ಮಳವಳ್ಳಿ ತಾಲೂಕಿನ ಕಲ್ಲಾರೇಪುರ ಗ್ರಾಮದ ಬಳಿ ಕಸಾಪ ಪದಾಧಿಕಾರಿಗಳು ನರೇಗಾ ಕೂಲಿ ಕಾರ್ಮಿಕರನ್ನು 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಹ್ವಾನಿಸಲಾಯಿತು. ಚುಂಚಯ್ಯ, ಸಿದ್ದರಾಜು, ಲಲಿತಮ್ಮ, ರುದ್ರಯ್ಯ, ಮೊಟ್ಟಯ್ಯ, ಜವರಯ್ಯ, ಪುಟ್ಟತಾಯಮ್ಮ, ಪುಟ್ಟಸಿದ್ದಮ್ಮ ಇದ್ದರು. 
ಜಿಲ್ಲೆ

ಸಮ್ಮೇಳನದಲ್ಲಿ ಭಾಗವಹಿಸಲು ಕೂಲಿ ಕಾರ್ಮಿಕರಿಗೆ ಆಹ್ವಾನ

ಮಳವಳ್ಳಿ: ತಾಲೂಕಿನ ಕಲ್ಲಾರೆಪುರ ಗ್ರಾಮದ ಬಳಿ ಗುರುವಾರ ನರೇಗಾ ಕಾಮಗಾರಿ ನಡೆಯುವ ಸ್ಥಳಕ್ಕೆ ಕಸಾಪ ಪದಾಧಿಕಾರಿಗಳು ತೆರಳಿ ಕೂಲಿ ಕಾರ್ಮಿಕರನ್ನು ಡಿ.20 ರಿಂದ ನಡೆಯುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಹ್ವಾನ ನೀಡಿದರು.

ಬಂಡೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕಲ್ಲಾರೆಪುರ ಗ್ರಾಮದ ನರೇಗಾ ಕೂಲಿ ಕಾರ್ಮಿಕರನ್ನು ಗೌರವಪೂರಕವಾಗಿ ಆಹ್ವಾನಿಸಿ ಪ್ರಚಾರ ಜಾಗೃತಿ ಮೂಡಿಸಲಾಯಿತು.

ತಾಲೂಕು ಕಸಾಪ ಗೌರವ ಕಾರ್ಯದರ್ಶಿ ಚುಂಚಣ್ಣ ಮಾತನಾಡಿ, ಮಂಡ್ಯ ಜಿಲ್ಲೆಗೆ 30 ವರ್ಷಗಳ ನಂತರದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಸುವರ್ಣಾವಕಾಶ ಕೂಡಿಬಂದಿದ್ದು, ಇದು ನಮ್ಮೆಲ್ಲರ ಸೌಭಾಗ್ಯ ಎಂದರು.

ಡಿ.20 ರಿಂದ ಮೂರು ದಿನಗಳ ಸಮ್ಮೇಳನ ಮಂಡ್ಯ ನಗರದಲ್ಲಿ ಅದ್ದೂರಿಯಿಂದ ನಡೆಸಲು ಸರ್ಕಾರ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ಅಪ್ಪಟ ಕನ್ನಡಿಗರನ್ನು ಒಳಗೊಂಡಿರುವ ಮಂಡ್ಯ ಜಿಲ್ಲೆ ಎಂಬ ಕೀರ್ತಿಗೆ ಹೆಸರುವಾಸಿಯಾಗಿದ್ದು, ಈ ಸಮ್ಮೇಳನ ಜಿಲ್ಲೆಯ ಜನರ ಸ್ವಾಭಿಮಾನದ ಸಂಕೇತವಾಗಿದೆ. ಹಾಗಾಗಿ ಕುಟುಂಬ ಸಮೇತರಾಗಿ ಸಮ್ಮೇಳನಕ್ಕೆ ಭಾಗವಹಿಸಬೇಕೆಂದು ಮನವಿ ಮಾಡಿದರು.

ನಿಮ್ಮೆಲ್ಲರ ಸುರಕ್ಷತೆಗೆ ತಾಲೂಕು ಮತ್ತು ಜಿಲ್ಲಾ ಆಡಳಿತ ಸಕಲ ಸಿದ್ಧತೆ ನಡೆಸಿಕೊಂಡು ಉಚಿತ ಸಾರಿಗೆ ಹಾಗೂ ಊಟೋಪಚಾರದ ವ್ಯವಸ್ಥೆ ಮಾಡಿಕೊಂಡಿದೆ. ನೀವೆಲ್ಲರೂ ಈ ನುಡಿ ಹಬ್ಬದಲ್ಲಿ ಭಾಗಿಯಾಗಿ ಸಂಭ್ರಮದಿಂದ ನಾಡ ಹಬ್ಬದಂತೆ ಆಚರಿಸುವ ಮೂಲಕ ಜಿಲ್ಲೆಯ ಹಿರಿಮೆಯನ್ನು ದೇಶಕ್ಕೆ ಸಾರಬೇಕೆಂದು ತಿಳಿಸಿದರು.

ಅಲ್ಲದೆ ನಿಮ್ಮ ಮನೆಯ ಮೇಲೆ ಕನ್ನಡ ಧ್ವಜ ಹಾರಿಸಿ ಮೂರು ದಿನಗಳವರೆಗೆ ಮನೆಗಳಲ್ಲಿ ಕನ್ನಡ ಜ್ಯೋತಿಯನ್ನು ಬೆಳಗಿಸುವಂತೆ ಕರೆ ನೀಡಿದರು. ಕಿರುಗಾವಲು ಹೋಬಳಿ ಘಟಕದ ಕಸಾಪ ಅಧ್ಯಕ್ಷ ಸಿದ್ದರಾಜು, ನರೇಗಾ ಕಾಯಕ ಬಂಧುಗಳಾದ ಲಲಿತಮ್ಮ, ರುದ್ರಯ್ಯ, ಮೊಟ್ಟಯ್ಯ, ಜವರಯ್ಯ, ಪುಟ್ಟತಾಯಮ್ಮ, ಪುಟ್ಟಸಿದ್ದಮ್ಮ ಸೇರಿದಂತೆ ಹಲವರು ಇದ್ದರು.