ಜಿಲ್ಲೆ

ಗಳಿಸಿದ ಹಣ ಒಳ್ಳೆಯ ರೀತಿಯಲ್ಲಿ ಹೂಡಿಕೆ ಮಾಡುವುದು ಕಲೆ: ಡಾ.ಕಿರಣ್​ ಆಚಾರ್ಯ ಹೇಳಿಕೆ

ಬೆಂಗಳೂರು: ನಿಯತ್ತಿನ ಹಾದಿಯಲ್ಲಿ ಗಳಿಸಿದ ಹಣವನ್ನು ಉತ್ತಮ ರೀತಿಯಲ್ಲಿ ಹೂಡಿಕೆ ಮಾಡುವುದು ಹಾಗೂ ಗಳಿಸಿದ ಹಣವನ್ನು ಒಳ್ಳೆಯ ರೀತಿಯಲ್ಲಿ ಅನುಭವಿಸುವುದೂ ಒಂದು ಕಲೆ ಎಂದು ಕಸ್ತೂರಿ ಬಾ ಮೆಡಿಕಲ್​ ಕಾಲೇಜಿನ ಆಥೋರ್ಪಡಿಕ್​ ಸರ್ಜನ್​ ಡಾ.ಕಿರಣ್​ ಆಚಾರ್ಯ ಹೇಳಿದ್ದಾರೆ.

ಸಾವಣ್ಣ ಪ್ರಕಾಶನ ಭಾನುವಾರ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಲೇಖಕ ರಂಗಸ್ವಾಮಿ ಮೂಕನಹಳ್ಳಿ ರಚಿಸಿದ "ಲಕ್ಷಾಧಿಪತಿಯ ಗುಣಲಕ್ಷಣಗಳು' ಹಾಗೂ "ಸಿರಿವಂತಿಕೆಗೆ ಸರಳ ಸೂತ್ರಗಳು' (ಹಿಂದಿ,ತಮಿಳು ಅನುವಾದ) ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಓದುವುದು, ನಾನಾ ಕೌಶಲ ಕರಗತ ಮಾಡಿಕೊಳ್ಳುವುದು ಹಣದ ಸಂಪಾದನೆಗೋಸ್ಕರ. ಸಂಪಾದನೆ ಬೆವರದಿಂದ ಆಗಬೇಕೆ ಹೊರತು ಮತ್ತೊಬ್ಬರ ಕಣ್ಣೀರಿನಿಂದಲ್ಲ. ಪ್ರಪಂಚದಲ್ಲಿ ಯಾವುದೂ ಉಚಿತವಾಗಿ ಸಿಗುವುದಿಲ್ಲ. ಒಂದು ವೇಳೆ ಸಿಕ್ಕರೆ ಅದು ಮತ್ತೊಬ್ಬರ ತ್ಯಾಗದಿಂದ ಮಾತ್ರ ಸಾಧ್ಯ. ಹಣದ ಸಂಪಾದನೆ ಅಪಾರದವಲ್ಲ. ಆದರೆ, ಆ ಸಂಪಾದನೆಯಿಂದ ಇನ್ನೊಬ್ಬರಿಗೆ ತೊಂದರೆ, ವಂಚನೆ ಆಗಬಾರದು ಎಂದರು.

ತಮಿಳು ಅನುವಾದಕ ಕೆ.ನಲ್ಲತಂಬಿ ಮಾತನಾಡಿ, ಹಣ ಇಲ್ಲದವನಿಗೆ ಐಹಿಕ ಸುಖವಿಲ್ಲ, ದಯೆ ಇಲ್ಲದವನಿಗೆ ಇಹಲೋಕ ಸುಖವಿಲ್ಲ. ಒಳ್ಳೆಯ ರೀತಿಯಲ್ಲಿ ಖರ್ಚುಮಾಡದೆ ಇರುವ ಹಣ ವ್ಯರ್ಥ ಎಂಬ ಎರಡೂ ಅಂಶಗಳು ಕೃತಿಯಲ್ಲಿ ಇರುವ ಕಾರಣದಿಂದಲೇ ಅನುವಾದ ಕಾರ್ಯವನ್ನು ಕೈಗೆತ್ತಿಕೊಂಡೆ. ಸಿರಿವಂತಿಕೆಗೆ ಸರಳ ಸೂತ್ರಗಳು ಆರ್ಥಿಕ ನೀತಿ, ಶಿಸ್ತನ್ನು ಮನುಷ್ಯನಿಗೆ ಕಲಿಸಿಕೊಡುವ ಗ್ರಂಥವಾಗಿದೆ ಎಂದರು.ಲೇಖಕ ರಂಗಸ್ವಾಮಿ ಮೂಕನಹಳ್ಳಿ, ಪ್ರಕಾಶಕ ಜಮೀಲ್​ ಸೇರಿ ಮತ್ತಿತರರಿದ್ದರು.

ಕೃತಿ ಅನುವಾದ ಕಾರ್ಯ ಸುಲಭವಾಗಿರಲಿಲ್ಲ. ಪ್ರಕಾಶಕರಿಂದ ಹಿಡಿದು ಎಲ್ಲರೂ ಕನ್ನಡದವರೇ ಸೇರಿ ಕನ್ನಡದ ಕೃತಿಯನ್ನು ಹಿಂದಿಗೆ ಅನುವಾದಿಸಿ ಓದುಗರಿಗೆ ನೀಡಿದ ಸಾರ್ಥಕ ಭಾವ ನಮ್ಮೊಳಗಿದೆ. ಇಂತಹ ಕೃತಿಗಳ ಮೂಲಕ ರಂಗಸ್ವಾಮಿ ಅವರು ಜನರಲ್ಲಿ ಆರ್ಥಿಕ ಸಾರತೆಯನ್ನು ಬಿತ್ತುವ ಕೆಲಸ ಮಾಡುತ್ತಿದ್ದಾರೆ.

| ಚಂದ್ರಶೇಖರ ಮದಭಾವಿ,ಲೇಖಕ.