ಜಿಲ್ಲೆ

ಅನಿಯಮಿತ ಲೋಡ್ ಶೆಡ್ಡಿಂಗ್, ಬೆಳೆ ಉಳಿಸಿಕೊಳ್ಳಲು ಹೆಣಗಾಟ

ರವಿ ಎಸ್. ಬಳೂಟಗಿ

ಶಿರಹಟ್ಟಿ: ಹೆಸ್ಕಾಂ ಮನಸೋ ಇಚ್ಛೆ ವಿದ್ಯುತ್ ಪೂರೈಕೆ ಮಾಡುತ್ತಿರುವ ಪರಿಣಾಮ ನೀರಾವರಿ ಆಶ್ರಿತ ಬೆಳೆ ರಕ್ಷಣೆಗೆ ರೈತರು ಪರದಾಡುತ್ತಿದ್ದಾರೆ. ಹೆಸ್ಕಾಂ ಕಣ್ಣಾಮುಚ್ಚಾಲೆ ಆಟಕ್ಕೆ ಹಿಡಿಶಾಪ ಹಾಕುವಂತಾಗಿದೆ.

ತಾಲೂಕಿನ ಕಡಕೋಳ, ಜಲ್ಲಿಗೇರಿ, ಕುಸ್ಲಾಪೂರ, ಮಾಗಡಿ, ರಣತೂರ, ಮಾಚೇನಹಳ್ಳಿ ಇನ್ನಿತರ ಗ್ರಾಮಗಳು ಸೇರಿದಂತೆ ಅಂದಾಜು 300 ಹೆಕ್ಟೇರ್ ಜಮೀನಿನಲ್ಲಿ ಗೋವಿನಜೋಳ, ಶೇಂಗಾ, ಕಬ್ಬು, ಈರುಳ್ಳಿ, ವಿವಿಧ ಹೂವು ಸೇರಿದಂತೆ ಇತರ ತೋಟಗಾರಿಕೆ ಬೆಳೆ ಬೆಳೆಯಲಾಗಿದೆ. ಈ ಬೆಳೆಗೆ ನಿಯಮಿತವಾಗಿ ನೀರುಣಿಸಿದರೆ ಮಾತ್ರ ಉತ್ತಮ ಫಸಲು ಕೈಸೇರುತ್ತದೆ.

ಮುಂಗಾರು ಹಂಗಾಮಿನಲ್ಲಿ ಸಕಾಲಕ್ಕೆ ಮಳೆಯಾಗದೆ ಹೆಸರು ಬೆಳೆ ಬಿತ್ತನೆ ಆಗಿಲ್ಲ. ರೈತರು ಪರ್ಯಾಯ ಬೆಳೆಯತ್ತ ಮುಖ ಮಾಡಿದ್ದಾರೆ. ಇದರ ಮಧ್ಯೆ ಹೆಸ್ಕಾಂ ಕೃಷಿ ಪಂಪ್‌ಸೆಟ್‌ಗಳಿಗೆ ನಿಯಮಿತವಾಗಿ ತ್ರೀ ಫೇಸ್ ವಿದ್ಯುತ್ ಪೂರೈಕೆಯಲ್ಲಿ ಕಣ್ಣಾಮುಚ್ಚಾಲೆ ಆಟ ಆಡುತ್ತಿದೆ. ಇದರಿಂದ ರೈತರಿಗೆ ದಿಕ್ಕು ತೋಚದಂತಾಗಿದೆ. ನಿಯಮಾನುಸಾರ ಬೆಳಗ್ಗೆ 9 ರಿಂದ ಮಧ್ಯಾಹ್ನ 1ರವರೆಗೆ ಇಲ್ಲವೇ ಸಂಜೆ 6ರಿಂದ ರಾತ್ರಿ 10ರವರೆಗೆ ತ್ರೀ ಫೇಸ್ ವಿದ್ಯುತ್ ಪೂರೈಸಬೇಕು. ಆದರೆ, ಕಳೆದೊಂದು ವಾರದಿಂದ ಏಕಾಏಕಿ ರಾತ್ರಿ 10 ರಿಂದ 1 ರವರೆಗೆ ವಿದ್ಯುತ್ ಪೂರೈಸಲಾಗುತ್ತಿದೆ. ಇಷ್ಟರೊಳಗೆ ಅನಿಯಮಿತವಾಗಿ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ರಾತ್ರಿ ನೀರು ಹರಿಸುವುದು ಕಷ್ಟದ ಕೆಲಸ. ಆದರೂ, ಬೆಳೆಗೆ ನೀರು ಹರಿಸಲು ರೈತರು ಹೊಲಕ್ಕೆ ಹೋಗಿ ಪಂಪ್‌ಸೆಟ್ ಚಾಲು ಮಾಡಿ ಮನೆಗೆ ಬರುವುದರೊಳಗೆ ವಿದ್ಯುತ್ ಕಡಿತವಾಗುತ್ತದೆ. ಹೀಗಾಗಿ ಬೆಳೆ ಉಳಿಸಿಕೊಳ್ಳಲು ರೈತರು ಹೆಣಗಾಡುತ್ತಿದ್ದಾರೆ.

ಮಳೆ ಕೊರತೆ, ಹವಾಮಾನ ವೈಪರೀತ್ಯ, ಬೆಳೆ ನಷ್ಟ ಇತರ ಕಾರಣಗಳಿಂದ ಸಂಕಷ್ಟದಲ್ಲಿದ್ದೇವೆ. ಅತ್ತ ಮಳೆಯೂ ಇಲ್ಲದೆ ಬೆಳೆ ಬಾರದಾಗಿದೆ. ಇತ್ತ ಕೊಳವೆಬಾವಿ ಬಳಸಿ ಬೆಳೆ ಉಳಿಸಿಕೊಳ್ಳಲು ಮುಂದಾದರೆ, ವಿದ್ಯುತ್ ಕಡಿತ ಮಾಡುತ್ತಿದೆ. ಹೆಸ್ಕಾಂ ಕಣ್ಣಾಮುಚ್ಚಾಲೆ ಆಟಕ್ಕೆ ಹೈರಾಣಾಗಿದ್ದು, ನಮ್ಮ ಗೋಳು ಕೇಳುವವರಾರು ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಅಲ್ಲಲ್ಲಿ ಟವರ್ ಕೆಲಸ ನಡೆದಿರುವುದು ಹಾಗೂ ತಾಂತ್ರಿಕ ಸಮಸ್ಯೆಯಿಂದಾಗಿ ಅನಿಯಮಿತ ವಿದ್ಯುತ್ ಪೂರೈಕೆ ಮಾಡಲಾಗಿದೆ. ಮಧ್ಯಂತರದಲ್ಲಿ ಕಾರಣಾಂತರದಿಂದ 10-15 ನಿಮಿಷ ಮಾತ್ರ ವಿದ್ಯುತ್ ಕಡಿತ ಮಾಡಲಾಗುತ್ತದೆ. ಎಲ್ಲ ವ್ಯವಸ್ಥೆ ಸರಿಯಾದಂತೆ ಮೊದಲಿನಂತೆ ವಿದ್ಯುತ್ ಪೂರೈಸಲಾಗುತ್ತದೆ.-ವಿ.ಐ. ಬಡಿಗೇರ, ಪ್ರಭಾರಿ ಹೆಸ್ಕಾಂ ಶಾಖಾಧಿಕಾರಿ ಶಿರಹಟ್ಟಿ