ಜಿಲ್ಲೆ

ಕಬ್ಬಿಣ ದರ ಹೆಚ್ಚಳ ವಿರೋಧಿಸಿ ಪ್ರತಿಭಟನೆ

ಶಿವಮೊಗ್ಗ: ಕಬ್ಬಿಣದ ಉತ್ಪಾದಕ ಕಾರ್ಖಾನೆಗಳು ಮತ್ತು ಸಗಟು ಕಬ್ಬಿಣದ ವ್ಯಾಪಾರಿಗಳು ಏಕಾಏಕಿ ಪ್ರತಿ ಟನ್ ಕಬ್ಬಿಣ ದರವನ್ನು 15 ಸಾವಿರದಿಂದ 22 ಸಾವಿರ ರೂ.ಗೆ ಹೆಚ್ಚಿಸಿರುವುದನ್ನು ವಿರೋಧಿಸಿ ಕರ್ನಾಟಕ ವೆಲ್ಡಿಂಗ್ ಅಸೋಸಿಯೇಷನ್ ನೇತೃತ್ವದಲ್ಲಿ ವೆಲ್ಡಿಂಗ್ ಶಾಪ್ ಮಾಲೀಕರು ಹಾಗೂ ಕಾರ್ವಿುಕರು ಸೋಮವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಕರೊನಾದಿಂದ ವೆಲ್ಡಿಂಗ್ ಉದ್ಯಮಕ್ಕೆ ತೀವ್ರ ಸಂಕಷ್ಟ ಎದುರಾಗಿತ್ತು. ಈಗ ಸ್ವಲ್ಪ ಚೇತರಿಕೆ ಕಾಣುತ್ತಿರುವ ಸಂದರ್ಭದಲ್ಲೇ ಕಬ್ಬಿಣದ ದರ ಹೆಚ್ಚಳ ಮಾಡಿರುವುದರಿಂದ ಮತ್ತೆ ಸಮಸ್ಯೆ ಸೃಷ್ಟಿಯಾಗಿದೆ. ಮುಂಗಡವಾಗಿ ಹಣ ಪಡೆದು ಈಗ ಸಕಾಲದಲ್ಲಿ ಕಬ್ಬಿಣದ ಉತ್ಪನ್ನಗಳನ್ನು ಒದಗಿಸಲು ನಷ್ಟ ಉಂಟಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಸಚಿವರು ಮಧ್ಯ ಪ್ರವೇಶ ಮಾಡಿ ದರ ಹೆಚ್ಚಳ ಕಡಿತಗೊಳಿಸಿ ಸರ್ಕಾರ ನಿಗದಿ ಮಾಡಿದ ದರಪಟ್ಟಿಯಂತೆ ಕಬ್ಬಿಣ ಸಿಗಲು ಕ್ರಮ ವಹಿಸಬೇಕೆಂದು ಆಗ್ರಹಿಸಿದರು.

ವೆಲ್ಡಿಂಗ್ ಉದ್ದಿಮೆದಾರರಾದ ರವಿಕುಮಾರ್, ಮನೋಹರ್, ವೆಂಕಟೇಶ್, ಮಹಮ್ಮದ್ ರಫಿಕ್, ವಿನಯ್ಕುಮಾರ್, ಅಬ್ದುಲ್ ಸಲಾಂ, ಜಿಯಾವುಲ್ಲಾ, ಫೈರೋಜ್ ಇತರರಿದ್ದರು.