ಶಿವಮೊಗ್ಗ ಹೊಳೆ ಬಸ್ ನಿಲ್ದಾಣದ ಸಮೀಪ ತುಂಗಾನದಿ ಇಕ್ಕೆಲದಲ್ಲಿ ಕಬ್ಬಿಣದ ಜಾಲರಿ ಅಳವಡಿಸುತ್ತಿರುವುದು. 
ಜಿಲ್ಲೆ

ತುಂಗಾ ಸೇತುವೆಗೆ ಕಬ್ಬಿಣದ ಜಾಲರಿ

ನವೀನ ಬಿ.ಎಂ

ಶಿವಮೊಗ್ಗ: ತುಂಗಾ ನದಿಗೆ ಸಾರ್ವಜನಿಕರು ತ್ಯಾಜ್ಯ ಎಸೆಯುತ್ತಿರುವುದರಿಂದ ಜಲಚರಗಳ ಜೀವಹಾನಿ ಆಗುತ್ತಿದೆ. ಇದನ್ನು ಮನಗಂಡ ಶಿವಮೊಗ್ಗ ನಗರ ಪಾಲಿಕೆ ಸೇತುವೆಗಳ ಇಕ್ಕೆಲಗಳಲ್ಲಿ ಕಬ್ಬಿಣದ ಜಾಲರಿ ಅಳವಡಿಸುವ ಮೂಲಕ ಕಸ ಎಸೆಯುವುದಕ್ಕೆ ಕಡಿವಾಣ ಹಾಕಲು ಮುಂದಾಗಿದೆ.

ತುಂಗಾ ನದಿಗೆ ತ್ಯಾಜ್ಯ ಹಾಕುವುದನ್ನು ತಪ್ಪಿಸಲು ಹೊಳೆ ಬಸ್‌ಸ್ಟಾಪ್ ಬಳಿ ಇರುವ ಸೇತುವೆ ಮೇಲೆ ಜಾಲರಿ ಅಳವಡಿಸುವ ಕಾರ್ಯ ಭರದಿಂದ ಸಾಗಿದೆ. ಪ್ರತಿದಿನ ಅಥವಾ ಎರಡು ದಿನಕ್ಕೊಮ್ಮೆ ಮನೆ ಬಳಿ ಕಸದ ವಾಹನ ಬಂದರೂ ತ್ಯಾಜ್ಯ ಹಾಕದ ಸಾರ್ವಜನಿಕರು, ಕಚೇರಿಗಳಿಗೆ ತೆರಳುವಾಗ ಅಥವಾ ರಾತ್ರಿ ವೇಳೆ ಪ್ಲಾಸ್ಟಿಕ್ ಕವರ್‌ಗಳಲ್ಲಿ ಕಸ ತಂದು ನದಿಗೆ ಎಸೆಯುತ್ತಿದ್ದರು. ಮನೆ ಮತ್ತು ಅಂಗಡಿಗಳಲ್ಲಿ ಉಳಿದ ಮಾಂಸದ ತ್ಯಾಜ್ಯವನ್ನೂ ಬಿಸಾಡಲಾಗುತ್ತಿತ್ತು. ಇದನ್ನು ಸ್ವಲ್ಪವಾದರೂ ತಡೆಯಬೇಕೆಂಬ ಉದ್ದೇಶದಿಂದ ಸೇತುವೆ ಮೇಲೆ ಜಾಲರಿ ಹಾಕಲಾಗುತ್ತಿದೆ.
ಸ್ಥಳೀಯ ಸಂಘ ಸಂಸ್ಥೆಗಳು, ನಿರ್ಮಲ ತುಂಗಾ ಅಭಿಯಾನ, ಪರಿಸರ ಪ್ರೇಮಿಗಳು ಜಾಲರಿ ಹಾಕುವಂತೆ ಸಲಹೆ ನೀಡುತ್ತಲೇ ಬಂದಿದ್ದರು. ಈಗ ಇದಕ್ಕೆ ಮನ್ನಣೆ ನೀಡಿರುವ ಪಾಲಿಕೆ ಜಾಲರಿ ಅಳವಡಿಸುತ್ತಿದ್ದು ಸಾರ್ವಜನಿಕರು, ಪರಿಸರಾಸಕ್ತರು ಹರ್ಷ ವ್ಯಕ್ತಪಡಿಸಿದ್ದಾರೆ.