ಹನೂರು: ಮಲೆಮಹದೇಶ್ವರ ವನ್ಯಜೀವಿ ಧಾಮ ವ್ಯಾಪ್ತಿಯ ಹನೂರು ಭಪರ್ ವಲಯದ ಪಚ್ಚೆದೊಡ್ಡಿ ಅರಣ್ಯ ಪ್ರದೇಶದಲ್ಲಿ ಗಂಡು ಹುಲಿ ಹತ್ಯೆಯಾದ ಸ್ಥಳಕ್ಕೆ ಶನಿವಾರ ಪಿಸಿಸಿಎಫ್ ಸ್ಮಿತಾ ಬಿಜ್ಜೂರು ಹಾಗೂ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆಯನ್ನು ಆರಂಭಿಸಿಸಿದೆ.
ಮಲೆಮಹದೇಶ್ವರ ವನ್ಯಜೀವಿ ಧಾಮದ ಹೂಗ್ಯಂ ವಲಯ ಅರಣ್ಯದ ಮಿಣ್ಯಂ ಪ್ರದೇಶದಲ್ಲಿ ಜೂ.26ರಂದು ವಿಷ ಪ್ರಾಶನದಿಂದ ತಾಯಿ ಹುಲಿ ಹಾಗೂ 4 ಹುಲಿ ಮರಿಗಳು ಮೃತಪಟ್ಟದ್ದವು. ಇದೀಗ ಪಚ್ಚೆದೊಡ್ಡಿ ಅರಣ್ಯ ಪ್ರದೇಶದಲ್ಲಿ ಹುಲಿ ಹತ್ಯೆಯಾಗಿರುವುದು ಇದರ ನಿರಂತರತೆಯನ್ನು ದೃಢಪಡಿಸಿತು. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಶುಕ್ರವಾರ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಅವರಿಗೆ ಟಿಪ್ಪಣಿ ಆದೇಶ ಹೊರಡಿಸಿದ್ದರು.
ಪಿಸಿಸಿಎಫ್ ಸ್ಮಿತಾ ಬಿಜ್ಜೂರು ಅವರ ನೇತೃತ್ವದಲ್ಲಿ ತಂಡವೊಂದನ್ನು ರಚಿಸಿ ಸ್ಥಳಕ್ಕೆ ಖುದ್ದು ಭೇಟಿ ನೀಡಿ ಪರಿಶೀಲಿಸಲು ಸೂಚಿಸಿದ್ದರು. ಜತೆಗೆ ಈ ಧಾಮದಲ್ಲಿ ಕಳೆದ ಕಳೆದ 3 ವರ್ಷದ ಅವಧಿಯಲ್ಲಿ ದಾಖಲಾಗಿರುವ ಎಲ್ಲ ಕಳ್ಳಬೇಟೆ ಪ್ರಕರಣಗಳ ಬಗ್ಗೆಯೂ ಗಮನಹರಿಸಿ ಹಿಂದಿನ ತನಿಖಾ ವರದಿಗಳನ್ನು ಪರಮರ್ಶಿಸಬೇಕು. ಮುಂದಿನ ದಿನಗಳಲ್ಲಿ ಈ ಧಾಮದಲ್ಲಿ ಇಂತಹ ಘಟನೆ ಮರುಕಳುಹಿಸದಂತೆ ಕ್ರಮವಹಿಸಬೇಕು. ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಹಾಗೂ ಕಳ್ಳಬೇಟೆಗಾರರ ವಿರುದ್ಧ ಸೂಕ್ತ ಕ್ರಮದ ಶಿಫಾರಸ್ಸಿನೊಂದಿಗೆ 8 ದಿನಗಳಲ್ಲಿ ವರದಿ ಸಲ್ಲಿಸಬೇಕು. ಅಲ್ಲದೆ ಹುಲಿ ಹಂತಕರನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಪಿಸಿಸಿಎಫ್ ಸ್ಮಿತಾ ಬಿಜ್ಜೂರು ಅವರ ನೇತೃತ್ವದಲ್ಲಿ ತಂಡ ಸ್ಥಳೀಯ ಅಧಿಕಾರಿಗಳೊಂದಿಗೆ ಕೃತ್ಯ ನಡೆದ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದು ಪರಿಶೀಲನೆ ನಡೆಸಿತು. ಪಚ್ಚೆದೊಡ್ಡಿ ಗ್ರಾಮಕ್ಕೂ ಭೇಟಿ ನೀಡಿ ಅಗತ್ಯ ಮಾಹಿತಿ ಕಲೆ ಹಾಕಿತು. ತನಿಖಾಧಿಕಾರಿಗಳ ತಂಡ ಹಾಗೂ ಅಧಿಕಾರಿಗಳು ಚರ್ಚೆ ನಡೆಸಿದ್ದು, ತನಿಖೆ ಆರಂಭಿಸಲಾಗಿದೆ.
ಈ ಸಂದರ್ಭದಲ್ಲಿ ಮೈಸೂರು ವಿಭಾಗೀಯ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್‌ಕುಮಾರ್, ಡಿಸಿಎಫ್‌ಗಳಾದ ಮಲೆಮಹದೇಶ್ವರ ವನ್ಯಜೀವಿ ಧಾಮದ ಭಾಸ್ಕರ್, ಕಾವೇರಿ ವನ್ಯಜೀವಿ ಧಾಮದ ಸುರೇಂದ್ರ, ಎಸಿಎಫ್‌ಗಳಾದ ಮನೋಹರ್ ಸ್ವಪ್ನಿಲ್ ಅಹಿರೆ, ವಿರಾಜ್ ಹೊಸೂರ್, ಆರ್‌ಎಫ್‌ಒ ನಾಗರಾಜು ಇತರರು ಇದ್ದರು.