ಹುಬ್ಬಳ್ಳಿ : ಭಾರತದ ಲೋಕಸಭೆ ಚುನಾವಣೆ ವೀಕ್ಷಣೆಗಾಗಿ ಬೇರೆ ದೇಶಗಳ 25 ರಾಜಕೀಯ ಪಕ್ಷಗಳಿಗೆ ಆಹ್ವಾನ ನೀಡಿದ್ದು, ಇದುವರೆಗೆ 15 ಪಕ್ಷಗಳು ಭಾರತಕ್ಕೆ ಆಗಮಿಸಲು ಒಪ್ಪಿಗೆ ನೀಡಿವೆ. ಹೀಗಾಗಿ, ಪ್ರತಿಪಕ್ಷಗಳು ಈ ಸಂದರ್ಭದಲ್ಲಿ ರಾಷ್ಟ್ರೀಯ ಹಾಗೂ ಅಭಿವೃದ್ಧಿಪರ ಚರ್ಚೆ ನಡೆಸಬೇಕೆ ಹೊರತು, ಕೀಳುಮಟ್ಟದ ಭಾಷೆ ಬಳಕೆ ಮಾಡಬಾರದು ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.
ಇಲ್ಲಿನ ಅರವಿಂದ ನಗರದ ಬಿಜೆಪಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೀಳುಮಟ್ಟದ ಭಾಷೆಯನ್ನು ಪ್ರಚಾರದಲ್ಲಿ ಬಳಸುವುದು, ಪ್ರಧಾನಿ ಅವರನ್ನು ಹೀಯಾಳಿಸುವುದನ್ನು ಬಿಟ್ಟು, ಅಭಿವೃದ್ಧಿಪರ ವಿಷಯಗಳನ್ನು ಚುನಾವಣೆ ಪ್ರಚಾರದಲ್ಲಿ ರ್ಚಚಿಸಲಿ ಎಂದರು.
ದೇಶದಾದ್ಯಂತ ಮೋದಿ ಕಾ ಪರಿವಾರ ಅಭಿಯಾನ ಯಶಸ್ವಿಗೊಂಡ ನಂತರ, ಇದೀಗ ‘ನಾಮಿ ಮೋದಿ ಪರಿವಾರ, ಮೋದಿಗಾಗಿ ಭಾನುವಾರ ಮೀಸಲು’ ಎಂಬ ಅಭಿಯಾನ ಆರಂಭಗೊಂಡಿದೆ. ನಿವೃತ್ತ ನೌಕರರು, ನೌಕರರು, ಗೃಹಿಣಿಯರು ಸೇರಿ ಅನೇಕ ಜನ ಪ್ರತಿ ಭಾನುವಾರದಂದು ಬಿಜೆಪಿ ಪರ ಮನೆ ಮನೆಗೆ ತೆರಳಿ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ ಎಂದು ತಿಳಿಸಿದರು.
ಏ. 12 ರಿಂದ ‘ಮನೆಯಂಗಳದಲ್ಲಿ ಸಂವಾದ’ ಎಂಬ ಮತ್ತೊಂದು ಅಭಿಯಾನ ಪ್ರಾರಂಭಗೊಳ್ಳುತ್ತಿದೆ. ಬಡಾವಣೆಗಳಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಮತದಾರರು ತಮ್ಮ ಅನಿಸಿಕೆ ಹಂಚಿಕೊಳ್ಳಲಿದ್ದಾರೆ. ಸಂಶಯ, ಪ್ರಶ್ನೆಗಳನ್ನು ಸಹ ನಿವಾರಿಸಿಕೊಳ್ಳಲಿದ್ದಾರೆ ಎಂದು ಹೇಳಿದರು.
ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ವಿಫಲಗೊಂಡಿವೆ. ಸಮರ್ಪಕ ಕಾರ್ಯಸೂಚಿ ಇಲ್ಲದೇ ಜಾರಿಗೆ ತಂದ ಯೋಜನೆಗಳು ಇವು ಎಂದು ಟೀಕಿಸಿದರು.
ಇಂಡಿ ನಾಯಕತ್ವ ಇಲ್ಲದ ಒಕ್ಕೂಟ. ಬಿಜೆಪಿ ಸಮರ್ಥ ನಾಯಕತ್ವದೊಂದಿಗೆ ಚುನಾವಣೆ ಕಣಕ್ಕೆ ಇಳಿದಿದೆ. ಹೀಗಾಗಿ, ಕರ್ನಾಟಕದ ಎಲ್ಲ 28 ಕ್ಷೇತ್ರಗಳಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಗೆ ಗೆಲುವು ಸಿಗಲಿದೆ. ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗಲಿದ್ದಾರೆ ಎಂದರು.
ಧಾರವಾಡ ಲೋಕಸಭೆ ಕ್ಷೇತ್ರದ ಬಿಜೆಪಿ ಸಂಚಾಲಕ ಮಾ. ನಾಗರಾಜ, ಪ್ರಮುಖರಾದ ಪ್ರಶಾಂತ ಹಾವಣಗಿ, ಪ್ರಮೋದ ಕಾರಕೂನ, ಗುರು ಪಾಟೀಲ ಸುದ್ದಿಗೋಷ್ಠಿಯಲ್ಲಿ ಇದ್ದರು.