ಉಡುಪಿ: ಪರ್ಯಾಯ ಪುತ್ತಿಗೆ ಪೀಠಾಧೀಶ ಸುಗುಣೇಂದ್ರ ತೀರ್ಥ ಶ್ರೀಪಾದರು ಐತಿಹಾಸಿಕ 4ನೇ ಅವಧಿಯಲ್ಲಿ ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಜನ್ಮಾಷ್ಟಮಿಯನ್ನು ಅದ್ದೂರಿಯಾಗಿ ಆಚರಿಸಲು ಸಿದ್ಧತೆ ನಡೆಸಿದ್ದಾರೆ.
ಆಗಸ್ಟ್ 1ರಿಂದ 24ರ ವರೆಗೆ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು, ಮಾಸೋತ್ಸವದ ಹೆಸರಲ್ಲಿ ವಿವಿಧ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಈ ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರಿಗೆ ಸೋಮವಾರ ಬೆಂಗಳೂರಿನ ರಾಜಭವನದಲ್ಲಿ ಆಮಂತ್ರಣ ಪತ್ರಿಕೆ ನೀಡಿ ಆಹ್ವಾನಿಸಲಾಯಿತು.
ಬೆಂಗಳೂರಿನ ಪುತ್ತಿಗೆ ಮಠದ ಪ್ರತಿನಿಧಿಗಳಾದ ರಾಮಚಂದ್ರ ಉಪಾಧ್ಯಾಯ, ಪ್ರೊ. ರಾಧಾಕೃಷ್ಣ ಮತ್ತು ಶ್ರೀಕಾಂತ್ ಅವರು ಉಡುಪಿ ಶ್ರೀಕೃಷ್ಣನ ಪ್ರಸಾದ ಮತ್ತು ಶ್ರೀಗಳ ಅನುಗ್ರಹ ಮಂತ್ರಾಕ್ಷತೆ ನೀಡಿ, ಉಡುಪಿಗೆ ಆಮಂತ್ರಿಸಿದರು.
ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಆಷಾಢ ಶುದ್ಧ ಹುಣ್ಣಿಮೆಯ ಪ್ರಯುಕ್ತ ಪರ್ಯಾಯ ಪುತ್ತಿಗೆ ಸುಗುಣೆಂದ್ರ ತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಸುಮಂಗಲೆಯರು ಸಾಂಪ್ರದಾಯಿಕವಾಗಿ ಹೊಸ್ತಿಲು ಪೂಜೆ ನೆರವೇರಿಸಿದರು. ಕಿರಿಯ ಶ್ರೀ ಸುಶ್ರೀಂದ್ರ ಸ್ವಾಮೀಜಿ ಉಪಸ್ಥಿತರಿದ್ದರು.