ಜಿಲ್ಲೆ

ಮನೋರಂಜನ್ ಮೈಸೂರಿನ ನಿವಾಸಕ್ಕೆ ತನಿಖಾಧಿಕಾರಿಗಳ ಭೇಟಿ, ಎರಡನೇ ದಿನವೂ ಸತತ 2 ಗಂಟೆ ವಿಚಾರಣೆ

ಮೈಸೂರು: ಸಂಸತ್ ಭವನಕ್ಕೆ ನುಗ್ಗಿ ದಾಂಧಲೆ ನಡೆಸಿದ ಪ್ರಕರಣದ ಎರಡನೇ ಆರೋಪಿ ಮನೋರಂಜನ್ ಮನೆಯಲ್ಲಿ ಮಂಗಳವಾರವೂ ಆತನ ಪಾಲಕರ ವಿಚಾರಣೆ ನಡೆಯಿತು.
ವಿಜಯನಗರದಲ್ಲಿರುವ ಮನೋರಂಜನ್ ನಿವಾಸಕ್ಕೆ ದೆಹಲಿ ಪೊಲೀಸರು ಆಗಮಿಸಿ ತಾಯಿ ಮತ್ತು ಸಹೋದರಿಯನ್ನು ಎರಡು ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆಸಿ ಹೇಳಿಕೆಯನ್ನು ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದಾರೆ. ನಗರಕ್ಕೆ ಸೋಮವಾರ ಆಗಮಿಸಿದ್ದ ದೆಹಲಿಯ ತನಿಖಾ ತಂಡ ಸತತ 7 ಗಂಟೆಗೂ ಹೆಚ್ಚು ಕಾಲ ಪಾಲಕರನ್ನು ವಿಚಾರಣೆಗೆ ಒಳಪಡಿಸಿ ಮನೋರಂಜನಗೆ ಸೇರಿದ ದಾಖಲೆಗಳನ್ನು ವಶಕ್ಕೆ ಪಡೆದಿತ್ತು.
ಮನೆಯಲ್ಲಿ ಮನೋರಂಜನ್ ಪಾಸ್‌ಪೋರ್ಟ್, ಬ್ಯಾಂಕ್ ಪಾಸ್‌ಬುಕ್, ಕೆಲವು ನೋಟ್ ಪುಸ್ತಕ, ತಂದೆ ದೇವರಾಜೇಗೌಡ ಅವರ ಮೊಬೈಲ್ ಸೇರಿದಂತೆ ಕೆಲ ದಾಖಲೆಗಳನ್ನು ವಶಕ್ಕೆ ಪಡೆದು ದೆಹಲಿಗೆ ತೆರಳಿದ್ದರು. ನಾಲ್ವರನ್ನು ಒಳಗೊಂಡ ಮತ್ತೊಂದು ತನಿಖಾ ತಂಡ ಎರಡು ಗಂಟೆಗೂ ಹೆಚ್ಚು ಕಾಲ ಮನೋರಂಜನ್ ತಾಯಿ ಹಾಗೂ ಸಹೋದರಿ ವಿಚಾರಣೆ ನಡೆಸಿತು. ವಿಚಾರಣೆ ಸಮಯದಲ್ಲಿ ತನಿಖಾ ತಂಡಕ್ಕೆ ಮನೋರಂಜನ್ ಕೊಟ್ಟಿರುವ ಹೇಳಿಕೆಗೂ, ಪಾಲಕರು ಕೊಟ್ಟಿರುವ ಹೇಳಿಕೆಗೂ ಸಾಕಷ್ಟು ವ್ಯತ್ಯಾಸಗಳಿರುವ ಕಾರಣಕ್ಕೆ ತಾಯಿ ಮತ್ತು ಸಹೋದರಿ ಹೇಳಿಕೆಯನ್ನು ವಿಡಿಯೋ ಚಿತ್ರೀಕರಣ ಮಾಡಲಾಗಿದೆ.
ಪ್ರಕರಣದ ಮತ್ತೊಬ್ಬ ಆರೋಪಿ ಸಾಗರ್ ಶರ್ಮಾ ಎರಡು ಬಾರಿ ಮನೋರಂಜನ್ ನಿವಾಸಕ್ಕೆ ಬಂದಿರುವ ಬಗ್ಗೆ ಪಾಲಕರು, ದೆಹಲಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದರೆ, ಮನೋರಂಜನ್ ಮೈಸೂರಿಗೆ ಸಾಗರ್ ಶರ್ಮಾ ಬಂದೇ ಇಲ್ಲ ಎನ್ನುವ ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ. ಅಲ್ಲದೇ ಯಾವುದೇ ಉದ್ಯೋಗವಿಲ್ಲದೆ ಓಡಾಡಿಕೊಂಡಿದ್ದ ಮನೋರಂಜನ್‌ಗೆ ಯಾರು ಹಣದ ಸಹಾಯ ಮಾಡುತ್ತಿದ್ದರು ಎಂಬ ಬಗ್ಗೆಯೂ ದೆಹಲಿ ಪೊಲೀಸರಿಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಹೀಗಾಗಿ ಬ್ಯಾಂಕ್ ವಿವರ ಪಡೆದು ಸ್ಟೇಂಟ್‌ಮೆಂಟ್ ಪರಿಶೀಲನೆಗೆ ಮುಂದಾಗಿದ್ದಾರೆ.
ಯಾರೊಂದಿಗೂ ಬೆರೆಯುತ್ತಿರಲಿಲ್ಲ:
ಮನೋರಂಜನ್ ಮನೆಯವರ ಜತೆ ಸರಿಯಾಗಿ ಮಾತನಾಡುತ್ತಿರಲಿಲ್ಲ, ಬೆರೆಯುತ್ತಿರಲಿಲ್ಲ ಎನ್ನಲಾಗಿದೆ. ಊಟ, ತಿಂಡಿ ನಿತ್ಯಕರ್ಮಗಳಿಗೆ ಮಾತ್ರ ಮನೆ ಒಳಗೆ ಬರುತ್ತಿದ್ದ ಆತ ಬಹುತೇಕ ಮಹಡಿ ಮೇಲಿದ್ದ ಕೊಠಡಿಯಲ್ಲಿ ಇರುತ್ತಿದ್ದ. ಬೆಳಗ್ಗೆ ಎದ್ದು ಹೊರಗೆ ಹೋಗಿ ಪಾರ್ಕ್ ಸುತ್ತಿ ಬರುತ್ತಿದ್ದ ಆತ, ಸ್ನಾನ, ತಿಂಡಿ ಮುಗಿಸಿ ಕೊಠಡಿ ಸೇರಿದರೆ ಮತ್ತೆ ಬರುತ್ತಿದ್ದದ್ದು ಮಧ್ಯಾಹ್ನಕ್ಕೆ. ಮತ್ತೆ ಊಟ ಮುಗಿಸಿ ಕೊಠಡಿ ಸೇರಿ ರಾತ್ರಿ ಊಟಕ್ಕೆ ಬರುತ್ತಿದ್ದ. ಮನೆಯ ಮೇಲಿನ ರೂಂನಲ್ಲಿ ಪ್ರತ್ಯೇಕವಾಗಿ ಹೆಚ್ಚು ಸಮಯ ಇರುತ್ತಿದ್ದ. ಮಗನನ್ನು ಮುದ್ದಿನಿಂದ ಬೆಳೆಸಿದ್ದೇ ಇದಕ್ಕೆಲ್ಲಾ ಕಾರಣವಾಯ್ತಲ್ಲ ಎಂದು ವಿಚಾರಣೆ ವೇಳೆ ಪಾಲಕರು ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ದಯವಿಟ್ಟು ಬರಬೇಡಿ: ಹೇಳೊದನ್ನೆಲ್ಲಾ ಹೇಳಿ ಅಗಿದೆ. ನಿಮ್ಮ ಕೈ ಮುಗಿಯುತ್ತೇನೆ, ದಯವಿಟ್ಟು ಬರಬೇಡಿ. ಇಲ್ಲಿಂದ ಹೊರಟು ಹೋಗಿ. ನೀವೆಲ್ಲಾ ನಮ್ಮ ಸ್ನೇಹಿತರು. ಪದೇ ಪದೆ ಬಂದು ತೊಂದರೆ ಕೊಡಬೇಡಿ ಎಂದು ಮನೋರಂಜನ್ ತಂದೆ ಮಾಧ್ಯಮದವರಿಗೆ ಕೈ ಮುಗಿದು ಬೇಡಿಕೊಂಡರು.