ಚಿಕ್ಕೋಡಿ: ಮಾನವಕುಲದ ಒಳಿತಿಗಾಗಿ ವಿಜ್ಞಾನ, ತಂತ್ರಜ್ಞಾನದ ಆವಿಷ್ಕಾರಗಳು ನಮಗೆಲ್ಲ ದಿಕ್ಸೂಚಿಯಾಗಿವೆ ಎಂದು ಜಪಾನಿನ ಸಾಗಾ ವಿಶ್ವವಿದ್ಯಾಲಯದ ಪ್ರೊ. ಮಾಸಾಕಿ ಹರಿಟೋನಿ ಹೇಳಿದರು.
ಇಲ್ಲಿನ ಕೆಎಲ್‌ಇ ಸಂಸ್ಥೆಯ ಬಸವಪ್ರಭು ಕೋರೆ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಜಾಗತಿಕ ಅಭಿವೃದ್ಧಿಗೆ ವಿಜ್ಞಾನಕ್ಕಿಂತ ಕೊಡುಗೆ ನೀಡುವ ಶಕ್ತಿ ಬೇರೊಂದಿಲ್ಲ. ಅದಕ್ಕೆ ಭಾರತದ ವಿಜ್ಞಾನಿಗಳ ಕೊಡುಗೆಯೂ ಅಪಾರ ಎಂದು ಶ್ಲಾಸಿದರು.
ಭಾರತ ಮತ್ತು ಜಪಾನ ವಿಜ್ಞಾನದ ಹೊಸ ಸಂಶೋಧನೆಯಲ್ಲಿ ಅವಿರತವಾಗಿ ತೊಡಗಿಸಿಕೊಳ್ಳುತ್ತಿವೆ. ಸಂಶೋಧನೆ ಮಾನವನ ಆರೋಗ್ಯ ಹೆಚ್ಚಿಸಲು ಶ್ರಮಿಸುತ್ತದೆ ಎಂದರು.
ಆರ್‌ಸಿಯು ರಸಾಯನಶಾಸ ವಿಭಾಗದ ಸಹಪ್ರಾಧ್ಯಾಪಕ ಡಾ.ಗುರುಬಸವರಾಜ ಮಾತನಾಡಿ, ಸರ್ ಸಿ.ವಿ. ರಾಮನ್ ಅಗಾಧ ಜ್ಞಾನದಿಂದ ರಾಮನ್ ಪರಿಣಾಮ ಸಿದ್ಧಾಂತ ಕೊಡುಗೆಯಾಗಿ ಕೊಟ್ಟರು. ಅವರಲ್ಲಿನ ಆಸಕ್ತಿ ಮತ್ತು ಕುತೂಹಲ ನೊಬೆಲ್ ಪ್ರಶಸ್ತಿ ಪಡೆಯಲು ಕಾರಣವಾಯಿತು ಎಂದರು.
ಕೆಎಲ್‌ಇ ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ. ಪ್ರಸಾದ ರಾಂಪುರೆ ಮಾತನಾಡಿ, ಆರ್ಟಿಫಿಸಿಯಲ್ ಇಂಟೆಲಿಜೆನ್ಸ್ ಕ್ಷೇತ್ರವು ವಿಪುಲವಾದ ಉದ್ಯೋಗ ಮತ್ತು ವಿದ್ಯಾರ್ಥಿಗಳಿಗೆ ಸವಾಲು ಮತ್ತು ಜವಾಬ್ದಾರಿ ಹೆಚ್ಚಿಸಿದೆ ಎಂದರು. ಜಪಾನ ಸರ್ಕಾರ ಜಗತ್ತಿನ ವಿವಿಧ ದೇಶಗಳ ವಿದ್ಯಾರ್ಥಿಗಳಿಗೆ ಸಂಶೋಧನಾ ಪ್ರಾಜೆಕ್ಟ್‌ಗಳಿಗೆ ಉಚಿತವಾಗಿ ಸಂಶೋಧನಾ ಅರ್ಜಿಗಳ ವೆಚ್ಚ ಮತ್ತು ಪ್ರೋತ್ಸಾಹ ನೀಡುತ್ತಿದೆ. ಕಾಲೇಜಿನ ವಿದ್ಯಾರ್ಥಿಗಳು ಅವಕಾಶಗಳ ಸದುಪಯೋಗ ಪಡೆಯಬೇಕು ಎಂದರು.
ಸಂಘಟಕ ಡಾ. ಸಿದ್ದಲಿಂಗ ಮಟ್ಟಪ್ಪನವರ, ಪ್ರಾಚಾರ್ಯ ಡಾ. ಬಿ.ಜಿ ಕುಲಕರ್ಣಿ, ವಸುಂಧರಾ ಪಾಟೀಲ, ಶ್ರೇಯಾ ಹುದ್ದಾರ, ಪ್ರಿಯಾ ಪಾಟೀಲ ಇತರರಿದ್ದರು.