ಮೈಸೂರು: ನವೋದ್ಯಮಿಗಳು ಉದ್ಯೋಗ ಸೃಷ್ಟಿಸಿ ತಂತ್ರಜ್ಞಾನ ಹಾಗೂ ಸಂಶೋಧನೆಗೆ ಹೆಚ್ಚು ಬಂಡವಾಳ ಹೂಡಿಕೆ ಮಾಡಿದರೆ ಮಾತ್ರ ಉದ್ಯಮ ಬೆಳೆಯುತ್ತದೆ ಎಂದು ಹಿರಿಯ ಉದ್ಯಮಿ, ರಂಗರಾವ್ ಆ್ಯಂಡ್ ಸನ್ಸ್ ಕಂಪನಿ ಸಿಇಒ ಅರ್ಜುನ್ ರಂಗ ಹೇಳಿದರು.
ನಗರದ ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ (ಸಿಎಫ್‌ಟಿಆರ್‌ಐ) ಸೋಮವಾರ ಆಯೋಜಿಸಿದ್ದ ರಾಷ್ಟ್ರೀಯ ತಂತ್ರಜ್ಞಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು
ನಮ್ಮ ಕಂಪನಿಯು ಅಗರಬತ್ತಿಯಿಂದ ಬಾಹ್ಯಾಕಾಶದಲ್ಲಿ ಬಳಕೆ ಮಾಡುವ ವಸ್ತುಗಳ ಉತ್ಪಾದನೆ ಮಾಡುವ ವರೆಗೂ ಬೆಳೆದಿದೆ ಎಂದರು. ನಮ್ಮ ತಾತ ರಂಗರಾವ್ 1948ರಲ್ಲಿ ಕೊಡಗಿನಿಂದ ಮೈಸೂರಿಗೆ ಬಂದು ಸಂತೆಪೇಟೆಯಲ್ಲಿ 5 ರೂ. ಬಾಡಿಗೆಗೆ ಮಳಿಗೆ ಪಡೆದು ಅಗರಬತ್ತಿ ಮಾರಾಟ ಆರಂಭ ಮಾಡಿದರು. ಅವರು ಇಷ್ಟಕ್ಕೆ ಸಮಾಧಾನಗೊಳ್ಳಲಿಲ್ಲ. ಸುಗಂಧ ದ್ರವ್ಯ ತಯಾರಿಸುವ ತಂತ್ರಜ್ಞಾನದ ಪುಸ್ತಕಗಳನ್ನು ಫ್ರಾನ್ಸ್‌ನಿಂದ ತರಿಸಿಕೊಂಡರು. ಅದು ಇಲ್ಲಿಗೆ ಬರಲು 14 ತಿಂಗಳು ಹಿಡಿಯಿತು. ಅವುಗಳ ಅಧ್ಯಯನ ನಡೆಸಿ ಪ್ರಯೋಗಾಲಯ ಶುರು ಮಾಡಿದರು. ಬಳಿಕ ಸೈಕಲ್ ಅಗರಬತ್ತಿ ಕಂಪನಿ ಸ್ಥಾಪನೆ ಮಾಡಿದರು ಎಂದು ಸ್ಮರಿಸಿಕೊಂಡರು
ರಂಗ್‌ಸನ್ಸ್ ಏರೋಸ್ಪೇಸ್ ತಯಾರಿಸುವ ಏವಿಯಾನಿಕ್ ಹೋಸೆಸ್, ಪೈಪುಗಳು ಏರ್‌ಬಸ್‌ನ ಜೆಟ್ ಇಂಜಿನ್‌ನಲ್ಲಿ ಉಪಯೋಗಿಸಲಾಗುತ್ತಿದೆ. ರೋಲ್‌ರಾಯ್ಸ ಸೇರಿದಂತೆ ಹತ್ತಾರು ವಾಹನ ತಯಾರಿಕಾ ಕಂಪನಿಗಳು ಇದನ್ನು ಬಳಕೆ ಮಾಡುತ್ತಿವೆ. ಇಸ್ರೋದ ಚಂದ್ರಯಾನ, ಸಮುದ್ರಯಾನದಲ್ಲೂ ನಾವು ಉತ್ಪಾದನೆ ಮಾಡಿದ ಮೈಸೂರಿನ ಸಾಧನಗಳು ಬಳಕೆಯಾಗುತ್ತಿವೆ ಎಂದು ತಿಳಿಸಿದರು.
ನಮ್ಮ ಸಂಸ್ಥೆ ರಕ್ಷಣಾ ಕ್ಷೇತ್ರವನ್ನೂ ಪ್ರವೇಶ ಮಾಡಿದೆ. ಏರೋಸ್ಪೇಸ್, ಎಲೆಕ್ಟ್ರಾನಿಕ್ಸ್, ಆಹಾರೋದ್ಯಮ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಉದ್ಯಮಗಳನ್ನು ನಿರ್ವಹಿಸುತ್ತಿದೆ. ತಂತ್ರಜ್ಞಾನವನ್ನು ಕಾಲ ಕಾಲಕ್ಕೆ ಅಳವಡಿಕೆ ಮಾಡಿ ಕೊಂಡಿದ್ದರಿಂದ ಈ ಸಾಧನೆ ಸಾಧ್ಯವಾಗಿದೆ ಎಂದರು.
ಬಿದಿರಿನ ಕಡ್ಡಿ, ಅದಕ್ಕೆ ಗಂಧದ ಲೇಪನ ಮಾಡಲು ತಂತ್ರಜ್ಞಾನ ಏಕೆ ಬೇಕೆಂದು ನಮ್ಮ ವಂಶದ ಹಿರಿಯರು ಸುಮ್ಮನೆ ವ್ಯಾಪಾರ ಮಾಡಿಕೊಂಡಿದ್ದರೆ ಇಂದು ನಮ್ಮ ಸಂಸ್ಥೆ ಇಷ್ಟು ದೊಡ್ಡದಾಗಿ ಬೆಳೆಯುತ್ತಿರಲಿಲ್ಲ. ಈಗ ವರ್ಷಕ್ಕೆ ಸೈಕಲ್ ಕಂಪನಿಯ 1,300 ಕೋಟಿ ಅಗರಬತ್ತಿ ಉರಿಯುತ್ತಿದೆ. ಸಾವಿರಾರು ಜನರಿಗೆ ಉದ್ಯೋಗ ಕಲ್ಪಿಸಿದ್ದು, 25 ಸಾವಿರ ಕುಟುಂಬಗಳು ಅವಲಂಬಿಸಿವೆ ಎಂದರು. ಸಂಸ್ಥೆ ನಿರ್ದೇಶಕಿ ಶ್ರೀದೇವಿ ಅನ್ನಪೂರ್ಣಾ ಸಿಂಗ್, ವಿಜ್ಞಾನಿ ಅಶುತೋಷ್ ಎ.ಇನಾಂದಾರ್ ಪಾಲ್ಗೊಂಡಿದ್ದರು.
ಸಿಎಫ್‌ಟಿಆರ್‌ಐನ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ಉದ್ಯಮ ಸ್ಥಾಪಿಸಲು ಬೆಂಗಳೂರಿನ ಡಿಡಿಆರ್ ವೆಂಚರ್ಸ್, ಸನ್ ಎನ್ವಿರೊ ಮತ್ತು ಕೋಲ್ಕತ್ತದ ಎಂಸಿಪಿಐ ಕಂಪನಿಗಳು ಒಡಂಬಡಿಕೆ ಮಾಡಿಕೊಂಡವು.
ಸಂಸ್ಥೆಯು ಅಭಿವೃದ್ಧಿ ಪಡಿಸಿದ ಕಾಫಿ ಸ್ವಾದ, ಗ್ಲೂಕೊಸೈಡಸ್ ಹಾಗೂ ಆಹಾರ ತ್ಯಾಜ್ಯ ಬಳಸಿ ಜೈವಿಕ ಅನಿಲ ಉತ್ಪಾದನೆಯ ತಂತ್ರಜ್ಞಾನವನ್ನು ಕ್ರಮವಾಗಿ ಈ ಕಂಪನಿಗಳು ಪಡೆದಿವೆ. ಈ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಜತೆಗೆ, ವಿವಿಧ ಆಹಾರೋತ್ಪನ್ನಗಳನ್ನು ತಯಾರಿಸಲು ಏಳು ಜನರಿಗೆ ಪರವಾನಗಿಯನ್ನು ನೀಡಲಾಯಿತು.