ಜಿಲ್ಲೆ

ಮದ್ಯ ವರ್ಜನಾ ಶಿಬಿರದ ಆಮಂತ್ರಣ ಪತ್ರಿಕೆ ಲೋಕಾರ್ಪಣೆ

ಉತ್ತರ ಕನ್ನಡ ಡೆಸ್ಕ್

ಗೋಕರ್ಣ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ವತಿಯಿಂದ ಆಯೋಜಿಸಲಾಗಿರುವ ಬೃಹತ್ ಮದ್ಯ ವರ್ಜನಾ ಶಿಬಿರದ ಆಮಂತ್ರಣ ಪತ್ರಿಕೆಯನ್ನು ಇಲ್ಲಿನ ಅಶೋಕೆಯಲ್ಲಿ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಇತ್ತೀಚೆಗೆ ಲೋಕಾರ್ಪಣೆ ಮಾಡಿದರು.

32ನೇ ಚಾತುರ್ವಸ್ಯ ವ್ರತದಲ್ಲಿರುವ ಶ್ರೀಗಳು ಮಾತನಾಡಿ, ಶ್ರೀ ಕ್ಷೇತ್ರ ಗ್ರಾಮೀಣ ಅಭಿವೃದ್ಧಿಗಾಗಿ ಕೈಗೊಳ್ಳುತ್ತಿರುವ ಪ್ರಯತ್ನಗಳ ಜತೆಗೆ ಗ್ರಾಮಗಳನ್ನು ವ್ಯಸನ ಮುಕ್ತವಾಗಿಸಲು ಆಯೋಜಿಸುತ್ತಿರುವ ಇಂತಹ ಶಿಬಿರಗಳು ಸಾಮಾಜಿಕವಾಗಿ ಬಹು ದೊಡ್ಡ ಕೊಡುಗೆಗಳಾಗಿವೆ ಎಂದರು.

ಇಲ್ಲಿನ ಗಂಗಾವಳಿಯ ಶ್ರೀ ಗಂಗಾಮಾತಾ ಮಂದಿರ ಸಭಾಂಗಣದಲ್ಲಿ ನಡೆಯಲಿರುವ 1976ನೇ ಬೃಹತ್ ಮದ್ಯ ವರ್ಜನಾ ಶಿಬಿರದ ವ್ಯವಸ್ಥಾಪನಾ ಸಮಿತಿ ವತಿಯಿಂದ ಶ್ರೀಗಳನ್ನು ಶಿಬಿರಕ್ಕೆ ಆಮಂತ್ರಿಸಲಾಯಿತು.

ಸಮಿತಿ ಅಧ್ಯಕ್ಷ ರಾಜೇಶ ನಾಯಕ, ಕೋಶಾಧಿಕಾರಿ ಮಹೇಶ ಶೆಟ್ಟಿ, ಯೋಜನೆಯ ಮೇಲ್ವಿಚಾರಕ ದೀಪಕ ನಾಯ್ಕ, ಸ್ಥಳೀಯ ಪಂಚಾಯಿತಿ ಅಧ್ಯಕ್ಷೆ ಸುಮನಾ ಗೌಡ, ಮಾಜಿ ಅಧ್ಯಕ್ಷೆ ವನಿತಾ ಗೌಡ, ಹನೇಹಳ್ಳಿ ಗ್ರಾಪಂ ಅಧ್ಯಕ್ಷ ಸಣ್ಣು ಗೌಡ, ಯೋಜನೆಯ ಒಕ್ಕೂಟದ ಪದಾಧಿಕಾರಿಗಳು, ಸೇವಾ ಪ್ರತಿನಿಧಿಗಳು ಮತ್ತು ನವಜೀವನ ಸಮಿತಿ ಸದಸ್ಯರಿದ್ದರು.