24ವೈಎಲ್‌ಡಿ ಚಿತ್ರ02 ಯಳಂದೂರು ಸಮೀಪದ ಇರಸವಾಡಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಜಿ.ವಿ. ವಸಂತಕುಮಾರ್ ಅವರನ್ನು ಸದಸ್ಯರು, ಮುಖಂಡರು ಅಭಿನಂದಿಸಿದರು. 
ಜಿಲ್ಲೆ

ಇರಸವಾಡಿ ಗ್ರಾಪಂಗೆ ಜಿ.ವಿ.ವಸಂತಕುಮಾರ್ ಅಧ್ಯಕ್ಷ

ಯಳಂದೂರು: ಚಾಮರಾಜನಗರ ತಾಲೂಕಿನ ಇರಸವಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಸದಸ್ಯ ಜಿ.ವಿ. ವಸಂತಕುಮಾರ್ ಆಯ್ಕೆಯಾದರು.

ಅವಿಶ್ವಾಸ ನಿರ್ಣಯ ಮಂಡಿಸುವುದರ ಮೂಲಕ ಅಧ್ಯಕ್ಷೆ ಚಿನ್ನಮ್ಮ ಅವರನ್ನು ಪದಚ್ಯುತಿಗೊಳಿಸಲಾಗಿತ್ತು. ತೆರವಾದ ಸ್ಥಾನಕ್ಕೆ ಸೋಮವಾರ ಚುನಾವಣೆ ನಿಗದಿಯಾಗಿತ್ತು. ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿತ್ತು.

ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಬಯಸಿ ಜಿ.ವಿ. ವಸಂತಕುಮಾರ್ ಹಾಗೂ ಚಿನ್ನಮ್ಮ ನಾಮಪತ್ರ ಸಲ್ಲಿಸಿದ್ದರು. ಒಟ್ಟು 15 ಸದಸ್ಯರಿರುವ ಪಂಚಾಯಿತಿಯಲ್ಲಿ ವಸಂತ್‌ಕುಮಾರ್ ಅವರು 10 ಮತಗಳನ್ನು ಪಡೆಯುವ ಮೂಲಕ ಜಯಶೀಲರಾದರು ಎಂದು ಚುನಾವಣಾಧಿಕಾರಿ ರವಿ ಅಧಿಕೃತವಾಗಿ ಘೋಷಣೆ ಮಾಡಿದರು. ಪ್ರತಿಸ್ಪರ್ಧಿ ಚಿನ್ನಮ್ಮ 5 ಮತಗಳನ್ನು ಪಡೆದು ಪರಾಭವಗೊಂಡರು.

ನೂತನ ಅಧ್ಯಕ್ಷ ಜಿ.ವಿ.ವಸಂತಕುಮಾರ್ ಮಾತನಾಡಿ, ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಗ್ರಾಮಗಳಲ್ಲಿ ರಸ್ತೆ, ಚರಂಡಿ, ಕುಡಿಯುವ ನೀರು, ವಿದ್ಯುತ್ ದೀಪ ಸೇರಿದಂತೆ ಇತರ ಸಮಸ್ಯೆಗಳ ನಿವಾರಣೆಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.

ಪಂಚಾಯಿತಿಗೆ ಬರುವ ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳಲಾಗುವುದು. ನರೇಗಾ ಯೋಜನೆಯ ಸದುಪಯೋಗವನ್ನು ಪಡೆದುಕೊಂಡು ಪಂಚಾಯಿತಿಯನ್ನು ಮಾದರಿ ಮಾಡುವ ನಿಟ್ಟಿನಲ್ಲಿ ಸೂಕ್ತ ಕ್ರಮ ವಹಿಸಲಾಗುವುದು. ಪಂಚಾಯಿತಿಗೆ ಬರುವ ಆದಾಯದ ಮೂಲಗಳನ್ನು ಸದ್ಬಳಕೆ ಮಾಡಿಕೊಂಡು ಮಾದರಿ ಪಂಚಾಯಿತಿಯಾಗಿ ರೂಪಿಸಲು ಪ್ರಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದರು.

ನಂತರ ಯಳಂದೂರು ಪಟ್ಟಣದಲ್ಲಿ ಶಾಸಕ ಎ.ಆರ್. ಕೃಷ್ಣಮೂರ್ತಿ ಅವರು ನೂತನ ಅಧ್ಯಕ್ಷರನ್ನು ಅಭಿನಂದಿಸಿದರು. ಗ್ರಾಪಂ ಉಪಾಧ್ಯಕ್ಷೆ ಮಾದಲಾಂಬಿಕಾ, ಸದಸ್ಯರಾದ ರಂಗಸ್ವಾಮಿ, ಕಾಳೇಗೌಡ, ಎನ್.ಸುರೇಶ್, ಕಮಲಾಕ್ಷಿ ಮಹದೇವ, ರಾಜೇಶ್ವರಿ ರಾಮಚಂದ್ರ, ರಮ್ಯಾ ಪ್ರದೀಪ್, ಚಿಕ್ಕತಾಯಮ್ಮ ರಂಗರಾಜು, ಚಂದ್ರಮ್ಮ, ಮುಖಂಡರಾದ ಡಿ. ನಾಗರಾಜು, ಅಶೋಕ್ ಮಹದೇವ, ಚೆನ್ನಕೇಶವ, ರವಿ, ಜಾನಿ, ಶಿವು, ಎಸ್. ಆರ್. ಮಂಜುನಾಥ್, ವೈ.ಕೆ.ಮೋಳೆ ನಂಜುಂಡಸ್ವಾಮಿ, ಕನ್ನಡ ಜನಪರ ವೇದಿಕೆ ಜಿಲ್ಲಾಧ್ಯಕ್ಷ ಮಲ್ಲು, ಗಂಗವಾಡಿ ನಾರಾಯಣಸ್ವಾಮಿ ಇತರರು ಇದ್ದರು.