ಜಿಲ್ಲೆ

ತೋಟಗಾರಿಕಾ ಸವಲತ್ತು ಪಡೆಯಲು ಅರ್ಜಿ ಆಹ್ವಾನ

ರವಿಕುಮಾರ್ ಪಿ. ಕೆ

ಅರಕಲಗೂಡು: ತೋಟಗಾರಿಕೆ ಇಲಾಖೆಯು 2025-26ನೇ ಸಾಲಿಗೆ ಫಲಾನುಭವಿ ಆಧಾರಿತ ವಿವಿಧ ಯೋಜನೆಯಡಿ ರೈತರಿಂದ ಅರ್ಜಿ ಆಹ್ವಾನಿಸಿದೆ.

ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಅಂಗಾಂಶ ಬಾಳೆ, ತರಕಾರಿ ಬೆಳೆ ವಿಸ್ತರಣೆ, ಹೂವಿನ ಬೆಳೆ ವಿಸ್ತರಣೆ, ಪ್ಲಾಸ್ಟಿಕ್ ಹೊದಿಕೆ, ಕೊಯ್ಲಿನ ನಂತರ ನಿರ್ವಹಣಾ ಘಟಕ, ಯಂತ್ರೋಪಕರಣಗಳ ಖರೀದಿಗೆ ಎಲ್ಲ ವರ್ಗದ ಫಲಾನುಭವಿಗಳಿಗೆ ಸಹಾಯಧನ ನೀಡಲಾಗುವುದು. ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿ ಘಟಕಗಳನ್ನು ಅಳವಡಿಸಿಕೊಳ್ಳುವ ರೈತರಿಗೆ ಸಹಾಯಧನ, ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ರೈತರು ಕೈಗೊಳ್ಳುವ ಬಹುವಾರ್ಷಿಕ ತೋಟಗಾರಿಕೆ ಬೆಳೆಗಳಾದ ತೆಂಗು, ಅಡಕೆ, ಅಂಗಾಂಶ ಬಾಳೆ, ಕಾಳು ಮೆಣಸು, ಜಾಯಿಕಾಯಿ, ಬೆಣ್ಣೆಹಣ್ಣು, ಗುಲಾಬಿ, ಸೀಬೆ ಹಾಗೂ ಇತರ ಬೆಳೆಗಳ ಪ್ರದೇಶ ವಿಸ್ತರಣೆ ಕಾಮಗಾರಿಗಳಿಗೆ ಅನುದಾನ ಲಭ್ಯವಿದೆ. ತಾಳೆ ಬೆಳೆ ಪ್ರದೇಶ ವಿಸ್ತರಣೆ ಯೋಜನೆಯಡಿ ಉಚಿತವಾಗಿ ಸಸಿಗಳನ್ನು ಪೂರೈಸಿ ಸಹಾಯಧನ ನೀಡಲಾಗುವುದು.

ಜೇನುಪೆಟ್ಟಿಗೆ ಖರೀದಿಗೆ ಸಹಾಯಧನ ಸೌಲಭ್ಯ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ರೈತರು ನಿಗದಿತ ದಾಖಲೆಗಳೊಂದಿಗೆ ಜೂನ್ 30 ರೊಳಗೆ ಅರ್ಜಿ ಸಲ್ಲಿಸಿ ಹೆಸರು ನೋಂದಾಯಿಸಿಕೊಳ್ಳುವಂತೆ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಡಿ. ರಾಜೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ದೂ: ಸಂಖ್ಯೆ 08175-221491 ಸಂಪರ್ಕಿಸುವಂತೆ ಕೋರಲಾಗಿದೆ.