ಜಿಲ್ಲೆ

100 ಎಕರೆಯಲ್ಲಿ ಐಆರ್​ಬಿ ಆರಂಭ

ಬಂಗಾರಪೇಟೆ/ಕೆಜಿಎಫ್: ಸಶಸ್ತ್ರ ಮೀಸಲು ಪಡೆಯಲ್ಲಿ ಹೊಸ ಬೆಟಾಲಿಯನ್​ ಆರಂಭಕ್ಕೆ ರಾಜ್ಯ ಸರ್ಕಾರ ಆದೇಶಿಸಿದ ಹಿನ್ನೆಲೆಯಲ್ಲಿ ತಾಲೂಕಿನ ದೊಡ್ಡವಲಗಮಾದಿ ಗ್ರಾಮದ ಗಡಿ ಸಮೀಪ ಬಂಗಾರು ಗಣಿಯ ಸರ್ವೇ ನಂ.2ರ ಪೈಕಿ 100 ಎಕರೆ ಪ್ರದೇಶದಲ್ಲಿ ಇಂಡಿಯನ್​ ರಿಸರ್ವ್​ ಬೆಟಾಲಿಯನ್​ (ಐಆರ್​ಬಿ) ಆರಂಭಿಸಲಾಗುವುದು ಎಂದು ಕೆಎಸ್​ಆರ್​ಪಿ ಎಡಿಜಿಪಿ ಉಮೇಶ್​ ಕುಮಾರ್​ ತಿಳಿಸಿದರು.

ಮಂಗಳವಾರ ಸ್ಥಳ ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರ 2,400 ಪೊಲೀಸರ ಬಲವುಳ್ಳ ಎರಡು ಬೆಟಾಲಿಯನ್​ಗಳ ಆರಂಭಕ್ಕೆ ಆದೇಶಿಸಿದ್ದು, ಕೆಜಿಎಫ್​ನಲ್ಲಿ ಮೀಸಲುಗೊಳಿಸಿರುವ 100 ಎಕರೆಯಲ್ಲಿ ನೂತನವಾಗಿ ರಚನೆಯಾಗಲಿರುವ ಐಆರ್​ಬಿ ಬೆಟಾಲಿಯನ್​ಗೆ ಜಾಗ ಮೀಸಲಿಡಲಾಗಿದೆ. ಒಂದು ಬೆಟಾಲಿಯನ್​ನಲ್ಲಿ ಒಬ್ಬರು ಕಮಾಂಡೆಂಟ್​ ಸೇರಿ 1,200 ಪೊಲೀಸರಂತೆ ಒಟ್ಟು 2,400 ಪೊಲೀಸರ ನೇಮಕಾತಿಗೆ ಸರ್ಕಾರ ಒಪ್ಪಿಗೆ ಸೂಚಿಸಿದೆ ಎಂದರು.

ಬಂದ್​, ಪ್ರತಿಭಟನೆ ಹಾಗೂ ಗಣ್ಯರ ಕಾರ್ಯಕ್ರಮಗಳಲ್ಲಿ ಬಂದೋಬಸ್ತ್​ ಕಾರ್ಯಗಳಲ್ಲಿ ಐಆರ್​ಬಿ ಪ್ರಮುಖ ಪಾತ್ರ ವಹಿಸಲಿದ್ದು, ಈ ಪಡೆ ಬಲವರ್ಧನೆಗೆ ಪೊಲೀಸ್​ ಇಲಾಖೆ ಮುಂದಾಗಿದೆ ಎಂದರು.

ಪ್ರಸ್ತುತ 12 ಕೆಎಸ್​ಆರ್​ಪಿ ಹಾಗೂ 2 ಐಆರ್​ಬಿ ಬೆಟಾಲಿಯನ್​ಗಳಿವೆ. ಆದರೆ ರಾಜ್ಯದಲ್ಲಿ ಭದ್ರತೆ ಹಾಗೂ ಪ್ರಾಕೃತಿಕ ವಿಪತ್ತು ಸೇರಿ ತುರ್ತು ಸಂದರ್ಭಗಳನ್ನು ನಿಭಾಯಿಸಲು ಮತ್ತಷ್ಟು ಬೆಟಾಲಿಯನ್​ಗಳ ಅಗತ್ಯ ಇತ್ತು. ಹೊಸ ಬೆಟಾಲಿಯನ್​ಗಳ ಆರಂಭಿಸುವಂತೆ ಕೋರಿ ಸಲ್ಲಿಸಿದ್ದ ಪ್ರಸ್ತಾವನೆಗೆ ಸರ್ಕಾರ ಸಮ್ಮತಿಸಿದೆ ಎಂದರು.

ಐಜಿಪಿ ಸಂದೀಪ್​ ಪಾಟೀಲ್​, ಡಿಐಜಿ ಡಿಪ್ಪಾನ್​ ಮತ್ತು ಬಸವರಾಜ್​ ಜೊಲ್ಲೆ, ಕೆಜಿಎಫ್​ ಎಸ್ಪಿ ಶಾಂತರಾಜು, ಕಮ್ಯಾಂಡೆಂಟ್​ ರಾಮಕೃಷ್ಣ ಕೃಷ್ಣಪ್ಯ, ಆರ್​.ಐ ಚಂದ್ರಮೌಳಿ ಇದ್ದರು.

ಎಲ್ಲೆಲ್ಲಿ ಸೇವೆ?

ಕಾನೂನು ಮತ್ತು ಸುವ್ಯಸ್ಥೆಯ ನಿರ್ವಹಣೆಯಲ್ಲಿ ಜಿಲ್ಲಾ ಪೊಲೀಸರಿಗೆ ಸಹಾಯ ಮಾಡಲು ರಾಜ್ಯ ಮತ್ತು ಇತರ ರಾಜ್ಯಗಳಲ್ಲಿ ಚುನಾವಣೆ, ಕಾನೂನು ಮತ್ತು ಸುವ್ಯವಸ್ಥೆ ಕರ್ತವ್ಯಗಳನ್ನು ನಿರ್ವಹಿಸಲು ವಿಪತ್ತು ನಿರ್ವಹಣೆ ನೈಸರ್ಗಿಕ ವಿಪತ್ತುಗಳು ಮತ್ತು ಮಾನವ ನಿರ್ಮಿತ ವ್ಯಾಪಾರ ಮೇಳಗಳ ಆಚರಣೆ ರಾಜ್ಯಗಳಂತಹ ಕರ್ತವ್ಯಗಳಿಗೆ ಬಲ ಒದಗಿಸಲು ಕಾಲಕಾಲಕ್ಕೆ ಸರ್ಕಾರದಿಂದ ನಿಯೋಜಸಲಾದ ಇತರ ಕರ್ತವ್ಯಗಳನ್ನು ನಿರ್ವಹಿಸಲು ಭಾರತೀದು ಮೀಸಲು ಪಡೆಯನ್ನು ಬಳಸಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.

ಕೈಗಾರಿಕಾ ಹಬ್​ಗೆ ಅನುಕೂಲ

ಮುಂದಿನ ದಿನಗಳಲ್ಲಿ ಕೆಜಿಎಫ್​ನಲ್ಲಿ ದೇಶ, ವಿದೇಶಗಳ ಕಂಪನಿಗಳು ಬಂಡವಾಳ ಹೂಡುವ ಮೂಲಕ ಕೈಗಾರಿಕಾ ಹಬ್​ ಆಗಿ ಪರಿವರ್ತನೆಯಾಗಲಿದೆ. ಈ ಹಿನ್ನೆಲೆಯಲ್ಲಿ ಸುರಕ್ಷತಾ ದೃಷ್ಟಿಯಿಂದಲೂ ಹೊಸ ಐಆರ್​ಎಫ್​ ತುಕಡಿಳನ್ನು ಆರಂಭಿಸಲು ರಾಜ್ಯ ಹಣಕಾಸು ಇಲಾಖೆ ಅನುಮೋದನೆ ನೀಡಲಾಗಿದೆ. ಈ ಈ ಮಧ್ಯೆ ಕಮಾಂಡೆಂಟ್​ ಮಟ್ಟದ ಅಧಿಕಾರಿಗಳನ್ನು ನೇಮಕ ಮಾಡಿ ಅದೇಶ ಹೊರಡಿಸಲಾಗಿದೆ ಎಂದು ಎಡಿಜಿಪಿ ಉಮೇಶ್​ ಕುಮಾರ್​ ತಿಳಿಸಿದರು.

ಕಾರ್ಯಕಾರಿ ಅಧಿಕಾರಿ/ಸಿಬ್ಬಂದಿ ಹುದ್ದೆಗಳ ವಿವರ

ಕಮಾಂಡೆಂಟ್​-1, ಡೆಪ್ಯೂಟಿ ಕಮಾಂಡೆಂಟ್​- 3, ಸಹಾಯಕ ಕಮಾಂಡೆಂಟ್​- 7, ಸ್ಪೇಷಲ್​ ಆರ್​ಪಿಐ- 07, ಸ್ಪೆಷಲ್​ ಎಆರ್​.ಎಸ್​ಐ- 23, ಸ್ಪೇಷಲ್​ ಆರ್​ ಎಚ್​ಸಿ- 160, ಸ್ಪೇಷಲ್​ ಆರ್​ಪಿಸಿ -675, ಅನುಯಾಯಿ- 69 ಸೇರಿ ಒಟ್ಟು -963 ಹುದ್ದೆಗಳು.

ಲಿಪಿಕ ಸಿಬ್ಬಂದಿ: ಮುಖ್ಯ ಗುಮಾಸ್ತ-1, ಗುಮಾಸ್ತ (ದ್ವಿ.ದ.ಸ)-5, ಶೀಘ್ರ ಲಿಪಿಕಾರರು-1 ಸೇರಿ ಒಟ್ಟು-7 ಹುದ್ದೆಗಳು.

ನಿಸ್ತಂತು ಅಧಿಕಾರಿ/ಸಿಬ್ಬಂದಿ

ಸ್ಪೇಷಲ್​ ಗುಮಾಸ್ತ- 1, ಗುಮಾಸ್ತ (ದ್ವದ.ಸ)- 2, ಸ್ಪೇಷಲ್​ ಆರ್​ಎಚ್​ಸಿ- 4, ಸ್ಪೇಷಲ್​ ಆರ್​ಪಿಸಿ- 26 ಸೇರಿ ಒಟ್ಟು 33 ಹುದ್ದೆಗಳು.