರೀನಿವಾಸ್ ಮತ್ತು ಪತ್ನಿ ಭಾರತಿ ದಂಪತಿ ಕೆರೆಗೆ ಬಾಗಿನ ಅರ್ಪಿಸಿದರು. ನೀರು ಹರಿಸಿಕೊಳ್ಳಲು ಶ್ರಮಿಸಿದ ಸ್ವಯಂಸೇವಕರನ್ನು ಸನ್ಮಾನಿಸಲಾಯಿತು.

ತಹಸೀಲ್ದಾರ್ ಎಂ.ಮಮತಾ, ಎಪಿಎಂಸಿ ನಿರ್ದೇಶಕ ಕಳ್ಳಿಪಾಳ್ಯ ಲೋಕೇಶ್, ಜೆಡಿಎಸ್ ತಾಲೂಕು ಅಧ್ಯಕ್ಷ ಗುರುರೇಣುಕಾರಾಧ್ಯ, ಯುವ ಜೆಡಿಎಸ್ ಅಧ್ಯಕ್ಷ ಕೆ.ಆರ್.ವೆಂಕಟೇಶ್, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕೆ.ಸಿ.ಕೃಷ್ಣಮೂರ್ತಿ, ಎಪಿಎಂಸಿ ಅಧ್ಯಕ್ಷ ಜಿ.ಟಿ.ರೇವಣ್ಣ, ಸದಸ್ಯರಾದ ಲೋಕೇಶ್ವರ್, ವೀರಭದ್ರಯ್ಯ, ಪಪಂ ಸದಸ್ಯರಾದ ಕುಮಾರ್, ಸಿ.ಮೋಹನ್, ಶೌಕತ್‌ಆಲಿ, ರೇಣುಕಾಪ್ರಸಾದ್, ಮುಖಂಡರಾದ ಮುಳ್ಕಟ್ಟಯ್ಯ, ಯು.ರಾಜಣ್ಣ, ಡಾ.ನಭೀಖಾನ್ ಇದ್ದರು.

ಅಕ್ರಮ ನಡೆಸಿದವರ ವಿರುದ್ಧ ಕ್ರಮ: ಬಗರ್‌ಹುಕುಂ ಮಂಜೂರಾತಿಯಲ್ಲಿ ಅವ್ಯವಹಾರ ನಡೆದಿರುವುದು ನನ್ನ ಗಮನಕ್ಕೆ ಬಂದಿದ್ದು, ದೊಡ್ಡ ಮಟ್ಟದ ಆಂದೋಲನದಲ್ಲಿ ಲೋಪಗಳು ನಡೆದಿರಬಹುದು. ನನ್ನ ಗಮನಕ್ಕೆ ಬಾರದೇ ಹಲವು ಮಂಜೂರಾತಿ ಕಡತ ಸಿದ್ಧಗೊಂಡಿರುವ ಸಾಧ್ಯತೆ ಇದ್ದು, ಅಕ್ರಮ ನಡೆಸಿರುವ ಅಧಿಕಾರಿಗಳು ಅಥವಾ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದೇನೆ. ಅಕ್ರಮ ನಡೆದಿದೆ ಎನ್ನುವ ಸ್ಥಳಕ್ಕೆ ಭೇಟಿ ನೀಡಿ ಮಂಜೂರಾತಿ ಕ್ರಮದ ತನಿಖೆ ನಡೆಸಲು ತಾಲೂಕು ಆಡಳಿತಕ್ಕೆ ಸೂಚಿಸಲಾಗಿದೆ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ಹೇಳಿದರು.