ವಿಜಯಪುರ: ಬಿಸಿಲೂರಿನಲ್ಲಿ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಹಾವಳಿ ಹೋರಾಗಿದೆ. ಇನ್ನೊಂದೆಡೆ ಪೊಲೀಸರ ಕಾರ್ಯಾರಣೆ ಕೂಡ ಜೋರಾಗಿದ್ದು, ಚುರುಕಿನ ಕಾರ್ಯಾಚರಣೆ ನಡೆಸಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು 6 ಜನರ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ.
ಲಖನೌ ಸೂಪರ್ ಜೈಂಟ್ಸ್ ಮತ್ತು ಮುಂಬಯಿ ಇಂಡಿಯನ್ಸ್ ತಂಡಗಳ ನಡುವೆ ಶುಕ್ರವಾರ ನಡೆದ ಟಿ-20 ಕ್ರಿಕೆಟ್ ಪಂದ್ಯಾವಳಿ ಸಂದರ್ಭದಲ್ಲಿ ಬೆಟ್ಟಿಂಗ್ ನಡೆಯುತ್ತಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ. ದೇವರ ಹಿಪ್ಪರಗಿ ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ಪಾಟೀಲ ಪೆಟ್ರೋಲಿಯಮ್ ಹತ್ತಿರ ಬೆಟ್ಟಿಂಗ್‌ನಲ್ಲಿ ತೊಡಗಿದ್ದ ಅನ್ನುಸಿಂಗ್ ಗುಲಾಬಸಿಂಗ್ ಹಜೇರಿ, ಸಂಜೀವ್ ಶಿವಪದ್ಮ ಕೂಟನೂರ, ಪ್ರಕಾಶ ಭೀಮಾಶಂಕರ ಮಲ್ಲಾರಿ, ಚೇತನ ಬಬಲೇಶ್ವರ, ಮುನೀರ ಅಹ್ಮದ್ ಲಾಲಸಾಬ ಮಳಖೇಡ ಎಂಬುವರನ್ನು ವಶಕ್ಕೆ ಪಡೆದಿದ್ದು, ಇವರಿಂದ ಒಟ್ಟು ರೂ.30,000 ಹಾಗೂ ಮೊಬೈಲ್ ವಶಕ್ಕೆ ಪಡೆದಿದ್ದಾರೆ.
ಲಖನೌ ಸೂಪರ್ ಜೈಂಟ್ಸ್ ತಂಡ ಗೆದ್ದರೆ 3,000 ರೂ.ಗಳಿಗೆ 5,000 ರೂ.ಗಳನ್ನು ಕೊಡುವುದಾಗಿಯೂ ಮತ್ತು ಮುಂಬಯಿ ಇಂಡಿಯನ್ಸ್ ತಂಡ ಗೆದ್ದರೆ 4,000 ರೂ.ಗಳಿಗೆ 7,000 ರೂ.ಗಳನ್ನು ಕೊಡುವ ಕರಾರಿನ ಮೇಲೆ ಬೆಟ್ಟಿಂಗ್ ನಡೆಯುತ್ತಿತ್ತು ಎಂದು ಪೊಲೀಸರು ದೇವರಹಿಪ್ಪರಗಿ ಠಾಣೆಯಲ್ಲಿ ದಾಖಲಿಸಿದ ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದ್ದಾರೆ.
ಇನ್ನು ತೊರವಿಯ ತಾಂಡಾ ನಂ.1 ರ ದುರ್ಗಾದೇವಿ ಗುಡಿಯ ಹತ್ತಿರದ ರಸ್ತೆ ಪಕ್ಕದ ಬೀದಿ ದೀಪದ ಕೆಳಗೆ ನಿಂತು ಬೆಟ್ಟಿಂಗ್‌ನಲ್ಲಿ ತೊಡಗಿದ್ದ ಅಪ್ಪು ಚಂದು ರಾಠೋಡ ಎಂಬಾತನನ್ನು ವಶಕ್ಕೆ ಪಡೆದು, ಈತನಿಂದ ಕೃತ್ಯಕ್ಕೆ ಬಳಸಿದ ನೋಟ್‌ಬುಕ್, ಬಾಲ್‌ಪೆನ್ ಮತ್ತಿತರ ಸಾಮಗ್ರಿ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ವಿಜಯಪುರ ಗ್ರಾಮೀಣ ಠಾಣೆಯಲ್ಲಿ ದಾಖಲಿಸಿದ ದೂರಿನಲ್ಲಿ ತಿಳಿಸಿದ್ದಾರೆ.