ವಿಜಯವಾಣಿ ಸುದ್ದಿಜಾಲ ಬೆಳಗಾವಿ
ಐಪಿಎಲ್ ಪಂದ್ಯಾವಳಿಯಲ್ಲಿ ರಾಜಸ್ತಾನ ರಾಯಲ್ಸ್ ಕ್ರಿಕೆಟ್ ತಂಡದ ಪರವಾಗಿ ಆಡಲು ಅವಕಾಶ ಕಲ್ಪಿಸುವುದಾಗಿ ನಂಬಿಸಿ ಯುವ ಕ್ರಿಕೆಟಿಗನಿಂದ 24 ಲಕ್ಷ ರೂ. ಪಡೆದು ವಂಚನೆ ಮಾಡಿದ ಘಟನೆ ಈಚಗೆ ನಡೆದಿದ್ದು, ಅದು ಇದೀಗ ಬೆಳಕಿಗೆ ಬಂದಿದೆ.
ಚಿಕ್ಕೋಡಿ ತಾಲೂಕಿನ ಚಿಂಚಲಿ ಗ್ರಾಮದ ರಾಕೇಶ ಯಡೂರೆ ವಂಚನೆಗೊಳಗಾದ ಕ್ರಿಕೆಟಿಗ. ರಾಕೇಶ ಕುಟುಂಬಸ್ಥರು 2024 ನವೆಂಬರ್‌ನಿಂದ 2025 ಏಪ್ರಿಲ್ 2025ರವರೆಗೆ ಹಂತ ಹಂತವಾಗಿ ಬ್ಯಾಂಕ್ ಅಕೌಂಟ್, ಗೂಗಲ್ ಪೇ, ಫೋನ್ ಪೇ ಮೂಲಕ ಒಟ್ಟು 24 ಲಕ್ಷ ರೂ. ಹಣ ವರ್ಗಾವಣೆ ಮಾಡಿದ್ದಾರೆ. ಆದರೆ, ಇಲ್ಲಿಯವರೆಗೆ ಐಪಿಎಲ್‌ನಲ್ಲಿ ಆಡಲು ಅವಕಾಶ ನೀಡಿಲ್ಲ ಎಂದು ಕುಟುಂಬಸ್ಥರು ಬೆಳಗಾವಿ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಪ್ರಕರಣ ವಿವರ: ಐಪಿಎಲ್‌ಗೆ ಆಯ್ಕೆ ಮಾಡುವ ಉದ್ದೇಶದಿಂದ 2024 ಮೇನಲ್ಲಿ ಹೈದ್ರಾಬಾದ್‌ನಲ್ಲಿ ನಡೆದಿದ್ದ ಆರ್‌ಬಿಸಿಎಲ್ (ರೈಸಿಂಗ್ ಭಾರತ ಕ್ರಿಕೆಟ್ ಲೀಗ್) ಟೂರ್ನಿ ಆಯ್ಕೆ ಟ್ರಯಲ್‌ನಲ್ಲಿ ಬೆಳಗಾವಿಯ ರಾಕೇಶ ಯಡೂರೆ ಭಾಗಿಯಾಗಿದ್ದನು. ಅಲ್ಲದೇ, ಆಲ್‌ರೌಂಡರ್ ಆಟದ ಮೂಲಕ ಆಯೋಜಕರ ಗಮನ ಸೆಳೆದಿದ್ದರೂ ಆಯ್ಕೆಗೊಂಡಿರಲಿಲ್ಲ. ಇದನ್ನು ಗಮನಿಸಿದ್ದ ವಂಚಕರು ಅನಾಮಧೇಯ ಇನ್ಸ್ಟಾ ಖಾತೆ ಮೂಲಕ ನಿಮ್ಮ ಕ್ರಿಕೆಟ್ ಪ್ರದರ್ಶನ ಚೆನ್ನಾಗಿದೆ. ರಾಜಸ್ತಾನ ರಾಯಲ್ಸ್‌ಗೆ ಸೆಲೆಕ್ಟ್ ಮಾಡಿಸ್ತಿವಿ ಎಂದು ನಂಬಿಸಿದ್ದರು. ಇದಕ್ಕಾಗಿ ರಾಕೇಶನಿಂದ 10, 30, 50 ಸಾವಿರ ರೂ. ರಂತೆ ಹಂತ ಹಂತವಾಗಿ ಸೈಬರ್ ವಂಚನೆ ಮಾದರಿಯಲ್ಲೇ ಹಣ ವಸೂಲಿ ಮಾಡಿದ್ದರು. ಮಗನ ಭವಿಷ್ಯ ಉಜ್ವಲ ಆಗುತ್ತೆಂದು ಸಾಲ ಮಾಡಿ ಹಣ ನೀಡಿದ್ದೇವೆ. 2ರಿಂದ 3 ಮೂಬೈಲ್ ಬಳಕೆ ಮಾಡಿ ಮೋಸ ಮಾಡಿದ್ದಾರೆ ಎಂದು ರಾಕೇಶ ತಂದೆ ಹಾಗೂ ಕೆಎಸ್‌ಆರ್‌ಟಿಸಿ ಭದ್ರತಾ ಸಿಬ್ಬಂದಿಯಾಗಿರುವ ಭೀಮಪ್ಪ ಯಡೂರೆ ದೂರಿನಲ್ಲಿ ಉಲ್ಲೇಖಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಡವರು ಇದ್ದರೂ ಮಗನಿ ಉತ್ತಮ ಭವಿಷ್ಯಕ್ಕಾಗಿ ಸಾಲ ಮಾಡಿ ಹಣ ನೀಡಿ ಮೋಸ ಹೋಗಿದ್ದಾರೆ. ಇದೀಗ ಕ್ರಿಕೆಟಿಗ ರಾಕೇಶ ಕುಟುಂಬಸ್ಥರು ದೂರು ಕೊಟ್ಟಿದ್ದಾರೆ. ಈ ಕುರಿತು ತನಿಖೆ ಕೈಗೊಂಡಿದ್ದೇವೆ. ಇಂತಹ ವಂಚಕರಿಂದ ಸಾರ್ವಜನಿಕರು ಜಾಗೃತರಾಗಿರಬೇಕು. ಅಲ್ಲದೆ, ಆನ್‌ಲೈನ್ ಮೂಲಕ ಈ ರೀತಿ ಯಾರಾದರೂ ಆಫರ್ ನೀಡಿದರ ಪೊಲೀಸರಿಗೆ ಮಾಹಿತಿ ನೀಡಬೇಕು. - ಡಾ.ಭೀಮಾಶಂಕರ ಗುಳೇದ, ಎಸ್ಪಿ, ಬೆಳಗಾವಿ ಐಪಿಎಲ್ ರಾಜಸ್ತಾನ ರಾಯಲ್ ತಂಡದ ಪರ ಆಡಲು ಅವಕಾಶ ನೀಡುತ್ತೇವೆ ಎಂದು ಹೇಳಿ 2000 ರೂ. ಹಣ ಕೊಟ್ಟ ಬಳಿಕ ಬಾಂಡ್ ನೀಡಿದ್ದರು. ಬಳಿಕ ಅರ್ಜಿ ಪಡೆದುಕೊಂಡಿದ್ದರು. ರಾಜಸ್ತಾನ ರಾಯಲ್ಸ್ ಕ್ರಿಕೆಟ್ ತಂಡಕ್ಕೆ ಹಣ ಕಟ್ಟುತ್ತಿದ್ದೇವೆ ಎಂದು ಹಂತ ಹಂತವಾಗಿ ಹಣ ಪಡೆದು ಮೋಸ ಮಾಡಿದ್ದಾರೆ. - ರಾಕೇಶ ಯಡೂರೆ, ವಂಚನೆಗೊಳಗಾದ ಯುವ ಕ್ರಿಕೆಟಿಗ