ಜಿಲ್ಲೆ

ಯಂತ್ರೋಪಕರಣಗಳ ಮೇಲೆ ಹೆಚ್ಚಿನ ಬಂಡವಾಳ ಹೂಡಿ

Dharwada - Santosh Vaidya

ಹುಬ್ಬಳ್ಳಿ: ಧಾರವಾಡ ಜಿಲ್ಲೆಗೆ ಬೃಹತ್ ಉದ್ಯಮಗಳು ಕಾಲಿಡುತ್ತಿದೆ. ಇದರಿಂದ ಇಲ್ಲಿರುವ ಹಾಗೂ ಮುಂದೆ ಸ್ಥಾಪನೆಯಾಗಲಿರುವ ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಅನುಕೂಲವಾಗಲಿದೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಆರ್.ಎಚ್. ಶಿವಪುತ್ರಪ್ಪ ಹೇಳಿದರು.

ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ಹಾಗೂ ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ ಜಂಟಿಯಾಗಿ ಹುಬ್ಬಳ್ಳಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಉದ್ದಿಮೆದಾರರ ಸಮಾವೇಶದಲ್ಲಿ ಮಾತನಾಡಿದ ಅವರು, ಧಾರವಾಡದ ಮುಮ್ಮಿಗಟ್ಟಿ ಎಫ್​ಎಂಸಿಜಿ ಕ್ಲಸ್ಟರ್​ನಲ್ಲಿ ಏಕಸ್​ನ ಒಂದು ಘಟಕ ಉತ್ಪಾದನಾ ಚಟುವಟಿಕೆ ಆರಂಭಿಸಿದೆ. ಇನ್ನು ಹಲವು ಕೈಗಾರಿಕೆಗಳು ಬರಲಿವೆ. ನೂತನ ಕೈಗಾರಿಕೆ ನೀತಿಯು ಬಂಡವಾಳ ಹೂಡಿಕೆಯ ಬದಲು ಕಂಪನಿಯ ವಹಿವಾಟಿನ ಮೇಲೆ ಸಬ್ಸಿಡಿ ನೀಡುತ್ತದೆ. ಇದು ಉತ್ಪಾದಕತೆಗೆ ಉತ್ತೇಜನಕಾರಿಯಾಗಿವೆ ಎಂದರು.

ಧಾರವಾಡ ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪನೆ ಮಾಡುವವರು ಕಟ್ಟಡಗಳ ಮೇಲೆ ಹೆಚ್ಚು, ಯಂತ್ರೋಪಕರಣಗಳ ಮೇಲೆ ಕಡಿಮೆ ಬಂಡವಾಳ ಹೂಡಿಕೆ ಮಾಡುತ್ತಾರೆ. ಬೆಳಗಾವಿ, ಅನ್ಯ ಜಿಲ್ಲೆಗಳಿಗೆ ಈ ಪರಿಸ್ಥಿತಿ ಭಿನ್ನವಾಗಿದೆ. ಯಂತ್ರೋಪಕರಣಗಳ ಮೇಲೆ ಹೆಚ್ಚು ಹೂಡಿಕೆ ಮಾಡಿದರೆ ಉತ್ಪಾದನಾ ಚಟುವಟಿಕೆಗಳು ಅಧಿಕಗೊಳ್ಳಲಿದೆ. ನನ್ನ ಪ್ರಕಾರ ಯಂತ್ರೋಪಕರಣ ಹಾಗೂ ಕಟ್ಟಡಗಳ ಮೇಲಿನ ಹೂಡಿಕೆ 60-40 ರ ಅನುಪಾತದಲ್ಲಿ ಇರಬೇಕು ಎಂದು ಅಭಿಪ್ರಾಯಿಸಿದರು.

ಉದ್ಘಾಟಿಸಿದ ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಜಗದೀಶ ಮಠದ ಮಾತನಾಡಿ, 20-30 ವರ್ಷಗಳ ಹಿಂದೆ ಕೈಗಾರಿಕೆಗಳ ಸ್ಥಾಪನೆಗೆ ಸಾಲ ಸೌಲಭ್ಯ ಪಡೆಯಲು ನವೋದ್ಯಮಿಗಳು ಸಾಕಷ್ಟು ಕಷ್ಟಪಡಬೇಕಿತ್ತು. ಇಂದು ಪರಿಸ್ಥಿತಿ ಬದಲಾಗಿದೆ. ಕೆಎಸ್ ಎಫ್​ಸಿ ಮನೆ ಬಾಗಿಲಿಗೆ ಬರುತ್ತಿದೆ. ಅವರ ಬಳಿ ಬಹಳ ಯೋಜನೆಗಳಿವೆ. ಯುವ ಉದ್ಯಮಿಗಳು ಅದರ ಪ್ರಯೋಜನ ಪಡೆದುಕೊಳ್ಳಬೇಕು. ಕೇಂದ್ರ ಸರ್ಕಾರ ಮೇಕ್ ಇನ್ ಇಂಡಿಯಾ, ಆತ್ಮ ನಿರ್ಭರ ಭಾರತ ಯೋಜನೆಗಳು ಅನುಕೂಲಕರವಾಗಿವೆ ಎಂದರು.

ಜವಳಿ ಇಲಾಖೆಯ ನಿರ್ದೇಶಕ ಸೈಯದ್ ನಯೀಮ್ ಕೆಎಸ್​ಎಫ್​ಸಿ ಎಜಿಎಂ ಸಿ. ಎಂ. ಶಶಿಕಾಂತ, ಧಾರವಾಡ ಶಾಖೆ ವ್ಯವಸ್ಥಾಪಕ ಎನ್. ಭಾಸ್ಕರ ಇದ್ದರು. ಧಾರವಾಡ, ಬೆಳಗಾವಿ, ಗದಗ, ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಉದ್ದಿಮೆದಾರರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.